ಬಳಕೆಯಾಗದ ಬಿಲಿಯನ್‌ಗಟ್ಟಲೆ ಭಾರತೀಯ ರುಪಾಯಿ ಇಟ್ಟುಕೊಂಡಿದ್ದೇನೆಂದ ರಷ್ಯಾ

ರುಪಾಯಿಯಲ್ಲಿ ವಿದೇಶೀ ವ್ಯಾಪಾರ ಮುಂದುವರಿಯುವಂತೆ ಮಾಡಲು ಮತ್ತು ಕಚ್ಚಾತೈಲದ ಪೂರೈಕೆ ನಡೆಯುತ್ತಿರುವಂತೆ ಮಾಡಲು ಭಾರತದ ಪೂರೈಕೆದಾರರು ರಷ್ಯಾದ ಬ್ಯಾಂಕ್‌ಗಳಾದ ಸ್ಬೆರ್‌ಬ್ಯಾಂಕ್ ಪಿಜೆಎಸ್‌ಸಿ ಹಾಗೂ ವಿಟಿಬಿ ಬ್ಯಾಂಕ್ ಪಿಜೆಎಸ್‌ಸಿಗಳೊಡನೆ ವಿಶೇಷ ವೋಸ್ತ್ರೋ ಖಾತೆಗಳನ್ನು ತೆರೆದಿವೆ.

Written by - Girish Linganna | Edited by - Yashaswini V | Last Updated : May 6, 2023, 09:19 AM IST
  • • ಲವ್ರೋವ್ ಅವರ ಪ್ರಕಾರ, ರಷ್ಯಾ ಶೀಘ್ರವಾಗಿ ಭಾರತೀಯ ರುಪಾಯಿಯನ್ನು ಬೇರೊಂದು ಹಣಕ್ಕೆ ಬದಲಾಯಿಸಬೇಕು.
  • • ಭಾರತ ಮತ್ತು ರಷ್ಯಾಗಳು ದಂಡದ ಭಯದ ನಡುವೆಯೂ ಈ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನ ನಡೆಸುತ್ತಿವೆ.
ಬಳಕೆಯಾಗದ ಬಿಲಿಯನ್‌ಗಟ್ಟಲೆ ಭಾರತೀಯ ರುಪಾಯಿ ಇಟ್ಟುಕೊಂಡಿದ್ದೇನೆಂದ ರಷ್ಯಾ title=

ಭಾರತೀಯ ಬ್ಯಾಂಕುಗಳಲ್ಲಿ ರಷ್ಯಾ ಈಗಾಗಲೇ ಬಿಲಿಯನ್‌ಗಟ್ಟಲೆ ಭಾರತೀಯ ರುಪಾಯಿಗಳನ್ನು ಸಂಗ್ರಹಿಸಿಟ್ಟಿದ್ದು, ಆ ಹಣವನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವರಾದ ಸರ್ಗೇ ಲವ್ರೋವ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ಭಾರತದೊಡನೆ ವ್ಯಾಪಾರ ಅಸಮತೋಲನವನ್ನು ಬೆರಳು ಮಾಡಿ ತೋರಿದ್ದಾರೆ.

ಗೋವಾದಲ್ಲಿ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಧ್ಯಮಗಳೊಡನೆ ಮಾತನಾಡಿದ ಲವ್ರೋವ್, "ನಮಗೆ ಇದೊಂದು ಸಮಸ್ಯೆಯಾಗಿದೆ. ನಾವು ಹೇಗಾದರೂ ಈ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಆದರೆ ಅದಕ್ಕಾಗಿ ಭಾರತೀಯ ರುಪಾಯಿಯಲ್ಲಿರುವ ಹಣವನ್ನು ಬೇರೊಂದು ದೇಶದ ಹಣಕ್ಕೆ ಪರಿವರ್ತಿಸಬೇಕಾಗಿದ್ದು, ನಾವು ಈ ಕುರಿತು ಚರ್ಚೆ ನಡೆಸುತ್ತಿದ್ದೇವೆ" ಎಂದಿದ್ದಾರೆ.

ವಾಣಿಜ್ಯ ಮತ್ತು ಉದ್ಯಮ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 2022-23ರ ಹಣಕಾಸು ವರ್ಷದ ಮೊದಲ 11 ತಿಂಗಳಲ್ಲಿ ರಷ್ಯಾಗೆ ಭಾರತದ ಒಟ್ಟಾರೆ ರಫ್ತು 11.6% ಕುಸಿತ ಕಂಡಿದ್ದು, 2.8 ಬಿಲಿಯನ್ ಡಾಲರ್‌ ಮೌಲ್ಯಕ್ಕೆ ತಲುಪಿದೆ. ಆದರೆ ರಷ್ಯಾದಿಂದ ಆಮದು ಐದು ಪಟ್ಟು ಹೆಚ್ಚಾಗಿದ್ದು, 41.56 ಬಿಲಿಯನ್ ಡಾಲರ್ ಆಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಉಕ್ರೇನ್ ಯುದ್ಧಕ್ಕೆ ಪ್ರತಿಯಾಗಿ, ಪಾಶ್ಚಾತ್ಯ ರಾಷ್ಟ್ರಗಳು ತಿರಸ್ಕರಿಸಿದ್ದ ತೈಲವನ್ನು ಭಾರತೀಯ ತೈಲಾಗಾರಗಳು ಕಡಿಮೆ ಬೆಲೆಗೆ ಖರೀದಿಸಿದ್ದರಿಂದ ಆಮದು ಮೌಲ್ಯ ಇಷ್ಟೊಂದು ಹೆಚ್ಚಳ ಕಂಡಿದೆ.

ಇದನ್ನೂ ಓದಿ- ಸೋರಿಕೆಯಾದ ರಹಸ್ಯ ದಾಖಲೆಗಳು: ಅಮೆರಿಕಾದಲ್ಲಿ ಮಹಾನ್ ಗುಪ್ತಚರ ಉಲ್ಲಂಘನೆ?

ವೊರ್ಟೆಕ್ಸಾ ಲಿಮಿಟೆಡ್ ಎಂಬ ಮಾಹಿತಿ ವಿಶ್ಲೇಷಣಾ ಸಂಸ್ಥೆಯ ಪ್ರಕಾರ, ರಷ್ಯಾದಿಂದ ಭಾರತದ ಕಚ್ಚಾ ತೈಲ ಆಮದು ಎಪ್ರಿಲ್ ತಿಂಗಳಲ್ಲಿ ಪ್ರತಿದಿನವೂ ದಾಖಲೆಯ 1.68 ಮಿಲಿಯನ್ ಬ್ಯಾರಲ್ ಆಗಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಆರು ಪಟ್ಟು ಹೆಚ್ಚಾಗಿದೆ.

ಆರಂಭದಲ್ಲಿ ರಷ್ಯಾದ ಬ್ಯಾಂಕ್‌ಗಳ ಮೇಲೆ ನಿರ್ಬಂಧ ಹೇರಿ, ಸ್ವಿಫ್ಟ್ ಮೆಸೇಜಿಂಗ್ ವ್ಯವಸ್ಥೆಯ ಮೂಲಕ ನಡೆಸುವ ಹಣಕಾಸು ವ್ಯವಹಾರವನ್ನು ನಿಷೇಧಿಸಿದ ಬಳಿಕ ರಷ್ಯಾ ಭಾರತದೊಡನೆ ದೇಶೀಯ ಹಣದಲ್ಲಿ ವ್ಯಾಪಾರ ನಡೆಸುವ ಪ್ರಸ್ತಾಪ ಮುಂದಿಟ್ಟಿತು.

ಆದರೆ ಯುದ್ಧ ಆರಂಭಗೊಂಡ ಕೆಲ ಸಮಯದಲ್ಲಿ ರೂಬೆಲ್ ಮೌಲ್ಯದ ಅಸ್ಥಿರತೆಯ ಪರಿಣಾಮವಾಗಿ ತೈಲ ಆಮದಿಗೆ ರೂಪಾಯಿ - ರೂಬಲ್ ವ್ಯವಹಾರವನ್ನು ಕೈಬಿಡಲಾಯಿತು. ಉಕ್ರೇನ್ ಮೇಲಿನ ದಾಳಿಯ ಬಳಿಕ ಭಾರತ ಮತ್ತು ರಷ್ಯಾದ ಸಂಬಂಧವನ್ನು ಕಡಿತಗೊಳಿಸುವ ಅಮೆರಿಕಾದ ಪ್ರಯತ್ನಗಳನ್ನು ಭಾರತ ವಿರೋಧಿಸಿದೆ.

ನಿಧಿ ಬಳಕೆ ಸ್ಥಗಿತ:
ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ಇನ್ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಎಕಾನಮಿಕ್ಸ್ ಆ್ಯಂಡ್ ಫೈನಾನ್ಸ್ ಮುಖ್ಯಸ್ಥರಾದ ಅಲೆಕ್ಸಾಂಡರ್ ನೋಬೆಲ್ ಅವರ ಪ್ರಕಾರ, ರಷ್ಯಾದ ವ್ಯಾಪಾರ ಅಸಮತೋಲನದ ಪರಿಣಾಮವಾಗಿ ಸ್ಥಗಿತಗೊಂಡಿರುವ ಹಣ ಹತ್ತಾರು ಬಿಲಿಯನ್ ಡಾಲರ್‌ಗೆ ತಲುಪುವ ಸಾಧ್ಯತೆಗಳಿವೆ. "ಭಾರತದ ಐತಿಹಾಸಿಕ ದಾಖಲೆಯ ವ್ಯಾಪಾರ ಕೊರತೆಯ ಪರಿಣಾಮವಾಗಿ ಇತರ ದೇಶಗಳೊಡನೆ ವ್ಯವಹಾರ ನಡೆಸುವುದನ್ನೂ ಕಷ್ಟಕರವಾಗಿಸಿದೆ" ಎನ್ನುತ್ತಾರೆ ಅಲೆಕ್ಸಾಂಡರ್.

ರಷ್ಯಾ ಭಾರತದ ಅತಿದೊಡ್ಡ ಆಯುಧ ಮತ್ತು ಮಿಲಿಟರಿ ಉಪಕರಣಗಳ ಪೂರೈಕೆದಾರನಾಗಿದೆ. ಆದರೆ ಈಗ ಭಾರತದ ಬಳಿ ಅಮೆರಿಕಾದ ನಿರ್ಬಂಧಕ್ಕೆ ಸಿಲುಕದಂತೆ ರಷ್ಯಾಗೆ ಹಣ ಪಾವತಿ ಮಾಡುವ ವಿಧಾನ ಲಭ್ಯವಿಲ್ಲದಿರುವುದರಿಂದ ರಷ್ಯಾದಿಂದ ಭಾರತಕ್ಕೆ ಉಪಕರಣಗಳ ಪೂರೈಕೆ ಸ್ಥಗಿತಗೊಂಡಿದೆ.

ಇದನ್ನೂ ಓದಿ- 'ವ್ಲಾಡಿಮೀರ್ ಪುಟಿನ್ ಸತ್ಹೋದ್ರೆ ಖುಷಿಯಾಗುತ್ತದೆ', ಬ್ರಿಟೆನ್ ನಲ್ಲಿ ಯುಕ್ರೇನ್ ರಾಯಭಾರಿಯ ಹೇಳಿಕೆ

ಒಂದು ವರ್ಷದಿಂದೀಚೆಗೆ, ಭಾರತಕ್ಕೆ 2 ಬಿಲಿಯನ್‌ಗೂ ಹೆಚ್ಚು ಮೌಲ್ಯದ ಆಯುಧಗಳಿಗೆ ಹಣ ಪಾವತಿಸಲು ಸಾಧ್ಯವಾಗಿಲ್ಲ. ಯಾಕೆಂದರೆ ಅಮೆರಿಕಾದ ನಿರ್ಬಂಧಗಳಿಗೆ ಒಳಗಾಗುವ ಭಯದಿಂದ ಭಾರತ ಡಾಲರ್‌ನಲ್ಲಿ ಪಾವತಿಸಲು ಸಿದ್ಧವಿಲ್ಲ. ರಷ್ಯಾ ರುಪಾಯಿಯಲ್ಲಿ ಪಾವತಿ ಸ್ವೀಕರಿಸಲು ಸಿದ್ಧವಿಲ್ಲ.

ಭಾರತದ ತೈಲಾಗಾರಗಳು ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಖರೀದಿಸುವ ಕಡಿಮೆ ಬೆಲೆಯ ಕಚ್ಚಾ ತೈಲಕ್ಕೆ ದಿರ್‌ಹಮ್, ರೂಬಲ್ ಹಾಗೂ ರುಪಾಯಿಗಳಲ್ಲಿ ಪಾವತಿಸಲು ಪ್ರಯತ್ನ ನಡೆಸುತ್ತಾ ಬಂದಿವೆ. ಪ್ರತಿ ಬ್ಯಾರಲ್‌ಗೆ 60 ಡಾಲರ್‌ಗಿಂತ ಕಡಿಮೆ ಬೆಲೆಬಾಳುವ ವ್ಯಾಪಾರಗಳು ಅಂತಾರಾಷ್ಟ್ರೀಯ ಕಾನೂನುಗಳಿಗೆ ಒಳಪಡುವುದಿಲ್ಲ. ಈ ಗರಿಷ್ಠ ದರಮಿತಿಯನ್ನು ಜಿ ಸೆವೆನ್ ಹಾಗೂ ಐರೋಪ್ಯ ಒಕ್ಕೂಟಗಳು ನಿರ್ಧರಿಸಿವೆ.

ರುಪಾಯಿಯಲ್ಲಿ ವಿದೇಶೀ ವ್ಯಾಪಾರ ಮುಂದುವರಿಯುವಂತೆ ಮಾಡಲು ಮತ್ತು ಕಚ್ಚಾತೈಲದ ಪೂರೈಕೆ ನಡೆಯುತ್ತಿರುವಂತೆ ಮಾಡಲು ಭಾರತದ ಪೂರೈಕೆದಾರರು ರಷ್ಯಾದ ಬ್ಯಾಂಕ್‌ಗಳಾದ ಸ್ಬೆರ್‌ಬ್ಯಾಂಕ್ ಪಿಜೆಎಸ್‌ಸಿ ಹಾಗೂ ವಿಟಿಬಿ ಬ್ಯಾಂಕ್ ಪಿಜೆಎಸ್‌ಸಿಗಳೊಡನೆ ವಿಶೇಷ ವೋಸ್ತ್ರೋ ಖಾತೆಗಳನ್ನು ತೆರೆದಿವೆ.

ಬ್ಯಾಂಕ್ ಆಫ್ ರಷ್ಯಾ ಗವರ್ನರ್ ಆಗಿರುವ ಎಲ್ವಿರಾ ನಬಿಯುಲಿನಾ ಅವರು ಎಪ್ರಿಲ್ 28ರಂದು ನೀಡಿದ ಹೇಳಿಕೆಯಲ್ಲಿ ಹಣಕಾಸಿನ ನಿರ್ಬಂಧಗಳ ಪರಿಣಾಮವಾಗಿ ರಷ್ಯಾದ ವ್ಯಾಪಾರಿಗಳಿಗೆ ತಮ್ಮ ರುಪಾಯಿಯನ್ನು ಪಡೆಯುವುದು ಅತ್ಯಂತ ಕಷ್ಟಕರವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News