ವಿನಯ್ ರಾಜ್ ಕುಮಾರ್ ಅಭಿನಯದ 'ಅಪ್ಪ ಅಮ್ಮ ಪ್ರೀತಿ' ಪೋಸ್ಟರ್ ರಿಲೀಸ್

ವಿನಯ್ ರಾಜ್ ಕುಮಾರ್ ಅಭಿನಯದ 'ಅಪ್ಪ ಅಮ್ಮ ಪ್ರೀತಿ’ ಎಂಬ ಹೊಸ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. 

Last Updated : Apr 23, 2018, 08:19 PM IST
ವಿನಯ್ ರಾಜ್ ಕುಮಾರ್ ಅಭಿನಯದ 'ಅಪ್ಪ ಅಮ್ಮ ಪ್ರೀತಿ' ಪೋಸ್ಟರ್ ರಿಲೀಸ್ title=

ಬೆಂಗಳೂರು : ದೊಡ್ಮನೆ ಹುಡುಗ ರಾಘವೇಂದ್ರ ರಾಜ್ ಕುಮಾರ್ ಮಗ ವಿನಯ್ ರಾಜ್ ಕುಮಾರ್ ಇದೀಗ 'ಅಪ್ಪ ಅಮ್ಮ ಪ್ರೀತಿ’ ಎಂಬ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. 

ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ನಟನಾ ಪ್ರತಿಭೆಯನ್ನು ಪ್ರೂವ್ ಮಾಡಿರುವ ವಿನಯ್ ರಾಜ್ ಕುಮಾರ್, ‘ಅನಂತು ವರ್ಸಸ್ ನುಸ್ರತ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮಧ್ಯೆದಲ್ಲೇ ಮತ್ತೊಂದು ಹೊಸ ಚಿತ್ರ 'ಅಪ್ಪ ಅಮ್ಮ ಪ್ರೀತಿ’ಗೆ ಒಪ್ಪಿಕೊಂಡಿದ್ದಾರೆ. 

ಚಿತ್ರದ ನಿರ್ದೇಶಕ ಶ್ರೀಧರ್ ಹೇಳುವಂತೆ, ವಿನಯ್ ಅವರ ನಿಜ ಜೀವನದ ಲವ್ ಸ್ಟೋರಿಯನ್ನೇ ಆಧರಿಸಿ ಈ ಚಿತ್ರ ಮಾಡಲಾಗಿದೆಯಂತೆ. ಈ ಚಿತ್ರದಲ್ಲಿ ಪ್ರೀತಿಯಲ್ಲಿ ಬೀಳುವ ನಾಯಕನಿಗೆ ಅಪ್ಪ ಬೇಕೋ, ಅಮ್ಮ ಬೇಕೋ ಅಥವಾ ಪ್ರೀತಿಯೋ ಎಂಬ ಪ್ರಶ್ನೆ ಬಹಳ ಕಾಡುತ್ತೆ. ಪಕ್ಕಾ ಫ್ಯಾಮಿಲಿ ಹಾಗೂ ಪ್ರಬುದ್ಧ ಮನಸುಗಳ ನಡುವಿನ ಪ್ರೇಮ ಕಥೆಯನ್ನು ಈ ಚಿತ್ರ ಆಧರಿಸಿದೆ. ಐ ಲವ್ ಯೂ ರೀತಿಯ ಪ್ರೇಮನಿವೇದನೆ ನಮ್ಮ ಸಿನಿಮಾದಲ್ಲಾಗುವುದಿಲ್ಲ. ಹಳೇ ಕಾನ್ಸೆಪ್ಟ್​ಗೆ ಜೋತು ಬೀಳದೆ, ಹೊಸ ರೀತಿಯಲ್ಲಿ ಸಿನಿಮಾ ಮಾಡುತ್ತಿದ್ದೇವೆ ಎನ್ನುತ್ತಾರೆ ಶ್ರೀಧರ್. 

ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ಶರತ್ ಕುಮಾರ್ ಕಾಣಿಸಿಕೊಳ್ಳಲಿದ್ದು, ತಾಯಿ ಪಾತ್ರದಲ್ಲಿ ಖುಷ್ಬೂ ಕಾಣಿಸಿಕೊಳ್ಳಲಿದ್ದಾರೆ. 2010ರಲ್ಲಿ ತೆರೆಗೆ ಬಂಡ 'ಜನನಿ’ ಬಳಿಕ, ಅಂದರೆ ಎಂಟು ವರ್ಷಗಳ ನಂತರ ಮತ್ತೆ ಖುಷ್ಬೂ ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಮಲಯಾಳಂ ನಟಿ ಮಾನಸಾ ರಾಧಾಕೃಷ್ಣನ್ ಕೂಡಾ ಕನ್ನಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ ಜೂಡಾ ಸ್ಯಾಂಡಿ ಮ್ಯುಸಿಕ್ ಕಂಪೋಸ್ ಮಾಡಲಿದ್ದು, ಲವಿತ್ ಛಾಯಾಗ್ರಹಣ, ಎಲ್.ಎನ್.ಮೂರ್ತಿ ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರ ಕುರಿತು ಹೆಚ್ಚಿನ ಮಾಹಿತಿಯನ್ನು ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬವಾದ ಏಪ್ರಿಲ್ 24ರಂದು ಚಿತ್ರ ತಂಡ ಬಿಡುಗಡೆ ಮಾಡಲಿದೆ. 

Trending News