ಮಹದಾಯಿ ವಿವಾದ : ಕರ್ನಾಟಕದ್ದು ದುರುದ್ದೇಶದ ಯೋಜನೆ ಎಂದ ಗೋವಾ

ಕರ್ನಾಟಕದ ದುರುದ್ದೇಶದ ಯೋಜನೆಗೆ ಗೋವಾ ಸರ್ಕಾರ ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಗೋವಾ ಸರ್ಕಾರದ ಪರ ವಕೀಲ ಆತ್ಮಾರಾಮ್‌ ನಾಡಕರ್ಣಿ ವಾದಿಸಿದರು.

Divyashree K Divyashree K | Updated: Feb 9, 2018 , 11:01 AM IST
ಮಹದಾಯಿ ವಿವಾದ : ಕರ್ನಾಟಕದ್ದು ದುರುದ್ದೇಶದ ಯೋಜನೆ ಎಂದ ಗೋವಾ

ನವದೆಹಲಿ : ಕುಡಿಯುವ ನೀರಿನ ನೆಪ ಹೇಳಿ ನೀರಾವರಿ ಉದ್ದೇಶಕ್ಕೆ ಮಹದಾಯಿ ನೀರು ಬಳಸಿಕೊಳ್ಳಬೇಕೆಂಬ ಉದ್ದೇಶವನ್ನು ಕರ್ನಾಟಕ ಹೊಂದಿದೆ. ಈ ದುರುದ್ದೇಶದ ಯೋಜನೆಗೆ ಗೋವಾ ಸರ್ಕಾರ ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಗೋವಾ ಸರ್ಕಾರದ ಪರ ವಕೀಲ ಆತ್ಮಾರಾಮ್‌ ನಾಡಕರ್ಣಿ ವಾದಿಸಿದರು.

ಮಹದಾಯಿ ಜಲವಿವಾದ ಕುರಿತಂತೆ ನ್ಯಾಯಮೂರ್ತಿ ಜೆ.ಎಸ್‌.ಪಾಂಚಾಲ್‌ ನೇತೃತ್ವದ ನ್ಯಾಯಾಧಿಕರಣದ ಎದುರು ಗುರುವಾರ ಆರಂಭವಾದ ಅಂತಿಮ ಹಂತದ ವಿಚಾರಣೆಯಲ್ಲಿ ಗೋವಾದ ನಿಲುವು ಸ್ಪಷ್ಟಪಡಿಸಿದ ಅವರು, ''ಕಳಸಾ ಬಂಡೂರಿ ಯೋಜನೆಗೆ ನಮ್ಮ ವಿರೋಧವಿದೆ. ಕರ್ನಾಟಕ ಕೇಳುತ್ತಿರುವ 7.56 ಟಿಎಂಸಿ ನೀರು ಕುಡಿಯುವ ಉದ್ದೀಶಕ್ಕಲ್ಲ, ಕೃಷಿ ನೀರಾವರಿಗೆ ಬಳಕೆ ಮಾಡುವ ಇರಾದೆ ಕರ್ನಾಟಕದ್ದು" ಎಂದು ನಾಡಕರ್ಣಿ ಪ್ರತಿಪಾದಿಸಿದರು.

''ಮಹದಾಯಿಗೆ ಹೋಲಿಸಿದರೆ ಮಲಪ್ರಭಾ ನದಿಯಲ್ಲೇ ಹೆಚ್ಚು ನೀರಿದ್ದು, ಅದು ವರ್ಷಪೂರ್ತಿ ಹರಿಯುವ ನದಿಯಾಗಿದೆ, ಆದರೂ ಆ ನದಿಗೆ ಕಟ್ಟಲಾಗಿರುವ ಜಲಾಶಯ ತುಂಬುವುದಿಲ್ಲ, ಹೀಗಾಗಿ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ಕರ್ನಾಟಕ ಸರ್ಕಾರ, ಮಹದಾಯಿ ನದಿ ನೀರನ್ನು ತಿರುಗಿಸಿ ಆ ಜಲಾಶಯ ತುಂಬಿಸಿಕೊಳ್ಳುವ ಯೋಜನೆ ರೂಪಿಸಿದೆ'' ಎಂದೂ ಅವರು ನ್ಯಾಯಾಧಿಕರಣಕ್ಕೆ ತಿಳಿಸಿದರು.

ಅಲ್ಲದೆ, "ಮಹದಾಯಿ ಮಾನ್ಸೂನ್ ನಲ್ಲಿ ಮಾತ್ರ ತುಂಬಿ ಹರಿಯುತ್ತದೆ. ಮಹದಾಯಿ ನದಿ ತಿರುವು ಯೋಜನೆಯಿಂದ ಮಹದಾಯಿ ಅಚ್ಚುಕಟ್ಟಿನ ಜಲಪಾತಗಳಿಗೆ ತೊಂದರೆ ಉಂಟಾಗಲಿದೆ ಎಂದು ತಿಳಿಸಿದ ಅವರು, ಕಳಸಾ ಮತು ಬಂಡೂರಿ ಎರಡೂ ನೀರಾವರಿ ಯೋಜನೆಗಳಾಗಿದ್ದು, ಪರಿಸರ ಹಾನಿಯನ್ನು ಉಂಟುಮಾಡುವ ಈ ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು" ಎಂದು ಅವರು ಕೋರಿದರು. 

ಫೆಬ್ರವರಿ 6 ರಿಂದ ವಿವಾದದ ಕುರಿತು ಅಂತಿಮ ವಿಚಾರಣೆ ಆರಂಭವಾಗಿದ್ದು, ಫೆಬ್ರವರಿ 22ರ ವರೆಗೂ ವಿಚಾರಣೆ ನಡೆಯಲಿದೇ. ಈ ಸಂದರ್ಭ  ಮೂರು ರಾಜ್ಯಗಳು ನ್ಯಾಯ ಮಂಡಳಿಯ ಮುಂದೆ ವಾದ ಮಂಡಿಸಲು ಅವಕಾಶ ನೀಡಲಾಗಿದೆ. 

By continuing to use the site, you agree to the use of cookies. You can find out more by clicking this link

Close