ಅಸ್ಸಾಂ ಪ್ರವಾಹಕ್ಕೆ 37 ಬಲಿ, ಶೇ.80 ರಷ್ಟು ಮುಳುಗಿದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ

ಅಸ್ಸಾಂನಲ್ಲಿ ಈವರೆಗೆ ಪ್ರವಾಹದಿಂದಾಗಿ ಸುಮಾರು 53,52,107 ಜನರು ಬಾಧಿತರಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುವಾರ ತಿಳಿಸಿದೆ.

Last Updated : Jul 19, 2019, 09:51 AM IST
ಅಸ್ಸಾಂ ಪ್ರವಾಹಕ್ಕೆ 37 ಬಲಿ, ಶೇ.80 ರಷ್ಟು ಮುಳುಗಿದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ title=
Pic Courtesy: Reuters

ಗುವಾಹಾಟಿ: ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದಾಗಿ 37 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಗುರುವಾರ ತಿಳಿಸಿದೆ. ಎಎಸ್‌ಡಿಎಂಎ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಗುರುವಾರದವರೆಗೆ 28 ಜಿಲ್ಲೆಗಳ 103 ಕಂದಾಯ ವಲಯಗಳಲ್ಲಿ ಒಟ್ಟು 4,128 ಗ್ರಾಮಗಳು ಪ್ರವಾಹದ ಪರಿಣಾಮ ಎದುರಿಸುತ್ತಿವೆ ಎಂದು ತಿಳಿಸಿದೆ.

ರಾಜ್ಯಾದ್ಯಂತ ಪ್ರವಾಹದಿಂದಾಗಿ ಸುಮಾರು 53,52,107 ಜನರು ಬಾಧಿತರಾಗಿದ್ದಾರೆ. ಸ್ಥಳಾಂತರಗೊಂಡ ಜನರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 427 ಪರಿಹಾರ ಶಿಬಿರಗಳು ಮತ್ತು ರಾಜ್ಯ ಸರ್ಕಾರ ಸ್ಥಾಪಿಸಿದ 392 ಪರಿಹಾರ ವಿತರಣಾ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ  ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಶೇ.80 ರಷ್ಟು ಮುಳುಗಿದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ:
ಅಸ್ಸಾಂನಲ್ಲಿ ಹೆಚ್ಚುತ್ತಿರುವ ಪ್ರವಾಹದ ನೀರಿನ ಮಟ್ಟವು ಕಾಜಿರಂಗಾ ರಾಷ್ಟ್ರೀಯ ಉದ್ಯಾನ, ಮನಸ್ ರಾಷ್ಟ್ರೀಯ ಉದ್ಯಾನ ಮತ್ತು ಪೊಬಿಟೋರಾ ವನ್ಯಜೀವಿ ಅಭಯಾರಣ್ಯದ ಕಾಡು ಪ್ರಾಣಿಗಳ ಜೀವವನ್ನು ಅಪಾಯಕ್ಕೆ ಸಿಲುಕಿಸಿದೆ ಮತ್ತು ಅನೇಕ ಕಾಡು ಪ್ರಾಣಿಗಳು ತಮ್ಮ ಜೀವ ಉಳಿಸಲು ಈಗ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಿಂದ ಹೊರಬರುತ್ತಿವೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸುಮಾರು 80 ಪ್ರತಿಶತ ಮತ್ತು 95 ಶಿಬಿರಗಳು ಸಂಪೂರ್ಣವಾಗಿ ಪ್ರವಾಹದ ನೀರಿನಲ್ಲಿ ಮುಳುಗಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಫೋಟೋಗಳು ಕಾಣಿಸಿಕೊಂಡಿವೆ. ಇದರಲ್ಲಿ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹದ ನಂತರ ಒಂದು ಕೊಂಬಿನ ಖಡ್ಗಮೃಗ, ಆನೆಗಳು ಮತ್ತು ಇತರ ಕಾಡು ಪ್ರಾಣಿಗಳನ್ನು ಎತ್ತರದ ಪ್ರದೇಶದಲ್ಲಿ ಕಾಣಬಹುದು. ಕಾಜಿರಂಗಾ ರಾಷ್ಟ್ರೀಯ ಉದ್ಯಾನವು ಬ್ರಹ್ಮಪುತ್ರ ನದಿಯ ಪ್ರವಾಹ ಪ್ರದೇಶಗಳಲ್ಲಿ ವ್ಯಾಪಿಸಿದ್ದು, ಬ್ರಹ್ಮಪುತ್ರಾ ನದಿ ಪ್ರಸ್ತುತ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಏತನ್ಮಧ್ಯೆ, ಅಸ್ಸಾಂಗೆ ಸೇರಿದ ಸ್ಪ್ರಿಂಟರ್ ಹಿಮಾ ದಾಸ್, ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಹಣವನ್ನು ನೀಡುವ ಮೂಲಕ ರಾಜ್ಯದ ಜನರಿಗೆ ಸಹಾಯ ಮಾಡಬೇಕೆಂದು ಬುಧವಾರ ಜನರನ್ನು ಒತ್ತಾಯಿಸಿದರು. "ನಮ್ಮ ರಾಜ್ಯ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಬಹಳ ನಿರ್ಣಾಯಕವಾಗಿದೆ. ಪ್ರಸ್ತುತ 33 ಜಿಲ್ಲೆಗಳಲ್ಲಿ 30 ಜಿಲ್ಲೆಗಳು ಬಾಧಿತವಾಗಿವೆ. ಆದ್ದರಿಂದ ದೊಡ್ಡ ಕಾರ್ಪೋರೇಟ್‌ಗಳು ಮತ್ತು ಜನರು ಮುಂದೆ ಬಂದು ಈ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯಕ್ಕೆ ಸಹಾಯ ಮಾಡುವಂತೆ ನಾನು ವಿನಂತಿಸುತ್ತೇನೆ" ಎಂದು ಹಿಮಾ ಟ್ವೀಟ್ ಮಾಡಿದ್ದಾರೆ.

ಬ್ರಹ್ಮಪುತ್ರ ನದಿ ಜೋರ್ಹತ್, ತೇಜ್‌ಪುರ, ಗುವಾಹಟಿ, ಗೋಲ್‌ಪಾರಾ ಮತ್ತು ಧುಬ್ರಿಗಳಲ್ಲಿ, ದಿಬ್ರುಗರ್ಹ್ ಜಿಲ್ಲೆಯ ಖೋವಾಂಗ್‌ನಲ್ಲಿ ಬುರ್ಹಿದಿಂಗ್ ನದಿಗಳು, ಲಖಿಂಪುರದ ಬಾದತಿಘಾಟ್‌ನಲ್ಲಿ ಸುಬನ್ಸಿರಿ ನದಿ, ಗೋಲಘಾತುರದಲ್ಲಿರುವ ನುಮಲಿಗರ್‌ನಲ್ಲಿರುವ ಧನಸಿರಿ ನದಿ, ಕಂಪೂರ್‌ನಲ್ಲಿ ಕೋಪಿಲಿ ನದಿ ಮತ್ತು ನಾಗಾವ್ನ್ ಜಿಲ್ಲೆಯ ಧರ್ಮತುಲ್ ಸೇರಿದಂತೆ ಹಲವಾರು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಪ್ರವಾಹ ಪೀಡಿತ ಜನರಿಗೆ ಪರಿಹಾರ ಒದಗಿಸಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ನ ಹಲವಾರು ತಂಡಗಳು ಪೀಡಿತ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

Trending News