ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಸೋರಿಕೆಗೆ ಸಂಬಂಧಿಸಿದಂತೆ ಮಂಗಳವಾರ ಚುನಾವಣಾ ಆಯೋಗವು ಹಿರಿಯ ಅಧಿಕಾರಿಗಳ ಸಮಿತಿ ರಚಿಸಿದೆ.
ಈ ಸಮಿತಿಯು ತನ್ನ ವರದಿಯನ್ನು ಒಂದು ವಾರದಲ್ಲಿ ಸಲ್ಲಿಸುವಂತೆ ಚುನಾವಣಾ ಆಯೋಗ ಕೇಳಿದೆ. ಅಂತೆಯೇ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಅಗತ್ಯವಾದ ಕ್ರಮಗಳನ್ನು ಸೂಚಿಸಲೂ ಸಹ ಆಯೋಗವು ಸಮಿತಿಗೆ ನಿರ್ದೇಶಿಸಿದೆ.
ಬಿಜೆಪಿ ಐಟಿ ಸೆಲ್ಸ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಚುನಾವಣಾ ಆಯೋಗವು ಪತ್ರಿಕಾಗೊಷ್ಟಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣಾ ದಿನಾಂಕವನ್ನು ಪ್ರಕಟಿಸುವ ಮೊದಲೇ "ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12ರಂದು ನಡೆಯಲಿದ್ದು ಮೇ 18ಕ್ಕೆ ಫಲಿತಾಂಶ ಹೊರಬೀಳಲಿದೆ" ಎಂದು ಟ್ವೀಟ್ ಮಾಡಿದ್ದರು. ಆದರೆ ಆಯೋಗದ ಪ್ರಕಾರ ಮತದಾನ ಮೇ.12ಕ್ಕೆ ನಡೆಯಲಿದ್ದು, ಮೇ.15ಕ್ಕೆ ಮತಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಲವು ಆರೋಪಗಳು ಕೇಳಿಬಂದಿದ್ದವು.
"ಚುನಾವಣಾ ಆಯೋಗವು ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ತಕ್ಷಣ ತನಿಖೆ ನಡೆಸಬೇಕು ಮತ್ತು ಅಗತ್ಯ ಮತ್ತು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿದೆ. ಹಾಗಾಗಿ ತನಿಖೆ ನಡೆಸಲು ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ. ಈ ಸಮಿತಿಗೆ ಏಳು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. ಈಗಾಗಲೇ ಸಮಿತಿಯು ಈ ಸಂಬಂಧ ಮಾಧ್ಯಮ ಮತ್ತು ವ್ಯಕ್ತಿಗಳ ವಿಚಾರಣೆ ನಡೆಸುತ್ತಿದೆ" ಎಂದು ಚುನಾವಣಾ ಆಯೋಗ ಹೇಳಿದೆ.