ಮಮತಾ ಬ್ಯಾನರ್ಜಿ NRC ಹೋರಾಟಕ್ಕೆ ದೇವೇಗೌಡರ ಬೆಂಬಲ

ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವವಿದೆ- ಮಮತಾ ಬ್ಯಾನರ್ಜಿ

Last Updated : Aug 2, 2018, 09:26 AM IST
ಮಮತಾ ಬ್ಯಾನರ್ಜಿ NRC ಹೋರಾಟಕ್ಕೆ ದೇವೇಗೌಡರ ಬೆಂಬಲ title=

ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ(NRC) ಪ್ರಕ್ರಿಯೆ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನ ಒಳ-ಹೊರಗೆ ಹೋರಾಟ ನಡೆಸುತ್ತಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಎನ್ ಆರ್ ಸಿ ಕರಡನ್ನು ವಿರೋಧಿಸುತ್ತಿರುವ ಮಮತಾ ಬ್ಯಾನರ್ಜಿ ಬುಧವಾರ ದೆಹಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ  ಸೇರಿದಂತೆ ವಿವಿಧ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೇಳಿದರು. ಹಾಗೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚುಕಾಲ ಚರ್ಚೆ ನಡೆಸಿದ ಮಮತಾ ಬ್ಯಾನರ್ಜಿ ಎನ್ಆರ್ಸಿ ಕರಡು ವಿರೋಧಿ ಹೋರಾಟಕ್ಕೆ ಬೆಂಬಲಸುವಂತೆ ಕೇಳಿದರು.

ಮಮತಾ ಭೇಟಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ದೇವೇಗೌಡರು, ಮಮತಾ ಬ್ಯಾನರ್ಜಿ ದೇಶದಲ್ಲಿ ಅಸ್ತಿತ್ವದಲ್ಲಿರುವ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ ಬಿಜೆಪಿಯೇತರ ಪಕ್ಷಗಳನ್ನು ಒಂದೂಡಿಸಲು ಪ್ರಯತ್ನಿಸುತ್ತಿದ್ದಾರೆ. NRC ವಿಷಯದ ಕುರಿತಂತೆ ಮಮತಾ ಬ್ಯಾನರ್ಜಿ ಹೋರಾಟ ಯಶಸ್ವಿಯಾಗಲೆಂದು ಶುಭಕೋರಿದ್ದೇನೆ, ಅವರ ಹೋರಾಟಕ್ಕೆ ನಾನು ಸಂಪೂರ್ಣವಾಗಿ ಬೆಂಬಲಿಸಲಿದ್ದೇನೆ ಎಂದು ಹೇಳಿದರು.

ದೇವೇಗೌಡರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ದೇವೇಗೌಡರು ಪ್ರಧಾನಿಯಾಗಿದ್ದಾಗ ರೈತರ ವಿಷಯದಲ್ಲಿ ಸಹಕರಿಸಿದ್ದರು.‌ ಅದಕ್ಕಾಗಿ ದೆಹಲಿ ಬಂದಾಗ ಭೇಟಿಯಾಗಲು ಕೇಳಿಕೊಂಡಿದ್ದೆ. ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಗೌರವ ಸಲ್ಲಿಸುವುದಕ್ಕಾಗಿ ಭೇಟಿಯಾಗಿದ್ದೆ. ಈ ವೇಳೆ ಕೆಲವು ರಾಜಕೀಯ ವಿಷಯಗಳನ್ನು ಚರ್ಚಿಸಿದ್ದೇನೆ ಎಂದು ಹೇಳಿದರು.

Trending News