ತಾಜ್ ಮಹಲ್ ಕೆಡವಲು ಸಿಎಂ ಯೋಗಿಗೆ ನನ್ನ ಬೆಂಬಲವಿದೆ: ಅಜಂ ಖಾನ್

ತಾಜ್ ಮಹಲ್ ನಿಜಕ್ಕೂ ಶಿವನ ಮಂದಿರವೇ ಆಗಿದ್ದರೆ ಅದನ್ನು ಖಂಡಿತಾ ಕೆಡವಬೇಕು ಎಂದು ಅಜಂಖಾನ್ ವ್ಯಂಗ್ಯವಾಡಿದ್ದಾರೆ.

Last Updated : Jun 29, 2018, 11:29 AM IST
ತಾಜ್ ಮಹಲ್ ಕೆಡವಲು ಸಿಎಂ ಯೋಗಿಗೆ ನನ್ನ ಬೆಂಬಲವಿದೆ: ಅಜಂ ಖಾನ್ title=

ರಾಂಪುರ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಕಟ್ಟಡವನ್ನು ಕೆಡವಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್'ಗೆ ಬೆಂಬಲ ನೀಡುವುದಾಗಿ ಹೇಳುವ ಮೂಲಕ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. 

ಈ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ತಾಜ್ ಮಹಲ್ ಶಿವನ ಮಂದಿರವಾಗಿತ್ತು ಎಂದು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಅಜಂಖಾನ್, ತಾಜ್ ಮಹಲ್ ನಿಜಕ್ಕೂ ಶಿವನ ಮಂದಿರವೇ ಆಗಿದ್ದರೆ ಅದನ್ನು ಖಂಡಿತಾ ಕೆಡವಬೇಕು. ಅದರ ಮೊದಲ ಇಟ್ಟಿಗೆಯನ್ನು ಯೋಗಿ ಆದಿತ್ಯನಾಥ್ ಕಿತ್ತು ಹಾಕಿದರೆ, ಎರಡನೇ ಇಟ್ಟಿಗೆಯನ್ನು ನಾನು ಕಿತ್ತು ಹಾಕುತ್ತೇನೆ. ಈ ತಾಜ್ ಮಹಲ್ ಅನ್ನು ಕೆಡವಲು ನನ್ನೊಂದಿಗೆ 10 ರಿಂದ 20 ಸಾವಿರ ಮುಸ್ಲಿಮರನ್ನು ಕರೆತರುತ್ತೇನೆ" ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.

ಈ ಹಿಂದೆಯೂ ಕೂಡ ಅಜಂಖಾನ್ ತಾಜ್ ಮಹಲ್ ಅನ್ನು ಕೆಡವಿ ಹಾಕುವ ಬಗ್ಗೆ ಮಾತನಾಡಿದ್ದರು. ಅಲ್ಲದೆ, ಇತ್ತೀಚೆಗಷ್ಟೇ ವಿಎಚ್ ಪಿಯ ಕೆಲವು ಸದಸ್ಯರು ತಾಜ್ ಮಹಲ್ ನ ದಕ್ಷಿಣ ದ್ವಾರವನ್ನು ಧ್ವಂಸ ಮಾಡಿದ ಘಟನೆಯನ್ನು ಇಲ್ಲಿ ಉಲ್ಲೇಖಿಸಬಹುದು.

Trending News