ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲು ಭಾರತ ಯೋಜನೆ: ಇಸ್ರೋ ಮುಖ್ಯಸ್ಥ

ಇದು ಗಗನಯಾನ್ ಮಿಷನ್ ನ ವಿಸ್ತೃತ ಯೋಜನೆಯಾಗಿದ್ದು, ಬಾಹ್ಯಾಕಾಶ ನಿಲ್ದಾಣವು ಸುಮಾರು 20 ಟನ್ ತೂಗುವ ನಿರೀಕ್ಷೆಯಿದೆ ಎಂದು ಕೆ.ಶಿವನ್ ತಿಳಿಸಿದ್ದಾರೆ.  

Last Updated : Jun 13, 2019, 06:43 PM IST
ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲು ಭಾರತ ಯೋಜನೆ: ಇಸ್ರೋ ಮುಖ್ಯಸ್ಥ  title=
Pic Courtesy: PTI

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಲು ಭಾರತ ಮುಂದಾಗಿದ್ದು, ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವ ಯೋಜನೆಗೆ ನಿರ್ಧರಿಸಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ. 

ಇದು ಗಗನಯಾನ್ ಮಿಷನ್ ನ ವಿಸ್ತೃತ ಯೋಜನೆಯಾಗಿದ್ದು, ಬಾಹ್ಯಾಕಾಶ ನಿಲ್ದಾಣವು ಸುಮಾರು 20 ಟನ್ ತೂಗುವ ನಿರೀಕ್ಷೆಯಿದೆ ಎಂದು ಕೆ.ಶಿವನ್ ತಿಳಿಸಿದ್ದಾರೆ.  

ಅದಕ್ಕೆ ಪೂರ್ವಭಾವಿಯಾಗಿ 2020 ಡಿಸೆಂಬರ್ ನಲ್ಲಿ ಮತ್ತು 2021ರ ಜುಲೈನಲ್ಲಿ ಪರೀಕ್ಷಾರ್ಥವಾಗಿ ಮಾನವರಹಿತವಾಗಿ ಪರೀಕ್ಷೆ ಕೈಗೊಳ್ಳಲಿದೆ. 2022ರಲ್ಲಿ ಭಾರತದ 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಇಸ್ರೊ ತನ್ನ ಮೊದಲ ಮಾನವ ಮಿಷನ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಹೊಂದಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಬಾಹ್ಯಾಕಾಶ ನಿಲ್ದಾಣವನ್ನು ಹೆಚ್ಚಾಗಿ ಮೈಕ್ರೋಗ್ರಾವಿಟಿ ಪ್ರಯೋಗಗಳನ್ನು ನಡೆಸಲು ಬಳಸಲಾಗುತ್ತದೆ. ಬಾಹ್ಯಾಕಾಶ ನಿಲ್ದಾಣ ಯೋಜನೆ ಪ್ರಾಥಮಿಕ ಹಂತದಲ್ಲಿ 15-20 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಉಳಿಯಲು ಅನುಕೂಲ ಮಾಡಿಕೊಡುವುದಾಗಿದೆ. ಆದರೆ ಗಗನ್ಯಾನ್ ಮಿಷನ್ ಪೂರ್ಣಗೊಂಡ ಬಳಿಕ ನಿರ್ದಿಷ್ಟ ವಿವರಗಳನ್ನು ತಿಳಿಸಲಾಗುವುದು ಎಂದು ಇಸ್ರೊ ಮುಖ್ಯಸ್ಥರು ಹೇಳಿದ್ದಾರೆ.

ಈ ಯೋಜನೆಗೆ ಇತರ ದೇಶಗಳೊಂದಿಗೆ ಯಾವುದೇ ಸಹಯೋಗವಿಲ್ಲ ಎಂದು ಸ್ಪಷ್ಟಪಡಿಸಿದ ಕೆ.ಶಿವನ್, ಇದುವರೆಗೂ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಯುಎಸ್, ರಷ್ಯಾ, ಚೀನಾ ಮತ್ತು ರಾಷ್ಟ್ರಗಳ ಒಕ್ಕೂಟವು ತನ್ನ ಸ್ವಂತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹೊಂದಿದೆ ಎಂದು ತಿಳಿಸಿದರು.

ಅಷ್ಟೇ ಅಲ್ಲದೆ, ಸೂರ್ಯ ಮತ್ತು ಶುಕ್ರ ಗ್ರಹಗಳ ಅಧ್ಯಯನಕ್ಕಾಗಿ ಎರಡು ವಿಶೇಷ ಮಿಶನ್ ಗಳನ್ನು ಉಡಾಯಿಸಲು ಇಸ್ರೋ ಯೋಜನೆ ರೂಪಿಸುತ್ತಿದೆ. ಸೂರ್ಯ ಗ್ರಹದ ಅಧ್ಯಯನಕ್ಕಾಗಿ ಆದಿತ್ಯ-ಎಲ್1 ಅನ್ನು 2020ರಲ್ಲಿ ಮತ್ತು ಶುಕ್ರ ಗ್ರಹದ ಅಧ್ಯಯನಕ್ಕಾಗಿ 2023ರ ಮಧ್ಯದಲ್ಲಿ ಕಾರ್ಯವನ್ನು ಆರಂಭಿಸಲಾಗುವುದು ಎಂದು ಕೆ.ಶಿವನ್ ಇದೇ ಸಂದರ್ಭದಲ್ಲಿ ಘೋಷಿಸಿದರು.

Trending News