ನವದೆಹಲಿ: ಹೊಸ ವರ್ಷ 2019 ರ ಮೊದಲ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂವಿಧಾನದ ಪ್ರಕಾರವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ. ಅಯೋಧ್ಯೆ ರಾಮಮಂದಿರದ ನ್ಯಾಯಾಂಗ ಪ್ರಕ್ರಿಯೆ ಮುಗಿದ ನಂತರವಷ್ಟೇ ರಾಮಮಂದಿರ ನಿರ್ಮಾಣವನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಲಯದ ವಿಚಾರಣೆಯ ವೇಳೆ ಕಾಂಗ್ರೆಸ್ ವಕೀಲರು ನ್ಯಾಯಾಲಯದಲ್ಲಿ ಅಡ್ಡಿಯುಂಟು ಮಾಡುತ್ತಿದ್ದಾರೆ ಹಾಗಾಗಿ ನ್ಯಾಯಾಂಗ ಪ್ರಕ್ರಿಯೆ ನಿಧಾನವಾಗಿದೆ ಎಂದಿರುವ ಅವರು, ಸಂವಿಧಾನದ ಪ್ರಕಾರವೇ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುವುದು. ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಇಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುವುದು ಎಂದು ನಮ್ಮ ಪಕ್ಷದ ಮ್ಯಾನಿಫೆಸ್ಟೋನಲ್ಲಿ ನಾವು ಹೇಳಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಲೋಕಸಭಾ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆ ಜನತೆ vs ಮಹಾಘಟಬಂಧನ್ ನಡುವೆ ನಡೆಯಲಿದೆ. ಮೋದಿ ಸಾರ್ವಜನಿಕ ಪ್ರೀತಿ ಮತ್ತು ಆಶೀರ್ವಾದದ ಅಭಿವ್ಯಕ್ತಿ ಎಂದು ಹೇಳಿದ್ದಾರೆ.
ಇನ್ನು ತ್ರಿವಳಿ ತಲಾಖ್ ಬಗ್ಗೆ ಮಾತನಾಡಿದ ಅವರು, ಲಿಂಗ ಸಮಾನತೆಗಾಗಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರ ಮಾಡಲಾಗಿದೆ ಎಂದಿದ್ದಾರೆ.
ಆರ್ಬಿಐ vs ಸರ್ಕಾರ ವಿಚಾರವಾಗಿ ಪ್ರತಿಕ್ರಿಸಿದ ಅವರು ಉರ್ಜಿತ್ ಪಟೇಲ್ ಆರ್ಬಿಐ ಗವರ್ನರ್ ಆಗಿ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ 6-7 ತಿಂಗಳುಗಳಿಂದ ರಾಜೀನಾಮೆ ನೀಡಬೇಕೆಂದು ಅವರು ಹೇಳುತ್ತಿದ್ದರು ಎಂದು ತಿಳಿಸಿದರು. ಇನ್ನು ಇದೇ ವೇಳೆ ನೋಟು ರದ್ಧತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನೋಟು ರದ್ಧತಿ ಜನತೆಗೆ ಆಘಾತವಲ್ಲ. ಇದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಕಪ್ಪು ಹಣ ಹೊಂದಿದ್ದವರಿಗೆ ಎಚ್ಚರಿಕೆ" ಎಂದು ಹೇಳಿದರು.