ಜಿಎಸ್​ಟಿಗೆ ಒಂದು ವರ್ಷ: ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಜಿಎಸ್​ಟಿ ಉತ್ತಮ ಉದಾಹರಣೆ ಎಂದ ಪ್ರಧಾನಿ ಮೋದಿ

ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕರಿಸಿದ ದೇಶದ ಜನತೆಗೆ ಶುಭ ಹಾರಿಸಿರುವ ಮೋದಿ, ಇದು 'ಟೀಂ ಇಂಡಿಯಾ'ದ ಉತ್ಸಾಹವಾಗಿದೆ ಎಂದಿದ್ದಾರೆ. 

Last Updated : Jul 1, 2018, 04:15 PM IST
ಜಿಎಸ್​ಟಿಗೆ ಒಂದು ವರ್ಷ: ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಜಿಎಸ್​ಟಿ ಉತ್ತಮ ಉದಾಹರಣೆ ಎಂದ ಪ್ರಧಾನಿ ಮೋದಿ title=

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಜಾರಿಯಾಗಿ ಇಂದಿಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಹಕಾರಿ ವ್ಯವಸ್ಥೆಗೆ ಜಿಎಸ್​ಟಿ ಒಂದು ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭಾರತ ದೇಶದ ಆರ್ಥಿಕತೆಯಲ್ಲಿ ಜಿಎಸ್​ಟಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕರಿಸಿದ ದೇಶದ ಜನತೆಗೆ ಶುಭ ಹಾರಿಸಿರುವ ಮೋದಿ, ಇದು 'ಟೀಂ ಇಂಡಿಯಾ'ದ ಉತ್ಸಾಹವಾಗಿದೆ ಎಂದಿದ್ದಾರೆ. 

ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ)ಯು ಭಾರತದ ಆರ್ಥಿಕತೆಯಲ್ಲಿ ಪ್ರಗತಿ, ಸರಳತೆ ಮತ್ತು ಪಾರದರ್ಶಕತೆಯನ್ನು ತಂದಿದೆ. ಅಲ್ಲದೆ ಔಪಚಾರಿಕತೆ, ಉತ್ಪಾದಕತೆಗೆ ಶಕ್ತಿ ತುಂಬಿದೆ. ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಅನುಕೂಲ ಮಾಡಿಕೊಟ್ಟು, ವ್ಯಾಪಾರವನ್ನು ಸರಾಗವಾಗಿಸಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 

ಇದೇ ವೇಳೆ, ಕೇಂದ್ರ ಹಣಕಾಸು ಸಚಿವ ಪಿಯೂಶ್ ಗೋಯಲ್ ಅವರೂ ಸಹ ಟ್ವೀಟ್ ಮಾಡಿದ್ದಾರೆ. ಜಿಎಸ್​ಟಿ ವರ್ಷಾಚರಣೆಗೆ ದೇಶದ ಜನತೆಗೆ ಶುಭ ಕೋರಿದ್ದು, ಭಾರತದಲ್ಲಿ ಜಿಎಸ್​ಟಿ ರೂಪಾಂತರಿತ ತೆರಿಗೆ ಸುಧಾರಣೆಯಾಗಿದೆ. ಜಿಎಸ್​ಟಿಯಿಂದಾಗಿ ಒಂದು ರಾಷ್ಟ್ರ, ಒಂದು ತೆರಿಗೆ ಮತ್ತು ಒಂದು ಮಾರುಕಟ್ಟೆ ನಿರ್ಮಾಣವಾಗಿದ್ದು, ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2017ರ ಜೂನ್ 30 ರಂದು ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ)ಯನ್ನು ಜಾರಿಗೊಳಿಸಿದರು.  ಒಂದೇ ರಾಷ್ಟ್ರ, ಒಂದೇ ತೆರಿಗೆ, ಒಂದೇ ಮಾರುಕಟ್ಟೆ ಗುರಿಯೊಂದಿಗೆ ಎಲ್ಲಾ ತೆರಿಗೆಯನ್ನು ಒಂದೇ ವಾಹಿನಿ ಮೂಲಕ ಜಾರಿಗೊಳಿಸುವ ಈ ಯೋಜನೆ ಜಾರಿಗೆ ಹಲವು ವಾದ-ವಿವಾದಗಳು, ಟೀಕೆಗಳು ಕೇಳಿಬಂದಿತಾದರೂ ಈ ನಡುವೆಯೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿಯಾಗಿ ಯಶಸ್ವಿ ಒಂದು ವರ್ಷ ಪೂರ್ಣಗೊಂಡಿದೆ. 

Trending News