ಬಿಜೆಪಿ ಮಹಿಳಾ ಸಂಸದರೊಂದಿಗೆ ಇಂದು ಪ್ರಧಾನಿ ಮೋದಿ ಉಪಹಾರ ಸಭೆ!

ಪಕ್ಷವು ಯೋಜಿಸಿರುವ ಸಭೆಗಳ ಸರಣಿಯ ಭಾಗವಾಗಿ ಬಿಜೆಪಿ ಸಂಸದರೊಂದಿಗೆ ಪ್ರಧಾನ ಮಂತ್ರಿಯವರ ಐದನೇ ಸಂವಾದ ಇದಾಗಿದೆ ಎಂದು ಮೂಲಗಳು ತಿಳಿಸಿವೆ.

Last Updated : Jul 12, 2019, 09:07 AM IST
ಬಿಜೆಪಿ ಮಹಿಳಾ ಸಂಸದರೊಂದಿಗೆ ಇಂದು ಪ್ರಧಾನಿ ಮೋದಿ ಉಪಹಾರ ಸಭೆ! title=

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಮಹಿಳಾ ಸಂಸದರೊಂದಿಗೆ ಶುಕ್ರವಾರ ಉಪಾಹಾರ ಸಭೆ ನಡೆಸಲಿದ್ದಾರೆ. ಉಪಹಾರ ಸಭೆ ಇಲ್ಲಿನ ಪ್ರಧಾನ ಮಂತ್ರಿಯ ಅಧಿಕೃತ ನಿವಾಸದಲ್ಲಿ ನಡೆಯಲಿದೆ. ಪಕ್ಷದ ಮೂಲಗಳ ಪ್ರಕಾರ, ಪ್ರಧಾನ ಮಂತ್ರಿ ಮತ್ತು ಬಿಜೆಪಿ ಸಂಸದರ ನಡುವಿನ ಐದನೇ ಸಭೆ ಇದಾಗಿದೆ. 

ಸತತ ಎರಡನೇ ಬಾರಿಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸಂಸದರು ಮತ್ತು ಸರ್ಕಾರದ ನಡುವೆ ಉತ್ತಮ ಹೊಂದಾಣಿಕೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಪಕ್ಷವು ಯೋಜಿಸಿರುವ ಸಭೆಗಳ ಸರಣಿಯ ಭಾಗವಾಗಿ ಇಂದು ಬಿಜೆಪಿ ಮಹಿಳಾ ಸಂಸದರೊಂದಿಗೆ ಪ್ರಧಾನಿ ಮೋದಿ ಉಪಹಾರ ಸಭೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಯುವ ಸಂಸದರನ್ನು ತಮ್ಮ ಮನೆಯಲ್ಲಿ ಉಪಾಹಾರದಲ್ಲಿ ಭೇಟಿಯಾದರು ಎಂದು ಮೂಲಗಳು ತಿಳಿಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಸಂಸದರೊಂದಿಗೆ ಏಳು ಸಭೆಗಳನ್ನು ಪಕ್ಷವು ಯೋಜಿಸಿದೆ. ಸಂಸದರನ್ನು ಏಳು ಗುಂಪುಗಳಾಗಿ ವಿಂಗಡಿಸಲಾಗಿದೆ ಮತ್ತು ಪಿಎಂ ಮೋದಿ ಈಗಾಗಲೇ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ವರ್ಗಗಳಿಗೆ ಸೇರಿದ ಪಕ್ಷದ ಸಂಸದರನ್ನು ಮತ್ತು ಒಮ್ಮೆ ಸಚಿವರಾಗಿದ್ದವರನ್ನು ಭೇಟಿ ಮಾಡಿದ್ದಾರೆ.

ಉಭಯ ಸದನಗಳ ಬಿಜೆಪಿ ಸಂಸದರು ಪ್ರಧಾನಮಂತ್ರಿಯೊಂದಿಗೆ ನೇರವಾಗಿ ಸಂವಹನ ನಡೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಸಭೆಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ  ಸಂಸದರಿಗೆ ಪ್ರಧಾನಿಯವರ ಮಾರ್ಗದರ್ಶನ ದೊರೆಯಲಿದ್ದು, ವಿವಿಧ ವಿಷಯಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ಸಂಸತ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ದೊರೆಯಲಿದೆ.

ಪ್ರಧಾನಿಯವರೊಂದಿಗಿನ ಉಪಹಾರ ಸಭೆಯಲ್ಲಿ ಹಾಜರಾಗುವ ಸಂಸದರು ಪ್ರಧಾನಿ ಮೋದಿ ಅವರೊಂದಿಗೆ ನೇರವಾಗಿ ಸಂವಹನ ನಡೆಸಲಿದ್ದಾರೆ. ಇದೊಂದು ಅನೌಪಚಾರಿಕ ಸಭೆ ಎಂದು ವಿವರಿಸಲಾಗಿದೆ. 

ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಕೇಂದ್ರ ಸಚಿವರು ಈ ಸಭೆಗಳಲ್ಲಿ ಭಾಗವಹಿಸುವುದಿಲ್ಲ.

Trending News