ರಾಹುಲ್ ಗಾಂಧಿ ಇಫ್ತಾರ್ ಕೂಟಕ್ಕೆ ಅರವಿಂದ್ ಕೇಜ್ರಿವಾಲ್, ಪ್ರಣಬ್ ಮುಖರ್ಜಿಗಿಲ್ಲ ಆಹ್ವಾನ

ರಾಹುಲ್ ಗಾಂಧಿ ಆಯೋಜಿಸಿರುವ ಇಫ್ತಾರ್ ಕೂಟಕ್ಕೆ ಮುಖಂಡ ಪ್ರಣಬ್ ಮುಖರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಆಹ್ವಾನಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

Last Updated : Jun 11, 2018, 03:35 PM IST
ರಾಹುಲ್ ಗಾಂಧಿ ಇಫ್ತಾರ್ ಕೂಟಕ್ಕೆ ಅರವಿಂದ್ ಕೇಜ್ರಿವಾಲ್, ಪ್ರಣಬ್ ಮುಖರ್ಜಿಗಿಲ್ಲ ಆಹ್ವಾನ title=
Pic : india.com

ನವದೆಹಲಿ : ಜೂನ್ 13 ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ  ಇಫ್ತಾರ್ ಕೂಟ ಆಯೋಜಿಸಿದ್ದು, ಮುಖ್ಯ ಅತಿಥಿಗಳ ಆಹ್ವಾನ ಪಟ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೆಸರಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ಜೂ.13ರಂದು ಇಫ್ತಾರ್ ಕೂಟ ಆಯೋಜಿಸಲಾಗಿದ್ದು ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಬಹುತೇಕ ಮುಖಂಡರನ್ನು ಆಹ್ವಾನಿಸಲಾಗಿದೆ. ಆದರೆ ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸದಿರುವುದು ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಸೃಷ್ಟಿಸಿದೆ ಎಂಬುದಕ್ಕೆ ಪುಷ್ಟಿ ನೀಡಿದಂತಾಗಿದೆ. ಅಲ್ಲದೆ, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನೂ ಕೂಡ ಕೂಟಕ್ಕೆ ಆಹ್ವಾನಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಸುಮಾರು ಎರಡು ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಇಫ್ತಾರ್ ಕೂಟವನ್ನು ಆಯೋಜಿಸಿದೆ. 

ಇತ್ತೀಚೆಗೆ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸಿದ್ದರು. ಆರೆಸ್ಸೆಸ್ ಆಮಂತ್ರಣವನ್ನು ಸ್ವೀಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಣಬ್ ಮುಖರ್ಜಿ ಅವರ ನಡೆ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು.

ನಾಗ್ಪುರದ ಕಾರ್ಯಕ್ರಮದ ಮುಂಚೆಯೇ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು "ಇದನ್ನು ತಾವು ಪ್ರಣಬ್ ದಾ ಅವರಿಂದ ನಿರೀಕ್ಷಿಸಿರಲಿಲ್ಲ" ಎಂದು ಟ್ವೀಟ್ ಮಾಡಿದ್ದರು. ಮುಖರ್ಜಿ ಅವರ ಮಗಳು ಶರ್ಮಿಷ್ಟ ಮುಖರ್ಜಿ ಅವರೂ ಸಹ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಆಗುವ ಪರಿಣಾಮಗಳ ಕುರಿತು ತಮ್ಮ ತಂದೆಗೆ ಟ್ವೀಟರ್'ನಲ್ಲಿ ಎಚ್ಚರಿಸಿದ್ದರು. ಕಾರ್ಯಕ್ರಮದಲ್ಲಿ ಆಡಿದ ಮಾತುಗಳನ್ನು ಮರೆಯಬಹುದು. ಆದರೆ ಆ ಫೋಟೋಗಳನ್ನು ಎಂದಿಗೂ ಅಳಿಸಲಾಗುವುದಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ಪ್ರಣಬ್ ಅವರ ಫೋಟೋಗಳನ್ನು ಮುಂದಿನ ದಿನಗಳಲ್ಲಿ ದುರುಪಯೋಗ ಪಡಿಸಿಕೊಳ್ಳಬಹುದು ಎಂದು ಅವರು ಎಚ್ಚರಿಸಿದ್ದರು. 

ಆದಾಗ್ಯೂ, ನಾಗ್ಪುರ ಸಮಾರಂಭದಲ್ಲಿ ಪ್ರಣಬ್ ಮುಖರ್ಜಿ ಭಾಗವಹಿಸಿ, ಅವರ ಭಾಷಣ ಹಲವರ ಮೆಚ್ಚುಗೆಗೆ ಪಾತ್ರವಾಯಿತು. ಪ್ರಣಬ್ ಅವರ ಭಾಷಣದ ಬಗ್ಗೆ ಕಾಂಗ್ರೆಸ್ ನಾಯಕರೂ ಮೆಚ್ಚುಗೆ ವ್ಯಕ್ತಪಡಿಸಿ, ಆರೆಸ್ಸೆಸ್'ಗೆ 'ಸತ್ಯದ ಕನ್ನಡಿ'ಯನ್ನು ತೋರಿಸಿದ್ದಾರೆ ಎಂದು ಹೇಳಿದ್ದರು.

Trending News