ತಿರುವನಂತಪುರ: ಸುಪ್ರೀಂ ಕೋರ್ಟ್ ಶಬರಿ ಮಳೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಲು ಅನುಮತಿ ನೀಡಿದ ಬಳಿಕ ನಡೆದ ಕೋಲಾಹಲದ ನಂತರ ಮತ್ತೆ ಸೋಮವಾರ(ನವೆಂಬರ್ 5) ದೇವಸ್ಥಾನದ ಬಾಗಿಲು ತೆರೆಯಲಿದೆ.
ಇತ್ತೀಚೆಗಷ್ಟೇ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡಿ, ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದ ಬೆನ್ನಲ್ಲೇ ಭಾರೀ ಕೋಲಾಹಲ ಉಂಟಾಗಿತ್ತು. ಸುಪ್ರೀಂ ತೀರ್ಪಿನ ಬಳಿಕ ಮೊದಲ ಬಾರಿಗೆ ಶಬರಿಮಲೆ ದೇಗುಲದ ಬಾಗಿಲು ಕಳೆದ ತಿಂಗಳ ಅಕ್ಟೋಬರ್ 17ರಂದು ತೆರೆದಿತ್ತು. ಈ ವೇಳೆ ಪತ್ರಕರ್ತೆ ಹಾಗೂ ಸಮಾಜ ಸೇವಕಿ ಸೇರಿದಂತೆ ಸುಮಾರು 12 ಜನ ಮಹಿಳೆಯರು ದೇಗುಲಕ್ಕೆ ಪ್ರವೇಶಿಸಲು ಮುಂದಾಗಿದ್ದರು. ಇದಕ್ಕೆ ಹಿಂದೂ ಸಂಘಟನೆಗಳು ಹಾಗೂ ದೇವಸ್ಥಾನದ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಹಿಂಸಾಚಾರ ಘಟನೆಗಳು ಸಂಭವಿಸಿದ್ದವು.
ಇದಾದ ಬಳಿಕ ನಾಳೆ(ಸೋಮವಾರ) ದೇವಸ್ಥಾನದ ದ್ವಾರ ತೆರೆಯಲಿದ್ದು, ಕೇವಲ 24 ಗಂಟೆಗಳ ವರೆಗೆ ಪ್ರವೇಶಾವಕಾಶ ನೀಡಲಾಗಿದೆ. ಸೋಮವಾರ ಸಂಜೆ 5 ಗಂಟೆಗೆ ದೇಗುಲ ದ್ವಾರ ತೆರೆಯಲಿದ್ದು, ಮಂಗಳವಾರ ರಾತ್ರಿ 10 ಗಂಟೆಗೆ ಮುಚ್ಚಲಾಗುತ್ತದೆ.
ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಮರುಕಳಿಸದಂತೆ ದೇವಸ್ಥಾನದ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, 1,500 ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಮಂಗಳವಾರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ.