ಶ್ರವಣಬೆಳಗೊಳ : 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಇಂದು ಚಾಲನೆ

12 ವರ್ಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಭಗವಾನ್ ಬಾಹುಬಲಿ ಮೂರ್ತಿಯ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. 

Last Updated : Feb 7, 2018, 10:10 AM IST
  • ಫೆ.7 ರಿಂದ 26ರ ವರೆಗೆ ನಡೆಯಲಿರುವ ಈ ಶತಮಾನದ 2 ನೇ ಮಹಾಮಸ್ತಕಾಭಿಷೇಕಕ್ಕೆ ಇಂದು ಚಾಲನೆ.
  • ಫೆ.17 ರಂದು 108 ಕಳಶಗಳ ಅಭಿಷೇಕದೊಂದಿಗೆ ಮಹಾ ಮಸ್ತಕಾಭಿಷೇಕ ಆರಂಭ.
  • ಮಹಾಮಸ್ತಕಾಭಿಷೇಕಕ್ಕೆ 40 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ.
  • ಮಹಾಮಸ್ತಕಾಭಿಷೇಕ ಮಹೋತ್ಸವದ ಭದ್ರತೆಗೆ 5 ಸಾವಿರಕ್ಕೂ ಅಧಿಕ ಪೋಲಿಸ್ ಸಿಬ್ಬಂದಿ ನಿಯೋಜನೆ.
ಶ್ರವಣಬೆಳಗೊಳ : 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಇಂದು ಚಾಲನೆ title=

ಹಾಸನ : 12 ವರ್ಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಭಗವಾನ್ ಬಾಹುಬಲಿ ಮೂರ್ತಿಯ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. 

ಇಂದಿನಿಂದ(ಫೆ.7) ರಿಂದ 26ರ ವರೆಗೆ ನಡೆಯಲಿರುವ ಈ ಶತಮಾನದ 2 ನೇ ಮಹಾಮಸ್ತಕಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳಿಗೆ ಶ್ರವಣಬೆಳಗೊಳದ ತ್ಯಾಗಿ ನಗರದಲ್ಲಿ ನಿರ್ಮಿಸಿರುವ ಚಾವುಂಡರಾಯ ವೇದಿಕೆಯಲ್ಲಿ ಇಂದು ಬೆಳಗ್ಗೆ 10.45ಕ್ಕೆ ಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮಹಾರಾಜರು ಹಾಗೂ ಶ್ರವಣಬೆಳಗೊಳ ಜೈನ ಮಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಚಾಲನೆ ನೀಡಲಿದ್ದಾರೆ. 

ರಾಜ್ಯಪಾಲ ವಜುಭಾಯಿ ವಾಲಾ, ಮಾಜಿ ಪ್ರಧಾನಿ ದೇವೇಗೌಡ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ,  ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಮಹಾಮಸ್ತಕಾಭಿಷೇಕ ಮಹೋತ್ಸವದ ಸಹ ಅಧ್ಯಕ್ಷ ಕೆ.ಅಭಯಚಂದ್ರ ಜೈನ್‌ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಆ ಬಳಿಕ ಗೊಮ್ಮಟ ಮೂರ್ತಿಗೆ ಪೂಜೆ, ಹೋಮ, ಹವನ ಹಾಗೂ ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅಧಿಕೃತವಾಗಿ ಆರಂಭಗೊಳ್ಳಲಿವೆ. ಮೊದಲ ಮಸ್ತಕಾಭಿಷೇಕ ಫೆ.17ರಂದು ನಡೆಯಲಿದೆ. ಮಹಾಮಸ್ತಕಾಭಿಷೇಕಕ್ಕೆ 40 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದ್ದು ಕುಡಿವ ನೀರು,ಶೌಚಾಲಯ, ಊಟ, ಉಪಹಾರ, ವಸತಿ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಫೆ.7 ರಿಂದ 26ರವರೆಗಿನ ಕಾರ್ಯಕ್ರಮಗಳು
ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಫೆ.7ರಿಂದ ಪ್ರತಿದಿನ ಬೆಳಿಗ್ಗೆ ಬೆಳಗ್ಗೆ 7 ರಿಂದ 11 ರವರೆಗೆ ಪಂಚಕಲ್ಯಾಣ ಮಹೋತ್ಸವಗಳು ಜರುಗಲಿವೆ. ಫೆ.12 ರಿಂದ 15 ರವರೆಗೆ ಪಂಚಪರಮೇಷ್ಠಿ ಕಾರ್ಯಕ್ರಮಗಳು ಜರುಗಲಿವೆ. ಫೆ.16 ರಂದು ವಿಂಧ್ಯಗಿರಿ ಸುತ್ತ ಬೃಹತ್‌ ಮೆರವಣಿಗೆ ಮತ್ತು
ರಥೋತ್ಸವ ನಡೆಯಲಿದೆ. ಫೆ.17 ರಂದು 108 ಕಳಶಗಳ ಅಭಿಷೇಕದೊಂದಿಗೆ ಮಹಾ ಮಸ್ತಕಾಭಿಷೇಕ ಆರಂಭವಾಗಲಿದ್ದು, ಪ್ರತಿದಿನ 1008 ಕಳಶಗಳ ಅಭಿಷೇಕ ನೆರವೇರಲಿದೆ. ಫೆ.26 ರಂದು ಮಹಾಮಸ್ತಕಾಭಿಷೇಕ ಸಮಾರೋಪ ಸಮಾರಂಭ ನಡೆಯಲಿದ್ದು, 2 ನೇ ಮಹಾಮಸ್ತಕಾಭಿಷೇಕಕ್ಕೆ ತೆರೆ ಬೀಳಲಿದೆ.

ಬಿಗಿ ಪೋಲಿಸ್ ಭದ್ರತೆ 
ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಭದ್ರತೆಗೆ 5 ಸಾವಿರಕ್ಕೂ ಅಧಿಕ ಪೋಲಿಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಕೆಎಸ್ಆರ್‌ಪಿ ತುಕಡಿ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ದಳ, ಭಯೋತ್ಪಾದನಾ ನಿಗ್ರಹ ದಳ, ಗರುಡಾ ವಾಹನ, ಗೃಹರಕ್ಷಕ ದಳ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪರಾಧ ತಡೆಗೆ ನಿಗಾವಹಿಸಲು 100 ಮಂದಿ ಹ್ಯಾಂಡಿಕ್ಯಾಮ್ ವಿಡಿಯೊಗ್ರಾಫರ್‌ಗಳನ್ನು ಬಳಸಿಕೊಳ್ಳ ಲಾಗುತ್ತಿದೆ. ಹಾಗೆಯೇ 150 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಟ್ಟಣಿಗೆ, ಬೆಳಗೊಳ ಪ್ರವೇಶಿಸುವ ಎಲ್ಲಾ ರಸ್ತೆ ಮಾರ್ಗಗಳು, ಆಯಾಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿದೆ. 

ಪಾರ್ಕಿಂಗ್ ವ್ಯವಸ್ಥೆ
ಖಾಸಗಿ ವಾಹನಗಳಿಗೆ ಬೆಳಗೊಳಕ್ಕೆ 3–4 ಕಿ.ಮೀ. ದೂರದಲ್ಲಿಯೇ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯರ ವಾಹನಗಳ ಸಮೀಕ್ಷೆ ಮಾಡಲಾಗಿದ್ದು, ಅವರಿಗೆ ಪಾಸ್‌ ನೀಡಲಾಗುತ್ತದೆ. ಪಾರ್ಕಿಂಗ್‌ ಸ್ಥಳದಿಂದಲೇ ಸಾರ್ವಜನಿಕರನ್ನು ಕ್ಷೇತ್ರಕ್ಕೆ ಕರೆತರಲು ಕೆಎಸ್‌ಆರ್‌ಟಿಸಿಯು 75 ಮಿನಿ ಬಸ್‌ ಸಂಚಾರ ವ್ಯವಸ್ಥೆ ಮಾಡಿದೆ.

Trending News