ನವದೆಹಲಿ : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಹುಜನ ಸಮಾಜಪಕ್ಷ ಮತ್ತು ಜೆಡಿಎಸ್ ಮೈತ್ರಿ ಘೋಷಿಸಿದ್ದು, ಈ ಕುರಿತು ದೆಹಲಿಯಲ್ಲಿ ಅಧಿಕೃತ ಘೋಷಣೆ ಹೊರಡಿಸಿದೆ.
ಇಂದಿಲ್ಲಿ ನಡೆದ ಬಿಎಸ್ ಪಿ-ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೈತ್ರಿ ಕುರಿತು ಘೋಷಣೆ ಹೊರಡಿಸಿದ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ, ಈ ಬಾರಿ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿಯಲಿದ್ದು, ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ ಚುನಾವಣಾ ಪ್ರಚಾರಕ್ಕೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಜೆಡಿಎಸ್ ಮುಖ್ಯಸ್ಥ ಹೆಚ್.ಡಿ.ದೇವೇಗೌಡ ಅವರು ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದು, ಇದು ಬಿಎಸ್ ಪಿ ಯಾ ಮೊದಲ ಚುನಾವಣಾ ಪೂರ್ವ ಮೈತ್ರಿಯಾಗಿದೆ. 14 ಜಿಲ್ಲೆಗಳ 20 ಕ್ಷೇತ್ರಗಳಲ್ಲಿ ಬಿಎಸ್'ಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಎಲ್ಲ ಕಡೆ ಜಂಟಿ ಪ್ರಚಾರ ನಡೆಸಲಾಗುವುದು. ಈ ಮೈತ್ರಿಯಿಂದ ಕರ್ನಾಟಕದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಬಿಎಸ್ ಪಿ ಅಭ್ಯರ್ಥಿಗಳು ಸ್ಪರ್ಧಿಸುವ ಕ್ಷೇತ್ರಗಳು :
ಕೊಳ್ಳೇಗಾಲ, ಗುಂಡ್ಲುಪೇಟೆ, ನಿಪ್ಪಾಣಿ, ಚಿಕ್ಕೋಡಿ, ಶಿರಹಟ್ಟಿ, ಚಾಮರಾಜನಗರ, ಕಾರ್ಕಳ, ಹೊನಾಲಿ, ಹೊಸಪೇಟೆ, ಬಾಗಲಕೋಟೆ ನಗರ, ಹುಬ್ಬಳ್ಳಿ-ಧಾರವಾಡ ಪೂರ್ವ, ಬಬಲೇಶ್ವರ, ಸುಳ್ಯ, ಚಿತ್ತಾಪುರ, ಕಲ್ಬುರ್ಗಿ, ಬೀದರ್ ಉತ್ತರ, ಆನೇಕಲ್, ಗದಗ ನಗರ, ಬ್ಯಾಡಗಿ, ರಾಯಬಾಗ್ ಕ್ಷೇತ್ರಗಳಲ್ಲಿ ಬಿಎಸ್ ಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.