ಮಹಾರಾಷ್ಟ್ರ & ಗೌರಿ ಘಟನೆಯ ಸಾಮ್ಯತೆಯ ಬಗ್ಗೆ ಈಗಲೇ ಸ್ಪಷ್ಟತೆ ನೀಡಲು ಸಾಧ್ಯವಿಲ್ಲ-ಸಿಎಂ

ಈ ಹಿಂದೆ ಮಹಾರಾಷ್ಟದಲ್ಲಿ ನಡೆದಿರುವ ವಿಚಾರವಾದಿಗಳ ಹತ್ಯೆಗೂ, ಗೌರಿ ಲಂಕೇಶ್ ಅವರ ಹತ್ಯೆಗೂ ಸಾಮ್ಯತೆ ಇರುವ ಬಗ್ಗೆ ಈಗಲೇ ಸ್ಪಷ್ಟತೆ ನೀಡುವುದು ಅಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Last Updated : Sep 6, 2017, 05:01 PM IST
ಮಹಾರಾಷ್ಟ್ರ & ಗೌರಿ ಘಟನೆಯ ಸಾಮ್ಯತೆಯ ಬಗ್ಗೆ ಈಗಲೇ ಸ್ಪಷ್ಟತೆ ನೀಡಲು ಸಾಧ್ಯವಿಲ್ಲ-ಸಿಎಂ title=

ಬೆಂಗಳೂರು: ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಮತ್ತು ಈ ಹಿಂದೆ ನಡೆದಿರುವ ವಿಚಾರವಾದಿಗಳ ಹತ್ಯೆಗೆ ಸಾಮ್ಯತೆ ಇದೆಯೇ? ಇಲ್ಲವೇ? ಎಂಬ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿರುವ ಸಿದ್ದರಾಮಯ್ಯ, ಈ ಪ್ರಕರಣದ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ಮಹಾರಾಷ್ಟ್ರದಲ್ಲಿ ನಡೆದ ವಿಚಾರವಾದಿ ನರೇಂದ್ರ ಅಚ್ಯುತ್ ದಾಭೋಲ್ಕರ್, ಎಡಪಂಥೀಯ ಚಿಂತಕ ಗೋವಿಂದ್ ಪನ್ಸಾರೆ, ಕರ್ನಾಟಕದ ಹೆಸರಾಂತ ಚಿಂತಕ, ವಿಚಾರವಾದಿ ಹಾಗೂ  ಸಾಹಿತಿ ಡಾ.ಎಂ.ಎಂ. ಕಲ್ಬುರ್ಗಿ ಹತ್ಯಾ ಪ್ರಕರಣಗಳಲ್ಲಿ ಬಳಕೆಯಾದ ಶಸ್ತ್ರವೂ ಸೇರಿದಂತೆ  ಹತ್ಯೆಯ ಶೈಲಿಯಲ್ಲಿ ಕೆಲವು ಸಾಮ್ಯತೆಗಳಿದ್ದರೂ, ಆ ಪ್ರಕರಣಗಳಿಗೂ ಈ ಪ್ರಕರಣಕ್ಕೂ  ಸಾಮ್ಯತೆ ಇದೆಯೇ ? ಇಲ್ಲವೇ ? ಎಂಬ ಬಗ್ಗೆ ಸ್ಪಷ್ಟತೆ ನೀಡಲು ಈಗಲೇ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ವಿಚಾರವಾದಿ ದಾಭೋಲ್ಕರ್ ಹತ್ಯಾ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಪನ್ಸಾರೆ ಹತ್ಯಾ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂತೆಯೇ, ಡಾ.ಎಂ.ಎಂ. ಕಲ್ಬುರ್ಗಿ ಹತ್ಯಾ ಪ್ರಕರಣವನ್ನು ಸಿ ಐ ಡಿ ತನಿಖೆ ನಡೆಸುತ್ತಿದೆ. ಈ ಮೂರೂ ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆ ರಾಜ್ಯದ ಪೊಲೀಸರಿಗೆ ಸೂಚಿನೆ ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಅಲ್ಲದೆ, ದಾಭೋಲ್ಕರ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಬಿ ಐ ವಶಕ್ಕೆ ಪಡೆದಿರುವ  ವ್ಯಕ್ತಿಯ ವಿಚಾರಣೆಯ ಸಂದರ್ಭದಲ್ಲಿ ರಾಜ್ಯದ ಪೊಲೀಸರೂ ಹಾಜರಿದ್ದರು  ಎಂಬ ಅಂಶವನ್ನು  ಸಹ  ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Trending News