ಕೊಡಗು ಜಿಲ್ಲೆಯಲ್ಲಿ ಪುನರ್ವಸತಿ ಕಾರ್ಯಗಳನ್ನು ಚುರುಕುಗೊಳಿಸಲು ಸಿಎಂ ಸೂಚನೆ

ಬಡಾವಣೆ ನಿರ್ಮಾಣ, ಬಡಾವಣೆಗಳಿಗೆ ಸಂಪರ್ಕ ರಸ್ತೆ, ಜಿಲ್ಲಾ ಕ್ರೀಡಾಂಗಣ  ಹಾಗೂ  ಸರ್ಕಾರಿ ಜೂನಿಯರ್ ಕಾಲೇಜು ದುರಸ್ತಿ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರದ ದುರಸ್ತಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. 

Last Updated : Mar 6, 2019, 09:15 AM IST
ಕೊಡಗು ಜಿಲ್ಲೆಯಲ್ಲಿ ಪುನರ್ವಸತಿ ಕಾರ್ಯಗಳನ್ನು ಚುರುಕುಗೊಳಿಸಲು ಸಿಎಂ ಸೂಚನೆ title=
File Image

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಪುನರ್ವಸತಿ ಕಾರ್ಯಗಳನ್ನು ಚುರುಕುಗೊಳಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ, ಕೊಡಗು ಜಿಲ್ಲೆಯಲ್ಲಿ ಕೈಗೊಂಡಿರುವ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಸಭೆ ನಡೆಯಿತು. 

ಬಡಾವಣೆ ನಿರ್ಮಾಣ, ಬಡಾವಣೆಗಳಿಗೆ ಸಂಪರ್ಕ ರಸ್ತೆ, ಜಿಲ್ಲಾ ಕ್ರೀಡಾಂಗಣ  ಹಾಗೂ  ಸರ್ಕಾರಿ ಜೂನಿಯರ್ ಕಾಲೇಜು ದುರಸ್ತಿ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರದ ದುರಸ್ತಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. 

ಬೆಳೆ ಹಾನಿ : ಜಿಲ್ಲೆಯಲ್ಲಿ 32,312 ರೈತರ 75201.68 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು  ಹಾನಿಗೊಳಗಾಗಿದ್ದು, ಪರಿಹಾರಕ್ಕಾಗಿ ಸುಮಾರು 100.51 ಕೋಟಿ ರೂ.ಗಳು ಅಗತ್ಯವಿದೆ.  ಈವರೆಗೆ 18033 ರೈತರ 14609.44 ಹೆಕ್ಟೇರ್ ಪ್ರದೇಶಗಳ ಸುಧಾರಣೆಗಾಗಿ 14.39 ಕೋಟಿ ರೂ.ಗಳನ್ನು ನೀಡಲಾಗಿದೆ  ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಭೂಕುಸಿತ ಮತ್ತು  ಹೂಳೆತ್ತುವ ಕಾರ್ಯ : 1909 ರೈತರಿಗೆ ಸೇರಿದ 614.43 ಹೆಕ್ಟೇರ್‍ಗಳಷ್ಟು ಪ್ರದೇಶ ಭೂಕುಸಿತಕ್ಕೊಳಗಾಗಿದ್ದು, 251.00 ಲಕ್ಷ ರೂ.ಗಳ ಅಗತ್ಯವಿದೆ. ಈವರೆಗೆ 579 ರೈತರನ್ನು ಪರಿಹಾರಕ್ಕಾಗಿ ಗುರುತಿಸಿ ಅವರಿಗೆ ಸಂಬಂಧಿಸಿದ  240.37 ಹೆಕ್ಟೇರ್ ಕೃಷಿ ಭೂಮಿಯಲ್ಲಿನ ಹೂಳೆತ್ತುವ ಕಾರ್ಯ ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 

ವಸತಿ ರಹಿತರ ಪುನರ್ವಸತಿಗಾಗಿ 1162 ಮನೆಗಳ ನಿರ್ಮಾಣಕ್ಕೆ 11,455  ಲಕ್ಷ ರೂ.ಗಳ ಅಗತ್ಯವಿದೆ. ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಿ ಕಾಲ ಮಿತಿಯೊಳಗೆ ಪೂರ್ಣಗೊಳಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.
 
ಸಭೆಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್,  ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ, ಕೊಡಗು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್, ಯೋಜನಾ ಆಯುಕ್ತರಾದ ವಂದಿತಾ ಶರ್ಮಾ, ಕೃಷಿ ಮತ್ತು ತೋಟಗಾರಿಕೆ ನಿರ್ದೇಶಕ ಡಾ: ಮಹೇಶ್ವರ ರಾವ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
 

Trending News