ಕೊಡಗು ಜಿಲ್ಲೆಯಲ್ಲಿ 800 ಮರಗಳ ಹನನಕ್ಕೆ ಸಿಎಂ ಕುಮಾರಸ್ವಾಮಿ ಬ್ರೇಕ್

ಕೊಡಗು ಜಿಲ್ಲೆಯಲ್ಲಿ 800 ಮರಗಳನ್ನು ಕಡಿಯುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ನಿರ್ಧಾರ ಕೈಗೊಂಡಿದ್ದಾರೆ.

Last Updated : Jun 7, 2019, 02:31 PM IST
ಕೊಡಗು ಜಿಲ್ಲೆಯಲ್ಲಿ 800 ಮರಗಳ ಹನನಕ್ಕೆ ಸಿಎಂ ಕುಮಾರಸ್ವಾಮಿ ಬ್ರೇಕ್ title=

ಬೆಂಗಳೂರು: ಕೊಡಗಿನಲ್ಲಿ ರೆಸಾರ್ಟ್ ನಿರ್ಮಾಣಕ್ಕಾಗಿ 800 ಮರಗಳನ್ನು ಕಡಿಯುವುದನ್ನು ಕೂಡಲೇ ನಿಲ್ಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಕೊಡಗಿನ ಕೆ.ನಿಡುಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೆಸಾರ್ಟ್‌ ನಿರ್ಮಾಣಕ್ಕಾಗಿ 800 ಮರಗಳನ್ನು ಕಡಿದು ಹಾಕಲು ಅರಣ್ಯ ಇಲಾಖೆಯೇ ಅನುಮತಿ ನೀಡಿದೆ ಎನ್ನಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳೂ ಪ್ರಸಾರವಾಗಿದ್ದವು. ಅಲ್ಲದೆ, ಮರಗಳನ್ನು ಕಡಿಯುವುದಕ್ಕೆ ಅಲ್ಲಿನ ಜನತೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಅರಿತ ಸಿಎಂ ಕೂಡಲೇ ಮರಗಳನ್ನು ಕಡಿಯುವುದನ್ನು ನಿಲ್ಲಿಸುವಂತೆ ಸೂಚಿಸಿದ್ದು, ವರದಿ ನೀಡುವಂತೆ ಮುಖ್ಯ ಅರಣ್ಯಾಧಿಕಾರಿಗಳಿಗೆ ಆದೇಶಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಕಾರ್ಯಾಲಯ, "ಕೊಡಗು ಜಿಲ್ಲೆಯಲ್ಲಿ 800 ಮರಗಳನ್ನು ಕಡಿಯುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದೇ ಮರಗಳನ್ನು ಕಡಿಯುವುದನ್ನು ನಿಲ್ಲಿಸಿ,  ವರದಿಯನ್ನು ನೀಡುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ" ಎಂದು ತಿಳಿಸಿದೆ.

ಕೆಲ ತಿಂಗಳ ಹಿಂದಷ್ಟೇ ಭೀಕರ ಪ್ರವಾಹದಿಂದಾಗಿ ತತ್ತರಿಸಿದ್ದ ಕೊಡಗಿಗೆ, ಈಗ 800 ಮರಗಳ ಹನನದಿಂದ ಮತ್ತಷ್ಟು ಪ್ರಕೃತಿ ನಾಶವಾಗಲಿದೆ ಎಂಬುದನ್ನು ಮನಗಂಡ ಸಿಎಂ ಈ ಆದೇಶ ಹೊರಡಿಸಿದ್ದಾರೆ.

Trending News