ವರ್ಷದೊಳಗೆ ತುಮಕೂರಲ್ಲಿ ಮಾಲ್‌ ನಿರ್ಮಾಣಕ್ಕೆ ಡಿಸಿಎಂ ಡಾ.ಜಿ. ಪರಮೇಶ್ವರ ಸೂಚನೆ

ತುಮಕೂರು ಸ್ಮಾರ್ಟ್‌ಸಿಟಿಯಡಿ ನಿರ್ಮಾಣವಾಗುತ್ತಿರುವ ಪ್ರಾಜೆಕ್ಟ್‌ಗಳು ಶೀಘ್ರವೇ ಪೂರ್ಣಗೊಳಿಸಿ: ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ  

Last Updated : May 31, 2019, 10:03 AM IST
ವರ್ಷದೊಳಗೆ ತುಮಕೂರಲ್ಲಿ ಮಾಲ್‌ ನಿರ್ಮಾಣಕ್ಕೆ ಡಿಸಿಎಂ ಡಾ.ಜಿ. ಪರಮೇಶ್ವರ ಸೂಚನೆ title=

ಬೆಂಗಳೂರು: ತುಮಕೂರಿನ ಸ್ಮಾರ್ಟ್‌ಸಿಟಿ ಯೋಜನೆಯಡಿ ಶ್ರೀ ಸಿದ್ದಿವಿನಾಯಕ ಮಾರುಕಟ್ಟೆ ಸ್ಥಳದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ವಿಥ್‌ ಮಲ್ಟಿಲೆವೆಲ್‌ ಕಾರ್‌ಪಾರ್ಕಿಂಗ್‌ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಒಂದು ವರ್ಷದೊಳಗೆ ನಿರ್ಮಿಸುವಂತೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಸೂಚಿಸಿದರು.

ಮಲ್ಟಿಯುಟಿಲಿಟಿ ಮಾಲ್‌ ನಿರ್ಮಾಣ ಸಂಬಂಧ ಗುರುವಾರ ವಿಧಾನಸೌಧದ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಾ. ಜಿ. ಪರಮೇಶ್ವರ, ಶ್ರೀ ಸಿದ್ದಿವಿನಾಯಕ ಮಾರುಕಟ್ಟೆ ಸ್ಥಳ ಪ್ರಸ್ತುತ ಎಪಿಎಂಸಿ ಸುಪರ್ಧಿಗೆ ಸೇರಿದೆ.‌ ಆದರೂ ಈ ಸ್ಥಳ ತಕರಾರಿನಲ್ಲಿದ್ದು, ಅಗತ್ಯಬಿದ್ದರೆ ಸ್ಥಳವನ್ನು ಸಚಿವ ಸಂಪುಟದಲ್ಲಿ ಮುಂದಿಟ್ಟು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದರು.

ಈ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಮಾಲ್‌ ಮೂರು ಅಂತಸ್ತಿನ ಕಟ್ಟಡವಾಗಿದೆ. ತಳಮಹಡಿಯಲ್ಲಿ 140 ಕಾರ್‌ಪಾರ್ಕಿಂಗ್ ನಿರ್ಮಿಸಲಾಗುತ್ತಿದೆ. ಈ ಮಾಲ್‌ನನ್ನು ಒಂದು ವರ್ಷ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜೊತೆಗೆ ತುಮಕೂರು ಸ್ಮಾರ್ಟ್‌ಸಿಟಿಯಡಿ ನಿರ್ಮಾಣವಾಗುತ್ತಿರುವ ಪ್ರಾಜೆಕ್ಟ್‌ಗಳು ಶೀಘ್ರವೇ ಪೂರ್ಣಗೊಳಿಸಿ ಎಂದೂ ನಿರ್ದೇಶನ ನೀಡಿದರು. ಮುಂದಿನ ಆಗಸ್ಟ್‌ 15ರೊಳಗಾಗಿ ಸ್ಮಾರ್ಟ್‌ ರಸ್ತೆಗಳು ಸಂಪೂರ್ಣ ಸಿದ್ಧವಾಗಬೇಕು. ಸ್ಮಾರ್ಟ್‌ ಸಿಟಿ ಯೋಜನೆ ಘೋಷಣೆಯಾಗಿದ್ದರೂ ತುಮಕೂರಿನಲ್ಲಿ ಯಾವ ಬದಲಾವಣೆಯೂ ಕಾಣುತ್ತಿಲ್ಲ. ಎಲ್ಲ ಯೋಜನೆಗಳು ಪೂರ್ಣಗೊಳಿಸಲು ವರ್ಷಾನುಗಟ್ಟಲೆ ತೆಗೆದುಕೊಳ್ಳಬೇಡಿ.‌ ಶೀಘ್ರವೇ ಕೈಗೊಂಡ ಯೋಜನೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಅಧ್ಯಕ್ಷರಾದ ಶಾಲಿನಿ ರಜನೀಶ್‌, ತುಮಕೂರು ಡಿಸಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
 

Trending News