ವಿಪಕ್ಷಗಳ ಧ್ವನಿ ಹತ್ತಿಕ್ಕುವ ಸರ್ವಾಧಿಕಾರಿ ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಡಿ.ಕೆ. ಸುರೇಶ್ ವಾಗ್ದಾಳಿ

“ಸರ್ವಾಧಿಕಾರಿ ಮನಸ್ಥಿತಿಯ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ” ಎಂದು ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಅವರು ಕಿಡಿಕಾರಿದ್ದಾರೆ.  

Written by - Prashobh Devanahalli | Last Updated : Dec 21, 2023, 07:55 PM IST
  • ವಿಪಕ್ಷಗಳ ಧ್ವನಿ ಹತ್ತಿಕ್ಕುವ ಸರ್ವಾಧಿಕಾರಿ ಕೇಂದ್ರ ಸರ್ಕಾರ
  • ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ
  • ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ
ವಿಪಕ್ಷಗಳ ಧ್ವನಿ ಹತ್ತಿಕ್ಕುವ ಸರ್ವಾಧಿಕಾರಿ ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಡಿ.ಕೆ. ಸುರೇಶ್ ವಾಗ್ದಾಳಿ title=

ನವದೆಹಲಿ: ಸಂಸತ್ ಭದ್ರತಾ ಲೋಪ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸಿ ಗುರುವಾರ ಸದನದ ಬಾವಿಗೆ ಇಳಿದು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸುರೇಶ್ ಅವರು ಸೇರಿದಂತೆ ಮೂವರು ಸದಸ್ಯರನ್ನು ಅಮಾನತು ಮಾಡಲಾಯಿತು. ಪ್ರಜಾಪ್ರಭುತ್ವದ ದೇವಸ್ಥಾನದ ಒಳಗೆ ಅಕ್ರಮ ಪ್ರವೇಶದ ಮೂಲಕ ದಾಳಿ ಮಾಡಲಾಗಿದ್ದು, ಈ ಭದ್ರತಾ ವೈಫಲ್ಯ ಕುರಿತು ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹಸಚಿವರು ಲೋಕಸಭೆಯಲ್ಲಿ ಉತ್ತರ ನೀಡಬೇಕು ಎಂದು ನಾವು ಆಗ್ರಹಿಸಿದೆವು. ಈ ಪ್ರಕರಣದ ತನಿಖೆಯಲ್ಲಿ ಪಾಸ್ ವಿತರಣೆ ಮಾಡಿದ ಸಂಸದರೂ ಸೇರಿದಂತೆ ಎಲ್ಲರನ್ನು ತನಿಖೆಗೆ ಒಳಪಡಿಸಬೇಕು ಎಂದು ವಿರೋಧ ಪಕ್ಷಗಳು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಆಗ್ರಹ ಮಾಡಿದೆವು ಎಂದರು.

ಪ್ರಜಾಪ್ರಭುತ್ವ ದೇವಾಲಯಕ್ಕೆ ರಕ್ಷಣೆ ಇಲ್ಲ. ಇನ್ನೂ ಬೇರೆಯವರಿಗೆ ರಕ್ಷಣೆ ನೀಡಲಾಗುತ್ತದೆಯೇ ಎಂದು ಧ್ವನಿ ಎತ್ತಿದ ಕಾರಣ, ಇಂದು ಮೂವರು ಸದಸ್ಯರು ಸೇರಿದಂತೆ ವಿರೋಧ ಪಕ್ಷಗಳ ಒಟ್ಟು 146 ಸಂಸತ್ ಸದಸ್ಯರನ್ನು ಅಮಾನತು ಮಾಡಲಾಗಿದೆ. ಆ ಮೂಲಕ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ವಿರೋಧ ಪಕ್ಷವನ್ನು ಹತ್ತಿಕ್ಕಲು ಮುಂದಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.

ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಾಗಲಿ, ಗೃಹಮಂತ್ರಿಗಳಾಗಲಿ ಲೋಕಸಭೆ ಒಳಗೆ ವಿಷಾದ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯ ಹಾಗೂ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಆ ಕೆಲಸ ಮಾಡದೆ ನಿಯಮಗಳನ್ನು ಗಾಳಿಗೆ ತೂರಿ ವಿರೋಧ ಪಕ್ಷಗಳ ಮೇಲೆ ಆರೋಪ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದರು.

ಇದನ್ನೂ ಓದಿ: ಈ ವರ್ಷ ಅತಿ ಹೆಚ್ಚು ಸುದ್ದಿಯಲ್ಲಿದ್ದ ದೇಶದ ಟಾಪ್ 5 ರಾಜಕಾರಣಿಗಳು ಯಾರು ಗೊತ್ತೆ..? ಇಲ್ಲಿದೆ ವಿವರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಅವರು ವಿರೋಧ ಪಕ್ಷಗಳಿಗೆ ಸೂಕ್ತ ಅವಕಾಶಗಳನ್ನು ನೀಡಬೇಕು. ಆದರೆ ನಮ್ಮ ಬಹುತೇಕ ಸದಸ್ಯರನ್ನು ಅಮಾನತು ಮಾಡಿ ಕೆಲವರನ್ನು ಸಮಿತಿ ಮುಂದೆ ಕಳುಹಿಸಿದ್ದಾರೆ. ಆಮೂಲಕ ವಿರೋಧ ಪಕ್ಷಗಳ ನಾಯಕರ ಮಾತನಾಡುವ ಹಕ್ಕನ್ನು ಕಸಿಯುತ್ತಿದ್ದಾರೆ. ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ಬೆದರಿಸುವ ತಂತ್ರಗಾರಿಕೆ ಮಾಡುತ್ತಿದೆ. ಇದನ್ನು ಖಂಡಿಸಿ ನಾವು ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದಾಗ ಸ್ಪೀಕರ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆ ಪ್ರತಿಯೊಬ್ಬ ಸದಸ್ಯನ ಹಕ್ಕು. ಅದನ್ನು ಮೊಟಕುಗೊಳಿಸಿ ನಮ್ಮನ್ನು ಸದನದಿಂದ ಹೊರಹಾಕಿದ್ದಾರೆ ಎಂದರು.

ಆಡಳಿತ ಪಕ್ಷ ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡಿ, ಸಂಸತ್ತಿನ ಉಭಯ ಸದನಗಳ ಒಳಗೆ  ಹಾಗೂ ಸದನದ ಹೊರಗೆ ನಮ್ಮ ಧ್ವನಿ ದಮನ ಮಾಡುವ ಪ್ರಯತ್ನ ಮಾಡಿದೆ. 75 ವರ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜಿಪಿಯ ಮಹಾನ್ ನಾಯಕರಾದ ವಾಜಪೇಯಿ, ಅಡ್ವಾಣಿ, ಸುಷ್ಮಾ ಸ್ವರಾಜ್ ರಂತಹವರು ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದಾರೆ. ಆದರೆ 75 ವರ್ಷಗಳ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿರೋಧ ಪಕ್ಷಗಳ ಸದಸ್ಯರನ್ನು ಅಮಾನತು ಮಾಡಿರುವ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

ಕಾನೂನು ಎಲ್ಲರಿಗೂ ಒಂದೇ. ಇದೇ ವಿಚಾರದಲ್ಲಿ ವಿರೋಧ ಪಕ್ಷಗಳ ಸದಸ್ಯರು ಪಾಸ್ ನೀಡಿದ್ದರೆ ಈ ಸರ್ಕಾರ ಸುಮ್ಮನೇ ಕೂರುತ್ತಿತ್ತಾ? ಈ ಸರ್ಕಾರ ಪ್ರತಿ ಹಂತದಲ್ಲಿಯೂ ಯಾವ ರೀತಿ ಪ್ರತಿಫಕ್ಷಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಸರ್ಕಾರ ಸರ್ವಾಧಿಕಾರಿ ಧೋರಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದನದಲ್ಲಿ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ಅವರು ಮಸೂದೆ ಮಾಡಿಕೊಳ್ಳುತ್ತಿದ್ದಾರೆ. 130 ಕೋಟಿ ಜನರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕು. ಅದಕ್ಕಾಗಿ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಹೋರಾಟ ಮಾಡುತ್ತಿವೆ ಎಂದರು.

ಆಡಳಿತ ಪಕ್ಷ ಈ ಪ್ರಕರಣದಲ್ಲಿ ವಿಷಯಾಂತರ ಮಾಡುತ್ತಿದೆ. ಈ ವಿಚಾರದಲ್ಲಿ ಹೇಳಿಕೆ ನೀಡುವಂತೆ ನಾವು ಹಕ್ಕೊತ್ತಾಯ ಮಾಡಿದ್ದೇವೆ. ಅದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ. ಸಂಸತ್ ಅಧಿವೇಶನದಲ್ಲಿ ನಮ್ಮ ಧ್ವನಿಗೆ ಅವಕಾಶ ನೀಡದಿದ್ದರೆ, ಬೇರೆ ಸಮಯದಲ್ಲಿ ನಮ್ಮ ಮಾತನ್ನು ಯಾರು ಆಲಿಸುತ್ತಾರೆ. ಈ ಪ್ರಕರಣದಲ್ಲಿ ಏನಾಗಿದೆ ಎಂದು ದೇಶದ ಜನರಿಗೆ ಗೊತ್ತಾಗಬೇಕು ಎಂದರು.

ಇದನ್ನೂ ಓದಿ: C Voter Survey: ಖರ್ಗೆ, ರಾಹುಲ್, ನಿತೀಶ್, ಕೇಜ್ರಿವಾಲ್... I.N.D.I.A. ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು? 

ಕರ್ನಾಟಕ ವಿಧಾನಸಭೆಯಲ್ಲಿ ಅನಾಮಿಕ ವ್ಯಕ್ತಿ ಪ್ರವೇಶ ಮಾಡಿದ್ದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಎತ್ತಿದ ವಿಚಾರವಾಗಿ ಕೇಳಿದಾಗ, “ಅವರು ಕೂಡ ವಿಧಾನಸಭೆಯಲ್ಲಿ ಸದಸ್ಯರಾಗಿದ್ದಾರೆ. ಅವರು ಆ ವಿಚಾರವನ್ನು ಎತ್ತಬೇಕಿತ್ತು. ವಿಧಾನಸಭೆಯಲ್ಲಿ ಭಯೋತ್ಪಾದಕರ ರೀತಿ ನುಗ್ಗಿ ಹೊಗೆ ಬಾಂಬ್ ದಾಳಿ ಮಾಡಿರಲಿಲ್ಲ. ಅವರು ಯಾವುದೇ ಆತಂಕ ಸೃಷ್ಟಿಸಿರಲಿಲ್ಲ. ಆದರೆ ಸಂಸತ್ತಿನ ಒಳಗೆ ಬರಬೇಕಾದರೆ ಒಂದು ಕಾಗದವನ್ನು ಒಳಗೆ ಬಿಡುವುದಿಲ್ಲ. ಇಂತಹ ಸಂದರ್ಭದಲ್ಲಿ ಸ್ಫೋಟಕ ವಸ್ತುಗಳನ್ನು ಒಳಗೆ ತರಲಾಗಿದೆ ಎಂದರೆ ಅದು ಭದ್ರತಾ ಲೋಪ. ಹೊಸ ಸಂಸತ್ ಭವನ ಕಟ್ಟಿದ್ದೇವೆ ಆಧುನಿಕ ತಂತ್ರಜ್ಞಾನ ಅಳವಡಿಸಿದ್ದೇವೆ ಯಾವುದೇ ಪರಿಸ್ಥಿತಿ ಬಂದರೂ ಸಂಸತ್ ಭವನ ಸುರಕ್ಷಿತ ಎಂದು ಹೇಳಿದ್ದರು. ಆದರೆ ಸದನ ನಡೆಯುತ್ತಿರುವಾಗ ಕೇವಲ ನಾಲ್ಕೈದು ಜನ ಅಕ್ರಮವಾಗಿ ನುಗ್ಗಿದ್ದಾರೆ. ಈ ಭದ್ರತಾ ವೈಫಲ್ಯದ ಬಗ್ಗೆ ನಾವು ಪ್ರಶ್ನೆ ಎತ್ತುತ್ತಿದ್ದೇವೆ. ಕುಮಾರಸ್ವಾಮಿ ಅವರು ಗಂಟೆಗೊಮ್ಮೆ ಮಾತನಾಡುತ್ತಾರೆ” ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್ ನಲ್ಲಿ ಅಜಿತ್ ಪವಾರ್ ನಂತಹ ನಾಯಕರು ಹುಟ್ಟಿಕೊಳ್ಳಲಿದ್ದು, ಈ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿಚಾರವಾಗಿ ಕೇಳಿದಾಗ, “ಭ್ರಮೆಯಲ್ಲಿರುವವರಿಗೆ ನಾವೇನು ಮಾಡಲು ಸಾಧ್ಯವಿಲ್ಲ. ಅವರು ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ. ಅಸ್ಥಿತ್ವ ಕಳೆದುಕೊಂಡವರು ಬೇರೆಯವರ ಆಶ್ರಯ ಪಡೆಯುವುದು ಸರ್ವೇ ಸಾಮಾನ್ಯ. ಅವರು ಆ ಪ್ರಕ್ರಿಯೆಯಲ್ಲಿದ್ದಾರೆ” ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಚರ್ಚೆ ನಡೆಯುತ್ತಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಸ್ವಾಗತಿಸುತ್ತೀರಾ ಎಂದು ಕೇಳಿದಾಗ, “ಕುಮಾರಸ್ವಾಮಿ ಅವರು ಎಲ್ಲೇ ಸ್ಪರ್ಧೆ ಮಾಡಿದರು ನಾನು ಸ್ವಾಗತಿಸುತ್ತೇನೆ. ನಾನು ಅವರ ಅವರ ಪತ್ನಿ ವಿರುದ್ಧ ಸ್ಪರ್ಧಿಸಿದ್ದೆ. ನಾನು ರಾಜಕಾರಣಕ್ಕೆ ಬರಲು ಹಾಗೂ ಲೋಕಸಭೆಗೆ ಬರಲು ಕುಮಾರಸ್ವಾಮಿ ಅವರೇ ಕಾರಣ. ಎಲ್ಲವನ್ನು ನಾನು ಸ್ವಾಗತಿಸುತ್ತೇನೆ” ಎಂದರು.

“ಸಂಸತ್ತಿನಲ್ಲಿ ವಿರೋಧ ಪಕ್ಷದ ಕೆಲಸ ವಿರೋಧ ಪಕ್ಷಗಳು ಮಾಡುತ್ತಿವೆ. ಅವರು ಅಧಿಕಾರಕ್ಕಾಗಿ ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರಿ ಮೈತ್ರಿ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಜನ ಏನು ತೀರ್ಮಾನ ಮಾಡಬೇಕೋ ಮಾಡುತ್ತಾರೆ. ತೀರ್ಮಾನ ಮಾಡುವ ಕಾಲ ಹತ್ತಿರವೇ ಇದೆ. ಕುಟುಂಬದವರಿಗೆ ಆಶೀರ್ವಾದ ಬೇಕಾಗಿದ್ದ ಹಿನ್ನೆಲೆಯಲ್ಲಿ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿದ್ದಾರೆ” ಎಂದು ತಿರುಗೇಟು ನೀಡಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News