ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣ: ಅಧಿಕಾರಿಗಳಿಗೆ ಚಾಟಿ ಬೀಸಿದ NGT

ನಗರಾಭಿವೃದ್ಧಿ ಆಯುಕ್ತ ಮಹೇಂದ್ರ ಜೈನ್ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ ಕೋರ್ಟ್.

Last Updated : Jan 24, 2018, 05:41 PM IST
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣ: ಅಧಿಕಾರಿಗಳಿಗೆ ಚಾಟಿ ಬೀಸಿದ NGT title=

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಆಯುಕ್ತ ಮಹೇಂದ್ರ ಜೈನ್ ಬದಲಿಗೆ ಹಾಜರಾಗಿದ್ದ ಬಿಡಿಎ ಆಯುಕ್ತ ರಾಕೇಶ್ ಸಿಂಗ್'ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಚಾಟಿ ಬೀಸಿದೆ.

ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿಗೆ ಕೆರೆಯಲ್ಲಿರುವ ಕಲುಷಿತ ನೀರು ಕಾರಣವಲ್ಲ, ಕೆರೆಯಲ್ಲಿರುವ ಹುಲ್ಲಿಗೆ ಬೆಂಕಿ ಹೊತ್ತಿರುವ ಕಾರಣ ಈ ಘಟನೆ ಸಂಭವಿಸಿದೆ. ಇದುವರೆಗೂ ಕೆರೆಯಲ್ಲಿ ಐದು ಬಾರಿ ಬೆಂಕಿ ಕಾಣಿಸಿಕೊಂಡಿದೆ. ಕೆರೆ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ನ್ಯಾಯಮಂಡಳಿ ಬಯಸಿದ್ದಲ್ಲಿ ಕ್ರಿಯಾಯೋಜನೆ ಬಗ್ಗೆ ವರದಿ ನೀಡಲಾಗುವುದು ಎಂಬ ಅಧಿಕಾರಿಗಳ ಸಮರ್ಥನೆಗೆ NGT ಅಸಮಧಾನ ವ್ಯಕ್ತಪಡಿಸಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಲು ನಗರಾಭಿವೃದ್ಧಿ ಆಯುಕ್ತ ಮಹೇಂದ್ರ ಜೈನ್ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು, ಕೇವಲ ಅಫಿಡೇವಿಟ್‌ಗಳು, ವರದಿಗಳಿಂದ ಯಾವ ಪ್ರಯೋಜನವೂ ಇಲ್ಲ ಮೊದಲು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದೆ. 

ಏತನ್ಮಧ್ಯೇ, ರಾಜ್ಯ ಸರ್ಕಾರ ಸಲ್ಲಿಸುತ್ತಿರುವ ವರದಿಯಲ್ಲಿ ಸತ್ಯಾಂಶದ ಕೊರತೆ ಇದೆ, ಹಾಗಾಗಿ ಎನ್‌ಜಿಟಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಮಾಡಿರುವ ಅರ್ಜಿದಾರರ‌ ಕೋರಿಕೆಯನ್ನು ಆಲಿಸಿದ ನ್ಯಾಯಾಧೀಕರಣ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿತು.

Trending News