ಸಾಫ್ಟ್ ವೇರ್ ಇಂಜನಿಯರ್ ನಿಂದ ಚುನಾವಣಾ ಕದನದವರೆಗೆ

    

Last Updated : Apr 8, 2018, 06:44 PM IST
ಸಾಫ್ಟ್ ವೇರ್ ಇಂಜನಿಯರ್ ನಿಂದ  ಚುನಾವಣಾ ಕದನದವರೆಗೆ title=
Photo Courtesy: Facebook

ಕೆಲವರಿಗೆ ರಾಜಕೀಯ ಎನ್ನುವುದು ಪ್ರತಿಷ್ಠೆ, ಉದ್ಯಮ, ಹಾಗೂ ವಂಶ ಪಾರಂಪರಿಕವಾಗಿ ಬಂದ ಬಳುವಳಿಯಾದರೆ. ಇನ್ನು ಕೆಲವರಿಗೆ ಸಾಮಾಜಿಕ ಕಳಕಳಿ, ಬದ್ದತೆ, ಹೋರಾಟ, ಆಶಯಗಳ ಮೂಲಕ ಕಂಡುಕೊಂಡ ಬಗೆಯಾಗಿರುತ್ತದೆ. ಹೀಗೆ ಸಾಮಾನ್ಯವಾಗಿ ನಾವು ರಾಜಕೀಯವನ್ನು ವಾಖ್ಯಾನಿಸುವ ರೀತಿ. ಆದರೆ ಪ್ರಸಕ್ತ ಸಂದರ್ಭದಲ್ಲಿ ಮೊದಲನೇಯ ಬಗೆ ಸಾಂಪ್ರಾದಾಯಿಕವಾಗಿ ರಾಜಕೀಯದಲ್ಲಿ ಹಾಸುಹೊಕ್ಕಾಗಿದ್ದರೆ, ಎರಡನೆಯ ಬಗೆ ವಾಸ್ತವದಲ್ಲಿ ಸಾಧ್ಯವಿಲ್ಲ ಎನ್ನುವಂತಿದೆ. 

ಆದರೆ ಇಲ್ಲೊಬ್ಬ ಚುನಾವಣಾ ಅಭ್ಯರ್ಥಿಯೊಬ್ಬರು ಮೌಲ್ಯಯುತ ರಾಜಕೀಯವೆನ್ನುವುದೇ ಅಪರೂಪವಾಗಿರುವ ಈ ಕಾಲಘಟ್ಟದಲ್ಲಿ ಮೌಲ್ಯದೊಂದಿಗೆ ಪರ್ಯಾಯ ರಾಜಕಾರಣದ ಮಾದರಿಯನ್ನು ಪ್ರತಿಪಾದಿಸುತ್ತಿದ್ದಾರೆ. ನಾಡಿನ ಜ್ವಲಂತ ಸಮಸ್ಯೆಗಳಿಗೆ ನಿರಂತರವಾಗಿ ಹೋರಾಟದ ಮೂಲಕ ಉತ್ತರ ಕಂಡುಕೊಳ್ಳುತ್ತಾ ಪರ್ಯಾಯ ರಾಜಕಾರಣಕ್ಕೆ ಹೊಸ ನಾಂದಿ ಹಾಡಲು ಹೊರಟಿದ್ದಾರೆ. ಹಾಗಾದರೆ  ಅವರು ಬೇರೆ ಯಾರು ಅಲ್ಲ ಸಾಮಾಜಿಕ ಹೋರಾಟಗಾರ ರವಿ ಕೃಷ್ಣಾ ರೆಡ್ಡಿ.

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿ ಅಮೆರಿಕಾದಲ್ಲಿ 10 ವರ್ಷಗಳ ಕಾಲ ಅನಿವಾಸಿ ಭಾರತೀಯರಾಗಿ ಕಾರ್ಯನಿರ್ವಹಿಸಿದ ಅವರು ಅಲ್ಲಿಯೇ ಕನ್ನಡ ಕೂಟದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು.ಆದರೆ ಕಾಲಾಂತರದಲ್ಲಿ  ತಮ್ಮ ಕಾರ್ಪೋರೆಟ್ ವೃತ್ತಿ ಬದುಕನ್ನು ತ್ಯಜಿಸಿದ ನಂತರ ಮುಂದೆ ಅವರು ಸಾಮಾಜಿಕ ಹೋರಾಟಗಳ ಮೂಲಕ ರಾಜಕಾರಣಕ್ಕೆ ಪ್ರವೇಶಿಸಿದವರು.

ಮೂಲತಃ ಬೆಂಗಳೂರಿನ ಬೊಮ್ಮಸಂದ್ರದವರಾದ ರವಿ ಕೃಷ್ಣಾರೆಡ್ಡಿ, ಹಲವಾರು ವರ್ಷಗಳ ಕಾಲ ಅಮೇರಿಕಾದಲ್ಲಿ ಟೆಕ್ಕಿಯಾಗಿ ಕಾರ್ಯನಿರ್ಹಿಸಿದ್ದರೂ ಸಹಿತ ಈ ನೆಲದ ಬಂಧವನ್ನು ಅಷ್ಟೇ ಗಟ್ಟಿಯಾಗಿ ಉಳಿಸಿಕೊಂಡವರು, ಇದೇ ಕಾರಣದಿಂದಲೇ ಏನೂ ದೂರದ ಅಮೆರಿಕದಲ್ಲಿದ್ದ ಕೆಲಸವನ್ನು ತ್ಯಜಿಸಿ, ನಾಡಿನಲ್ಲಿರುವ ಪ್ರತಿ ಸಮಸ್ಯೆಗಳಿಗೆ ಸಾಮಾಜಿಕ ಯೋಧನಂತೆ ಸ್ಪಂಧಿಸುತ್ತಿದ್ದಾರೆ. 

ಈಗ ಟೆಕ್ಕಿಯಿಂದ ಸಾಮಾಜಿಕ ಹೋರಾಟಗಾರರಾಗಿ ಪರಿವರ್ತನೆಯಾಗಿರುವ ಇವರು ಚುನಾವಣಾ ರಾಜಕಾರಣಕ್ಕೆ ಹೊಸ ಆಯಾಮವನ್ನು ನಿಡುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬೆಂಗಳೂರಿನ ಪ್ರತಿಷ್ಟಿತ ಜಯನಗರ ವಿಧಾನಸಭಾ ಅಭ್ಯರ್ಥಿಯಾಗಿದ್ದರು. 2014ರಲ್ಲಿ  ಆಮ್ ಆದ್ಮಿ ಪಕ್ಷದ ಬೆಂಗಳೂರು ಗ್ರಾಮಾಂತರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು.ಈ ಎಲ್ಲ ಸೋಲುಗಳ ನಡುವೆಯೂ ಧೃತಿಗೆಡದೆ ತಮ್ಮನ್ನು ಇನ್ನಷ್ಟು ಹೆಚ್ಚು ಕ್ರಿಯಾಶೀಲವಾಗಿ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ರವಿ ಕೃಷ್ಣಾ ರೆಡ್ಡಿಯವರ ಹೋರಾಟಗಳಲ್ಲಿ  ಪ್ರಮುಖವಾಗಿ ಗದಗ ಜಿಲ್ಲೆಯಲ್ಲಿ ತೋಂಟದಾರ್ಯ ಸ್ವಾಮೀಜಿ ಮತ್ತು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ರವರ ನೇತೃತ್ವದಲ್ಲಿ ನಡೆದ  ಕಪ್ಪತ್ತಗುಡ್ಡದ ಅರಣ್ಯ ರಕ್ಷಣೆಗಾಗಿನ ಉಪವಾಸ ಸತ್ಯಾಗ್ರಹ, ಸ್ವಾತಂತ್ರ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಯವರ ನೇತೃತ್ವದಲ್ಲಿ ನಡೆದ  39 ದಿನಗಳ ಭೂಕಬಳಿಕೆಯ ವಿರುದ್ದದ ಹೋರಾಟ, ಮತ್ತು ಮಾಹಿತಿ ಹಕ್ಕು ಕಾಯ್ದೆ ಕುರಿತಾಗಿ ತರಬೇತಿ ಕಾರ್ಯಕ್ರಮಗಳ ಆಯೋಜನೆ, ರಾಜ್ಯದಲ್ಲಿ ಮಧ್ಯ ನಿಷೇಧ ಕುರಿತಾಗಿ ಮದ್ದೂರಿನಿಂದ ಆದಿಚುಂಚನಗಿರಿವರೆಗೆ 5 ದಿನಗಳ ಪಾದಯಾತ್ರೆ ಮತ್ತು ಲಂಚಮುಕ್ತ ಕರ್ನಾಟಕ ವೇದಿಕೆಯ ಮೂಲಕ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ನಿಯಂತ್ರಣ ಹೋರಾಟದಲ್ಲಿ  ತೊಡಗಿಸಿಕೊಳ್ಳುವಿಕೆ. ಅಲ್ಲದೆ ರೈತರ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ರೈತರಲ್ಲಿ ಅರಿವು ಮೂಡಿಸುವ ಸಲುವಾಗಿ ಮದ್ದೂರಿನಿಂದ ಮಂಡ್ಯದವರೆಗೆ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.

ಈ ಬಾರಿ ಮತ್ತೆ ಬೆಂಗಳೂರಿನ ಜಯನಗರದ ವಿಧಾನಸಭಾ ಕ್ಷೇತ್ರಕ್ಕೆ ಸ್ವರಾಜ್ ಇಂಡಿಯಾ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈಗ ಅವರು ತಮ್ಮ ಚುನಾವಣಾ ಪ್ರಚಾರವನ್ನು ಈ ಹಿಂದೆ  ಕರ್ನಾಟಕದಲ್ಲಿ ಸಮಾಜವಾದಿ ರಾಜಕಾರಣಿಯಾಗಿದ್ದ ಶಾಂತವೇರಿ ಗೋಪಾಲಗೌಡರ ಪರಿಕಲ್ಪನೆಯ  'ಒಂದು ವೋಟು ಒಂದು ನೋಟು' ದೇಣಿಗೆ ಸಂಗ್ರಹದ ಅಭಿಯಾನದ ಮೂಲಕ ಮಾಡುತ್ತಿದ್ದಾರೆ. ಆ ಮೂಲಕ ಜಾತಿ ಬಲ,ಹಣ ಬಲ, ತೋಳ್ಬಲ ಎನ್ನುವುದೇ ಸಾಮಾನ್ಯವಾಗಿರುವ ಈಗಿನ ಕಾಲಘಟ್ಟದಲ್ಲಿ ರವಿಕೃಷ್ಣಾ ರೆಡ್ಡಿ ಎಲ್ಲರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾರೆ ಎನ್ನುವುದರಲ್ಲಿ ತಪ್ಪಿಲ್ಲ.

Trending News