ರಾಜ್ಯಕ್ಕೆ ವಿದ್ಯುತ್ ಸಂಕಷ್ಟ: ಶ್ವೇತಪತ್ರ ಹೊರಡಿಸಲು ಎಚ್.ಡಿ.ಕುಮಾರಸ್ವಾಮಿ ಆಗ್ರಹ

ಕೃತಕ ಕತ್ತಲು ಸೃಷ್ಟಿಸಿ ಕಳ್ಳಬೆಕ್ಕಿನಂತೆ ಕದ್ದು ಹಾಲು ಕುಡಿಯುತ್ತೇವೆ ಎಂದರೆ ಆಗುವುದಿಲ್ಲ. ಜನರಿಗೂ ಕಳ್ಳಬೆಕ್ಕಿನ ಕಣ್ಣಾಮುಚ್ಚಾಲೆ ಈಗೀಗ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Oct 10, 2023, 01:05 PM IST
  • ವಿದ್ಯುತ್ ಕೊರತೆಯಿಂದ ರೈತರು ಕಷ್ಟದಲ್ಲಿದ್ದರೆ ಇಂಧನ ಸಚಿವರಿಂದ ಮೌನವ್ರತ!!
  • ನವರಾತ್ರಿಗೆ ಕತ್ತಲೆಭಾಗ್ಯ ಖಾತರಿ; ಹೊಸ ವರ್ಷಕ್ಕೆ ಜಾರಿ
  • ಅನಧಿಕೃತ ಲೋಡ್ ಶೆಡ್ಡಿಂಗ್ ಗೆ ಮಾಜಿ ಮುಖ್ಯಮಂತ್ರಿ ಕಿಡಿ
ರಾಜ್ಯಕ್ಕೆ ವಿದ್ಯುತ್ ಸಂಕಷ್ಟ: ಶ್ವೇತಪತ್ರ ಹೊರಡಿಸಲು ಎಚ್.ಡಿ.ಕುಮಾರಸ್ವಾಮಿ ಆಗ್ರಹ title=
ರಾಜ್ಯಕ್ಕೆ ವಿದ್ಯುತ್ ಸಂಕಷ್ಟ!

ಬೆಂಗಳೂರು: ನವರಾತ್ರಿಗೆ ಮೊದಲಿಗೆ ರಾಜ್ಯದ ಜನರಿಗೆ ಕತ್ತಲೆಭಾಗ್ಯ ಖಾತರಿಪಡಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸ ವರ್ಷಕ್ಕೆ ಅದನ್ನು ಜಾರಿ ಮಾಡಲು ಹುನ್ನಾರ ನಡೆಸಿದೆ. ಇದು 6ನೇ ಗ್ಯಾರಂಟಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಬಗ್ಗೆ ಸುದೀರ್ಘ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಸರ್ಕಾರದ ದೂರದೃಷ್ಟಿಯ ಕೊರತೆ ಹಾಗೂ ನಿರ್ವಹಣಾ ವೈಫಲ್ಯದಿಂದ ಕರ್ನಾಟಕವನ್ನು ಇತಿಹಾಸದಲ್ಲಿ ಹಿಂದೆಂದೂ ಕಂಡೂ ಕೇಳರಿಯದ ವಿದ್ಯುತ್ ಕ್ಷಾಮಕ್ಕೆ ದೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ 5 ಅರೆಬರೆ ಗ್ಯಾರಂಟಿಗಳನ್ನು ಕೊಟ್ಟು ಕೈತೊಳೆದುಕೊಂಡಿದೆ. ಸರಿ, ಶೀಘ್ರವೇ ಅರೆಬರೆ ಅಲ್ಲದ ಪರಿಪೂರ್ಣವಾದ 6ನೇ ಗ್ಯಾರಂಟಿ (!?) ಕೊಡಲು ಸನ್ನಾಹವನ್ನೂ ನಡೆಸಿದೆ! ಅದರ ಹೆಸರು ಕತ್ತಲೆಭಾಗ್ಯ!! ಡಿಸೆಂಬರ್ ತಿಂಗಳ ಹೊತ್ತಿಗೆ ಕರ್ನಾಟಕ ಈ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ. ಜನವರಿ ಅಂದರೆ 2024ರ ಹೊಸ ವರ್ಷಕ್ಕೆ ತಾನು ಕೊಟ್ಟ ಗೃಹಜ್ಯೋತಿಗೆ ಎಳ್ಳುನೀರು ಬಿಟ್ಟು ಕಗ್ಗತ್ತಲ ಕರ್ನಾಟಕದ ಉದಯ ಮಾಡಿಸುವುದು ಗ್ಯಾರಂಟಿ.. ಗ್ಯಾರಂಟಿ. ಇದು ಸತ್ಯ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾವೇರಿ ಬಗ್ಗೆ ಸರ್ಕಾರ ಕಳ್ಳಾಟ ಆಡಿದೆ. ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯದ ವಿರುದ್ಧ ನಿಲುವಳಿ ಸೂಚನೆ ಅಂಗೀಕಾರವಾಗಿದೆ. ಎಮ್ಮೆ ಚರ್ಮದ ಸರ್ಕಾರಕ್ಕೆ ಕಾವೇರಿ ಒಡಲಾಳದ ಬೇಗುದಿ ಬಗ್ಗೆ ಜಾಣ ಕುರುಡು. ಸರ್ಕಾರ ರಾಜ್ಯದ ಉದ್ದಗಲಕ್ಕೂ ಅನಧಿಕೃತ ಲೋಡ್ ಶೆಡ್ಡಿಂಗ್ ಹೇರಿ ದಿನಕ್ಕೆ 2 ಗಂಟೆ ವಿದ್ಯುತ್ತಿಗೂ ದಿಕ್ಕಿಲ್ಲದ ದುಸ್ಥಿತಿ ನಿರ್ಮಾಣ ಮಾಡಿದೆ. ನಮ್ಮ ರೈತರಿಗೆ ಲೋಡ್ ಶೆಡ್ಡಿಂಗ್, ತಮಿಳುನಾಡಿಗೆ ಸಮೃದ್ಧ ನೀರು!! ಎಂದು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ ರಾಯಭಾಗ ಯಲ್ಪಾರಟ್ಟಿ ಕೆಇಬಿ ಮುತ್ತಿಗೆ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿದ್ಯುತ್ ಅಭಾವದಿಂದ ಬೆಳೆಗಳು ಒಣಗುತ್ತಿವೆ. ನಾಲೆಗಳಲ್ಲೂ ನೀರಿಲ್ಲ, ಬೋರ್‍ವೆಲ್‍ಗಳಿಂದ ಪಂಪ್ ಮಾಡಲು ವಿದ್ಯುತ್ತೂ ಇಲ್ಲ. ಮೊದಲೇ ಕಷ್ಟದಲ್ಲಿರುವ ರೈತನ ಬೆನ್ನಿನ ಮೇಲೆ ಬರೆಯ ಮೇಲೆ ಬರೆ ಎಳೆಯುತ್ತದೆ ಸರ್ಕಾರ. ವಿದ್ಯುತ್ ಕ್ಷಾಮಕ್ಕೆ ಮೊದಲೇ ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಬಂಜರು ಬಿದ್ದಿದೆ. ಉತ್ಪಾದನೆಗೆ ಅಗತ್ಯವಾದ ಮೂಲಗಳ ಕ್ಷಾಮಕ್ಕೆ ತುತ್ತಾಗಿ, ಪರರಾಜ್ಯಗಳ ಮುಂದೆ ದೈನೇಸಿಯಾಗಿ ನಿಂತು ವಿದ್ಯುತ್ ಸಾಲಕ್ಕೆ ಅರ್ಜಿ ಹಾಕಿಕೊಳ್ಳುತ್ತಿದೆ. ಜಲ, ಪವನ, ಸೌರ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಇದು ದೂರದೃಷ್ಟಿಯ ಕೊರತೆ ಹಾಗೂ ನಿರ್ವಹಣೆಯ ವೈಫಲ್ಯವೆಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಜಲಾಶಯಗಳು ಖಾಲಿಯಾಗಿದ್ದು, ವಿದ್ಯುತ್ ಉತ್ಪಾದನೆ ಮಿತವಾಗಿ ಮಾಡುವಂತೆ ಸರ್ಕಾರವೇ ಆದೇಶಿಸಿದೆ. ಇನ್ನೊಂದೆಡೆ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಬವಣೆಯಿಂದ ಅಲ್ಪಸ್ವಲ್ಪ ಉತ್ಪಾದಿಸುತ್ತಿವೆ. ರಾಜ್ಯದ ಒಟ್ಟಾರೆ ಬೇಡಿಕೆಯಲ್ಲಿ ಶೇ.20ರಷ್ಟು ವಿದ್ಯುತ್ತನ್ನು ಸರ್ಕಾರ ಹೊರಗಿನಿಂದಲೇ ಪಡೆಯುತ್ತಿದೆ. ರಾಜ್ಯವನ್ನು ವಿದ್ಯುತ್ ಸಾಲಕ್ಕೆ ತಳ್ಳಿ, ಕರುನಾಡನ್ನು ಬರ್ಬಾದ್ ಮಾಡಲಿದೆ ಕಾಂಗ್ರೆಸ್ ಸರ್ಕಾರ. ಆದರೆ ವಿದ್ಯುತ್ ಸಾಲ ನೀಡುವ ಸ್ಥಿತಿಯಲ್ಲಿ ಇತರೆ ರಾಜ್ಯಗಳೂ ಇಲ್ಲ. ಹಾಗಾದರೆ ಮುಂದೇನು? ಸಂಬಂಧಪಟ್ಟ ಸಚಿವರು ಮೌನವ್ರತ ಮಾಡುತ್ತಿದ್ದಾರೆಯೇ? ಎಂದು ಇಂಧನ ಸಚಿವರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಡ್ಡದಾರಿಯಲ್ಲಿ ಅಧಿಕಾರ ಪಡೆಯಲು 5 ಗ್ಯಾರಂಟಿ ಕೊಟ್ಟ ಕಾಂಗ್ರೆಸ್, 6ನೇ ಗ್ಯಾರಂಟಿ ಕತ್ತಲೆಭಾಗ್ಯವನ್ನು ನವರಾತ್ರಿಗೆ ಮೊದಲೇ ಖಾತರಿಪಡಿಸಿದೆ. ಈ ಹೊಸ ಭಾಗ್ಯ ಡಿಸೆಂಬರಿಗೋ, ಜನವರಿಗೋ ಎಂದಷ್ಟೇ ತೀರ್ಮಾನ ಆಗಬೇಕಿದೆ. ನಿರ್ವಹಣೆ, ರಿಪೇರಿ ನೆಪದಲ್ಲಿ ಇಡೀದಿನ ವಿದ್ಯುತ್ ಕಡಿತ ಮಾಡುತ್ತಿರುವ ಸರ್ಕಾರದ ಸದಾರಮೆ ಆಟ ಈಗಷ್ಟೇ ಗೊತ್ತಾಗುತ್ತಿದೆ. ಹಿಂದೆ ಬರದಂತಹ ಕ್ಲಿಷ್ಟಸ್ಥಿತಿ ಇದ್ದರೂ ವಿದ್ಯುತ್ ಖರೀದಿಗೆ ಹಣ ಇರುತ್ತಿತ್ತು. ಈಗ ಖಜಾನೆ ಖಾಲಿಯಂತೆ!! ಎಂದು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಬೃಹತ್ ಮೊಸಳೆ ಗ್ರಾಮದ ರಸ್ತೆಯಲ್ಲಿ ಪ್ರತ್ಯಕ್ಷ.. ಹೆಚ್ಚಿದ ಆತಂಕ

ಲೋಕಸಭೆ ಚುನಾವಣೆವರೆಗೂ ಜನರನ್ನು ಗ್ಯಾರಂಟಿಗಳ ಅಮಲಿನಲ್ಲಿ ತೇಲಿಸಿ ತೇಲಿಸಿ.. ಆಮೇಲೆ ಕೈ ಎತ್ತಿಬಿಡುವ ದುಷ್ಟ ಹುನ್ನಾರ ಸರ್ಕಾರದ್ದು. ಆ ಕಾರಣಕ್ಕಾಗಿಯೇ ಸರ್ಕಾರ ಸತ್ಯ ಮರೆಮಾಚಿ ಮೊಸಳೆ ಕಣ್ಣೀರು ಹಾಕುತ್ತಿದೆ. ಆದರೆ ಕತ್ತಲೆಭಾಗ್ಯ ಕರುಣಿಸುವ ಮುನ್ನ ಜನತೆಗೆ ಸತ್ಯವನ್ನೇ ಹೇಳಲಿ ಬೇಡ ಎಂದವರು ಯಾರು? ಕೂಡಲೇ ವಿದ್ಯುತ್ ದುಸ್ಥಿತಿಯ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ವಿದ್ಯುತ್ ಸಾಲಕ್ಕೂ ದಿಕ್ಕಿಲ್ಲದ ಸರ್ಕಾರವು, ಖಾಸಗಿ ವಿದ್ಯುತ್ ಪೂರೈಕೆದಾರರಿಗೆ ಕಳೆದ 6-7 ತಿಂಗಳಿಂದ ಬಾಕಿ ಹಣ ನೀಡಿಲ್ಲವೆನ್ನುವ ಮಾಹಿತಿ ಇದೆ. ಕೆಲ ಕಂಪನಿಗಳಿಗೆ 11 ತಿಂಗಳಿಂದ ಬಿಡಿಗಾಸು ಕೊಟ್ಟಿಲ್ಲವಂತೆ. ಇದು ಹೌದಾ? ಹೌದು, ಎಂದಾದರೆ ರಾಜ್ಯದ ಭವಿಷ್ಯದ ಗತಿ ಏನು? ಕೃಷಿ-ಕೈಗಾರಿಕೆಗಳ ಪಾಡೇನು? ಬೇಕಾಬಿಟ್ಟಿ ಬೆಲೆ ಏರಿಕೆ ಬರೆ ಎಳೆಸಿಕೊಂಡು ಏದುಸಿರು ಬಿಡುತ್ತಿರುವ ಜನರಿಗೆ ಸರ್ಕಾರದ ಉತ್ತರವೇನು? ಎಂದು ಅವರು ಪ್ರಶ್ನಿಸಿದ್ದಾರೆ. ಕೃತಕ ಕತ್ತಲು ಸೃಷ್ಟಿಸಿ ಕಳ್ಳಬೆಕ್ಕಿನಂತೆ ಕದ್ದು ಹಾಲು ಕುಡಿಯುತ್ತೇವೆ ಎಂದರೆ ಆಗುವುದಿಲ್ಲ. ಜನರಿಗೂ ಕಳ್ಳಬೆಕ್ಕಿನ ಕಣ್ಣಾಮುಚ್ಚಾಲೆ ಈಗೀಗ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News