ಕರಾವಳಿ, ಕೊಡಗಿನಲ್ಲಿ ಮತ್ತೆ ಮಳೆ ಅಬ್ಬರ: ಕೊಡಗು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

ರಾಜ್ಯದ ಕರಾವಳಿ, ಕೊಡಗು, ಮಲೆನಾಡು ಭಾಗದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು.

Last Updated : Aug 9, 2018, 09:47 AM IST
ಕರಾವಳಿ, ಕೊಡಗಿನಲ್ಲಿ ಮತ್ತೆ ಮಳೆ ಅಬ್ಬರ: ಕೊಡಗು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಕರಾವಳಿ, ಕೊಡಗು, ಮಲೆನಾಡು ಭಾಗದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದ್ದು, ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ವರುಣನ ಅಬ್ಬರದ ಜೊತೆಗೆ ಗಾಳಿ ಮತ್ತಷ್ಟು ತೀವ್ರಗೊಂಡಿದ್ದು, ಕೊಡಗು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಗುರುವಾರ ಜಿಲ್ಲಾಡಳಿತ ರಜೆ ಘೋಷಿಸಿದೆ. 

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೇ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬುಧವಾರ ಭಾಗಮಂಡಲ ಮತ್ತು ಮಡಿಕೇರಿಯಲ್ಲಿ ರಾಜ್ಯದಲ್ಲಿಯೇ ಅಧಿಕ 11 ಸೆಂ.ಮೀ.ಗಳಷ್ಟು ಮಳೆ ಸುರಿಯಿತು. ಕೊಡಗಿನಲ್ಲಿ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ವ್ಯಾಪ್ತಿಯ ರಸ್ತೆಗಳು ಜಲಾವೃತಗೊಂಡಿದ್ದು, ಕಕ್ಕಬ್ಬೆ ಹೊಳೆ ಬದಿಯಲ್ಲಿ ರಾತ್ರಿ ನಿಲ್ಲಿಸಿದ್ದ ಖಾಸಗಿ ಬಸ್ಸೊಂದು ನೀರಿನಲ್ಲಿ ಮುಳುಗಿತ್ತು. ಬಳಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಬೇರೊಂದು ಬಸ್ ನಲ್ಲಿ ಕರೆತರಲಾಗಿದೆ.

ಇನ್ನು ಕರಾವಳಿ ಭಾಗದಲ್ಲೂ ಉತ್ತಮ ಮಳೆಯಾಗುತ್ತಿದ್ದು, ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿನ ನೀರು ಅಪಾಯದ ಮಟ್ಟಕ್ಕೆ ತಲುಪುತ್ತಿವೆ. 

Trending News