ನಾನೆಂದೂ ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ: ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಸಾರ್ವಜನಿಕ ಜೀವನದಲ್ಲಾಗಲಿ, ವೈಯಕ್ತಿಕ ಜೀವನದಲ್ಲಾಗಲಿ ಮಹಿಳೆಯರನ್ನು ಅಗೌರವದಿಂದ ಮಾತನಾಡಿಸಿಯೂ ಇಲ್ಲ, ಅವಮಾನಸಿಯೂ ಇಲ್ಲ. ಬೇಕಾದರೆ ಇದರ ಬಗ್ಗೆ ಚರ್ಚೆ ನಡೆಯಲಿ ಎಂದು ಸಿಎಂ ಕುಮಾರಸ್ವಾಮಿ ಕಿಡಿ ಕಾರಿದರು. 

Last Updated : Nov 19, 2018, 08:17 PM IST
ನಾನೆಂದೂ ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ: ಸಿಎಂ ಹೆಚ್.ಡಿ.ಕುಮಾರಸ್ವಾಮಿ title=

ಬೆಂಗಳೂರು: ನನಗೆ ನನ್ನ ಜವಾಬ್ದಾರಿ ಚೆನ್ನಾಗಿ ಗೊತ್ತಿದೆ. ನಾನೆಂದೂ ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. 

ರೈತ ಮಹಿಳೆ ಬಗ್ಗೆ ಅವಹೇಳನಕಾರಿ ಹೇಳಿಕೆ ಬಗ್ಗೆ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, "ನಾನು ಆ ಹೆಣ್ಣು ಮಗಳಿಗೆ ತಾಯಿ ಅಂತಾ ಪದ ಬಳಸಿದ್ದೇನೆ. ಅಲ್ಲ ತಾಯಿ ಇಷ್ಟು ದಿನ ಎಲ್ಲಿಗೆ ಹೋಗಿದ್ದೆ? ಎಲ್ಲಿ ಮಲಗಿದ್ದೇ ಅಂತಾ ಹೇಳಿದ್ದೆ. ಆದರೆ ಇದನ್ನೇ ತಪ್ಪಾಗಿ ಅರ್ಥೈಸಲಾಗಿದೆ. ನಾನು ಗ್ರಾಮೀಣ ಪ್ರದೇಶದಿಂದ ಬಂದವನು. ಹೀಗಾಗಿ ಈ ಪದ ನನ್ನ ಬಾಯಿಂದ ಬಂದಿದೆ. ನಾನು ಮಹಿಳೆಯರಿಗೆ ಗೌರವ ನೀಡುತ್ತೇನೆ, ನನ್ನ ಹೇಳಿಕೆಯಲ್ಲಿ ಯಾವ ದುರುದ್ದೇಶವೂ ಇರಲಿಲ್ಲ, ಆದರೆ ಇದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಒಂದು ವೇಳೆ ನನ್ನ ಹೇಳಿಕೆಯಿಂದ ಆ ಮಹಿಳೆಗೆ ಅವಮಾನ ಆಗಿದೆ ಎಂದಾದರೆ ನಾನು ಬಳಸಿರುವ ಪದವನ್ನು ವಾಪಸ್ ಪಡೆಯುತ್ತೇನೆ. ಆದರೆ ಆ ಹೆಣ್ಣು ಮಗಳು ರಾಜ್ಯದ ಮುಖ್ಯಮಂತ್ರಿಗೆ ನಾಲಾಯಕ್ ಅನ್ನೋ ಪದ ಬಳಸಿ ಅವಮಾನ ಮಾಡಿದ್ದಾಳೆ. ಅಂತಹ ಅಪಮಾನ ಮಾಡಿದ್ದಾಗಿದ್ದರೆ ಒಂದು ಕ್ಷಣವೂ ನನ್ನ ಸ್ಥಾನದಲ್ಲಿ ಇರಲ್ಲ. ರಾಜೀನಾಮೆ ನೀಡಲು ಸಿದ್ಧ. ನನ್ನ ಹೇಳಿಕೆ ಬಗ್ಗೆ ತುಂಬಾ ಚರ್ಚೆಯಾಗಿದೆ. ಅದನ್ನು ವಾಪಸ್ ಪಡೆಯಬೇಕಿದ್ದರೆ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಘಟನೆ ಸಂಬಂಧ ಮಾಧ್ಯಮದ ಮೇಲೂ ಕಿಡಿಕಾರಿದ ಸಿಎಂ, "ಸಾರ್ವಜನಿಕ ಜೀವನದಲ್ಲಾಗಲಿ, ವೈಯಕ್ತಿಕ ಜೀವನದಲ್ಲಾಗಲಿ ಮಹಿಳೆಯರನ್ನು ಅಗೌರವದಿಂದ ಮಾತನಾಡಿಸಿಯೂ ಇಲ್ಲ, ಅವಮಾನಸಿಯೂ ಇಲ್ಲ. ಬೇಕಾದರೆ ಇದರ ಬಗ್ಗೆ ಚರ್ಚೆ ನಡೆಯಲಿ. ಹೇಳಬೇಕಾದ್ದನ್ನು ಬಿಟ್ಟು ಬೇರೆಲ್ಲವನ್ನೂ ಮಾಧ್ಯಮಗಳು ವ್ಯವಸ್ಥಿತವಾಗಿ ಬಿತ್ತರಿಸುತ್ತಿವೆ. ನನ್ನನ್ನು ಟೀಕಿಸುವುದರಿಂದ ಮಾಧ್ಯಮಗಳಿಗೆ ಏನೂ ಸಿಗಲಾರದು. ನನ್ನ ಪ್ರತಿಕೃತಿಗೆ ಕೊಡಲಿ ಏಟು ಹಾಕಿದ ದೃಶ್ಯವನ್ನು ಪದೇ ಪದೆ ತೋರಿಸಿದ್ದರಿಂದ ಮಾಧ್ಯಮಗಳಿಗೆ ಸಿಕ್ಕಿದ್ದಾದರೂ ಏನು? ಇದರಿಂದ ಮುಗ್ಧ ಜನರಿಗೆ ತಪ್ಪು ಸಂದೇಶ ಹೋಗುತ್ತದೆ” ಎಂದರು.

Trending News