ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ; ಉಪಮುಖ್ಯಮಂತ್ರಿ ಭರವಸೆ

ಕೋರಾ ಗ್ರಾಮ ಪಂಚಾಯತಿಯಲ್ಲಿ‌ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಿಂದ ಅಹವಾಲು ಸ್ವೀಕರಿಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್.

Updated: Oct 10, 2018 , 03:08 PM IST
ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ; ಉಪಮುಖ್ಯಮಂತ್ರಿ ಭರವಸೆ

ತುಮಕೂರು: ವಸಂತನರಸಾಪುರದಲ್ಲಿ ಕೈಗಾರಿಕಾ ವಲಯ‌ ನಿರ್ಮಾಣವಾಗುತ್ತಿದ್ದು, ಇಲ್ಲಿನ ಕೈಗಾರಿಕೆಗಳಿಗೆ ಕೆಲಸಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಸ್ಥಳೀರಿಗೆ ಮೊದಲ ಆದ್ಯತೆ‌ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.

ಕೋರಾ ಗ್ರಾಮ ಪಂಚಾಯತಿಯಲ್ಲಿ‌ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಿಂದ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಎಲ್ಲ ಗ್ರಾಮಗಳಲ್ಲಿ ರಸ್ತೆ, ದೇವಸ್ಥಾನ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ‌, ಶಿಥಿಲಗೊಂಡ ಶಾಲಾ ಕಟ್ಟಡ ಮರು ನಿರ್ಮಾಣ ಬಗ್ಗೆ ಪಟ್ಟಿ ಮಾಡಲು ಆಯಾ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಹೇಳಿದ್ದೇನೆ. ಶೀಘ್ರವಾಗಿ ಪಟ್ಟಿ ನೀಡಿದರೆ ಹಣ ಮಂಜೂರು ಮಾಡಲು ಹಾಗೂ ಈ ಸಮಸ್ಯೆ ನಿವಾರಣೆಗೆ ಸಂಬಂಧ ಪಟ್ಟ ಸಚಿವರುಗಳಿಗೆ ತಿಳಿಸುವುದಾಗಿ ಹೇಳಿದರು.

ಈಗಾಗಲೇ ಕೊರಟಗೆರೆ ತಾಲೂಕಿನಲ್ಲಿ ಪಟ್ಟಿ ನೀಡಿದ್ದಾರೆ. 1 ಸಾವಿರ ಕೋಟಿ ರೂ.ಗಳನ್ನು ಶಾಲೆಗಳ ದುರಸ್ಥಿಗೆ ಮೀಸಲಿಡಲಾಗಿದೆ. ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಈ ಭಾಗದಲ್ಲಿ ಬಸ್‌ ವ್ಯವಸ್ಥೆ ಕಡಿಮೆ ಎಂಬ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅವರು, ಈಗಾಗಲೇ ಕೆಎಸ್‌ಆರ್‌ಟಿ ಅಧಿಕಾರಿಗಳೊಂದಿಗೆ ಈ ಸಂಬಂಧ ಮನವಿ ಮಾಡಿರುವುದಾಗಿ ತಿಳಿಸಿದರು.

ಈ ಭಾಗದಲ್ಲಿ ಕಸ ಯಾರ್ಡ್‌ ಇರುವ ಬಗ್ಗೆಯೂ ಅಪಸ್ವರ ಎತ್ತಿದ ಗ್ರಾಮಸ್ಥರಿಗೆ, ಇನ್ನುಮುಂದೆ ಈ ಭಾಗದಲ್ಲಿ ಕಸ ಹಾಕದಂತೆ ಹಾಗೂ ಈಗಿರುವ ಕಸದ ರಾಶಿಯ ವಾಸನೆ ಬಾರದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.