ಜಮೀನಿಗೆ ಸಮಾನ ಪರಿಹಾರ ಕೊಡಿಸುವುದು ನನ್ನ ಜವಾಬ್ದಾರಿ; ಉಪಮುಖ್ಯಮಂತ್ರಿ ಭರವಸೆ

ಜನಸಮುದಾಯ ಸಮುದಾಯದ ಸಮಸ್ಯೆ ಕೇಳಲು ನೇರವಾಗಿ ಬಂದಿದ್ದೇನೆ. ಜನರು ಅರ್ಜಿ ಮೂಲಕ ಅಥವಾ ನೇರವಾಗಿಯೇ ಸಮಸ್ಯೆಯನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ಇರಲಿದೆ- ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ

Last Updated : Jun 24, 2019, 07:58 AM IST
ಜಮೀನಿಗೆ ಸಮಾನ ಪರಿಹಾರ ಕೊಡಿಸುವುದು ನನ್ನ ಜವಾಬ್ದಾರಿ; ಉಪಮುಖ್ಯಮಂತ್ರಿ ಭರವಸೆ title=
File Image

ಕೊರಟಗೆರೆ: ಎತ್ತಿನಹೊಳೆ ಯೋಜನೆಗೆ ಮುಳುಗಡೆಯಾಗುವ ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕಿನ ಪ್ರದೇಶಗಳ ಜಮೀನಿಗೆ ಸಮಾನ ಮೊತ್ತ ಕೊಡಿಸದಿದ್ದರೆ ಜಮೀನು‌ ನೀಡುವುದೇ ಬೇಡ. ಆದರೆ ಸಮಾನ ಮೊತ್ತ ಕೊಡಿಸುವ ಜವಾಬ್ದಾರಿ ನನ್ನದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಕೊರಟಗೆರೆಯ ಚಿನ್ನಹಳ್ಳಿಯಲ್ಲಿ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು,  ಜನಸಮುದಾಯ ಸಮುದಾಯದ ಸಮಸ್ಯೆ ಕೇಳಲು ನೇರವಾಗಿ ಬಂದಿದ್ದೇನೆ. ಜನರು ಅರ್ಜಿ ಮೂಲಕ ಅಥವಾ ನೇರವಾಗಿಯೇ ಸಮಸ್ಯೆಯನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ಇರಲಿದೆ. ಸಂಬಂಧಪಟ್ಟ ಅಧಿಕಾರಿಗಳು ಸಹ ಇದ್ದಾರೆ.  

ತುಮಕೂರಿನ ಬಹುತೇಕ ಕಡೆ ನೀರಿನ ಸಮಸ್ಯೆ ಇದೆ. ಅಂತರ್ಜಲ ಸಹ ಕುಸಿದಿದೆ. ಹೀಗಾಗಿ ಎತ್ತಿನಹೊಳೆ ಯೋಜನೆಯನ್ನು 13,500 ಕೋಟಿ ರೂ. ವೆಚ್ಚದಲ್ಲಿ ನೀರು ತರುವ ಯೋಜನೆ ಮಾಡಿದ್ದೇವೆ.  ಕೊರಟಗೆರೆ ತಾಲೂಕಿನ ಬೈಲಗೊಂಡನಹಳ್ಳಿಯಲ್ಲೇ ಶೇಖರಣೆ ಮಾಡಲಿದ್ದೇವೆ. ಹೀಗಾಗಿ 9 ಹಳ್ಳಿ ಸ್ಥಳಾಂತರ ಮಾಡಬೇಕಿದೆ. ಸ್ಥಳಾಂತರಗೊಳ್ಳುವ ರೈತರಿಗೆ ಸೂಕ್ತ ಪರಿಹಾರವನ್ನು ನೀಡಲಾಗುತ್ತಿದೆ ಎಂದರು.

ಸಮಾನ ಮೊತ್ತ ಭರಿಸದಿದ್ದರೆ ಭೂಮಿ ನೀಡಲು ನಾನೇ ಒಪ್ಪುವುದಿಲ್ಲ:
ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ಭಾಗದ ಭೂಮಿಗೆ ಸಮಾನ ಮೊತ್ತ ಭರಿಸದಿದ್ದರೆ ಭೂಮಿ ನೀಡಲು ನಾನೇ ಒಪ್ಪುವುದಿಲ್ಲ. ಇದಕ್ಕೆ ನನ್ನ ಅಧ್ಯಕ್ಷತೆಯಲ್ಲೇ ಸಮಿತಿ ರಚಿಸಲಾಗಿದೆ. ಹೀಗಾಗಿ ನಮ್ಮ ತಾಲೂಕಿನ ಜನರಿಗೆ ನಷ್ಟ ಆಗಲು ಬಿಡುವುದಿಲ್ಲ. ಎಲ್ಲಾ ರೈತರು ಭೂಮಿ ನೀಡಲು ಸಹಕರಿಸಬೇಕು. ಈಗಾಗಲೇ ಯೋಜನೆಗೆ 6,500 ಕೋಟಿ ವೆಚ್ಚ ಮಾಡಲಾಗಿದ್ದು, ಆದಷ್ಟು ಬೇಗ ಯೋಜನೆ ಪೂರ್ಣವಾಗಲಿದೆ. ಈ ಯೋಜನೆಯಿಂದ ನಮ್ಮ ಜಿಲ್ಲೆಯ 34 ಕೆರೆಗಳನ್ನು ಮರುಪೂರಣ ಮಾಡಲಾಗುತ್ತದೆ. ಭೂಮಿಯ ಅಂತರ ಜಲ ಸಹ ಉತ್ತಮವಾಗಲಿದೆ. ನೀರಾವರಿ ಯೋಜನೆ ಸಹ ಮಾಡಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

46 ಸಾವಿರ ಕೋಟಿ ರೂ. ಸಾಲಮನ್ನಾ:
46 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿ, ಅಧಿಕಾರಿಗಳೇ ಋಣಮುಕ್ತ ಪತ್ರವನ್ನು ತಲುಪಿಸುತ್ತಿದ್ದಾರೆ. 2019 ಪೂರ್ಣವಾಗುವ ಒಳಗೆ ಸಾಲಮನ್ನಾ ಪೂರ್ಣವಾಗಲಿದೆ.  ಅರ್ಜಿಗಳ ಮೂಲಕ ನಿಮ್ಮ ಸಮಸ್ಯೆ ಹೇಳಿಕೊಂಡಿದ್ದೀರಾ. ಆ ಎಲ್ಲಾ ಅರ್ಜಿಗಳನ್ನು ಆದಷ್ಟು ಶೀಘ್ರವಾಗಿ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರಕಾರ ನಿಮ್ಮ ಬಳಿಯೇ ಬಂದಿದೆ ಎಂದರು.

ರಾಜ್ಯಾದ್ಯಂತ ಇಂಥ ಜನಸಂಪರ್ಕ ಕಾರ್ಯಕ್ರಮ ನಡೆಯಬೇಕು. ಮುಂದಿನ ದಿನಗಳಲ್ಲಿ ಈ ಕೆಲಸವನ್ನು ಶಾಸಕರು ಅವರ ಕ್ಷೇತ್ರದಲ್ಲಿ ಮುಂದುವರೆಸಲಿದ್ದಾರೆ. ಅವರೊಂದಿಗೆ ನಾನು ಸಹ ತೆರಳಲಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಆಗಾಗ್ಗೆ ನಡೆಯಲಿದೆ ಎಂದರು.  

ಮಳೆಗಾಲ ಪ್ರಾರಂಭವಾಗಿದೆ. ಕೃಷಿ ಇಲಾಖೆ ಚುರುಕಾಗಬೇಕು. ಗೊಬ್ಬರ , ಬೀಜ ವಿತರಣೆಯಲ್ಲಿ ಕೊರತೆಯಾಗಬಾರದು. ಎಲ್ಲಾ ಇಲಾಖೆ ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಪರಮೇಶ್ವರ ಸೂಚಿಸಿದರು.
 

Trending News