ನವದೆಹಲಿ: ಬಹುನಿರೀಕ್ಷಿತ ರಾಜ್ಯ ವಿಧಾನಸಭಾ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಮೇ 12ಕ್ಕೆ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತರಾದ ಓಂ ಪ್ರಕಾಶ್ ರಾವತ್ ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ 12ಕ್ಕೆ ನಿಗದಿಯಾಗಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 15ರಂದು ಮತ ಎಣಿಕೆ ನಡೆಯಲಿದೆ. ತಕ್ಷಣವೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 4,96,357 ಕೋಟಿ ಮತದಾರರಿದ್ದು, 56,696 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಈ ಬಾರಿ ಇವಿಎಂ ಜತೆ ವಿವಿ ಪ್ಯಾಟ್ (ಮತ ಖಾತರಿ ಯಂತ್ರ) ಬಳಸಲಾಗುವುದು. ದಿವ್ಯಾಂಗರಿಗೆ ವಿಶೇಷ ಮತದಾನ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಚುನಾವಣೆಯ ಪ್ರಮುಖ ದಿನಾಂಕಗಳು
- ನಾಮಪತ್ರ ಸಲ್ಲಿಕೆ : ಏಪ್ರಿಲ್ 17, 2018
- ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 24, 2018
- ನಾಮಪತ್ರ ಪರಿಶೀಲನೆ : ಏಪ್ರಿಲ್ 25, 2018
- ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಏಪ್ರಿಲ್ 27, 2018
- ಮತದಾನ: ಮೇ 12, 2018
- ಫಲಿತಾಂಶ: ಮೇ 15, 2018
ಪಕ್ಷಗಳ ಚುನಾವಣಾ ವೆಚ್ಚಕ್ಕೆ ಯಾವುದೇ ಮಿತಿಯಿರುವುದಿಲ್ಲ, ಆದರೆ ಪ್ರತಿ ಅಭ್ಯರ್ಥಿಯ ಚುನಾವಣಾ ವೆಚ್ಚ 28 ಲಕ್ಷಕ್ಕೆ ಸೀಮಿತವಾಗಿದ್ದು, ಚುನಾವಣಾ ವೆಚ್ಚದ ಬಗ್ಗೆ ಚುನಾವಣಾ ಆಯೋಗದಿಂದ ತೀವ್ರ ನಿಗಾ ವಹಿಸಲಾಗುವುದು ಎಂದು ಓ. ಪಿ. ರಾವತ್ ತಿಳಿಸಿದ್ದಾರೆ.
224 ಸದಸ್ಯ ಬಲ ಹೊಂದಿರುವ ರಾಜ್ಯ ಸರ್ಕಾರದ ಅಧಿಕಾರವು ಮೇ 28ಕ್ಕೆ ಕೊನೆಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್, ಚುನಾವಣಾ ಆಯುಕ್ತರಾದ ಸುನೀಲ್ ಆರೋರಾ, ಅಶೋಕ್ ಲಾವಾಸ್ ಭಾಗಿಯಾಗಿದ್ದರು.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯ ರಂಗೇರಿದೆ. ಪ್ರಮುಖ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಬಿಸಿ ಕಾವೇರುತ್ತಿದೆ. 2013 ರಲ್ಲಿ, 122 ಸ್ಥಾನಗಳನ್ನು ಗೆದ್ದುಕೊಂಡು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಎರಡನೇ ಅವಧಿಗೆ ಮುಂದುವರೆಯುವ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಸಿ-ಫೋರ್ ಚುನಾವಣಾ ಪೂರ್ವ ಸಮೀಕ್ಷೆ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಲ್ಲದೆ 2013ರ ಚುನಾವಣೆಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದೆ.
ಇನ್ನು 20 ರಾಜ್ಯಗಳಲ್ಲಿ ತನ್ನ ಅಧಿಕಾರ ಭಿತ್ತರಿಸಿರುವ ಕೇಸರಿ ವಿಂಗ್ 21 ನೇ ರಾಜ್ಯ(ಕರ್ನಾಟಕ)ದಲ್ಲಿ ಕಮಲ ಅರಳಿಸುವ ಅಭಿಲಾಷೆ ಹೊಂದಿದೆ. ಮತ್ತೊಂದೆಡೆ ಪ್ರಾದೇಶಿಕ ಪಕ್ಷಕ್ಕೆ ಜನ ಮಾನ್ಯತೆ ನೀಡುತ್ತಾರೆ, ಈ ಬಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಜಾತ್ಯಾತೀತ ಜನತಾದಳ(ಜೆಡಿಎಸ್) ವಿಶ್ವಾಸ ಹೊಂದಿದೆ.