ರಾಜ್ಯದಲ್ಲಿ ಮೊತ್ತಮೊದಲ ಬಾರಿಗೆ ಸೈಬರ್ ಸುರಕ್ಷತಾ ಮಾಸಾಚರಣೆಗೆ ಚಾಲನೆ

ಆನ್ ಲೈನ್ ವೇದಿಕೆ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಸೈಬರ್ ಸುರಕ್ಷತಾ ಸಂಚಾಲಕ ಲೆಫ್ಟಿನೆಂಟ್ ಜನರಲ್ (ಡಾ.) ರಾಜೇಶ್ ಪಂತ್ ಅವರು ಪ್ರಧಾನ ಭಾಷಣ ಮಾಡಿದರು. ಸೈಬರ್ ಸುರಕ್ಷತೆಯ ಪ್ರಾಮುಖ್ಯ ಹಾಗೂ ಭಾರತದ ಮಹತ್ವದ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯಕ್ಕೆ ಇರುವ ಭೀತಿಗಳ ಕುರಿತು ಅವರು ಪ್ರಸ್ತಾಪಿಸಿದರು.

Last Updated : Oct 5, 2020, 01:58 PM IST
  • ರಾಜ್ಯದಲ್ಲಿ ಇದೇ ಮೊತ್ತಮೊದಲ ಬಾರಿಗೆ ಅಕ್ಟೋಬರ್ ತಿಂಗಳನ್ನು ಸೈಬರ್ ಸುರಕ್ಷತಾ ಮಾಸವನ್ನಾಗಿ ಆಚರಿಸಲಾಗುತ್ತಿದ್ದು, ಸೋಮವಾರ ವಿಧಾನ ಸೌಧದಲ್ಲಿ ನಡೆದ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೈಬರ್ ಸುರಕ್ಷತಾ ಲಾಂಛನಗಳನ್ನು ಅನಾವರಣಗೊಳಿಸಿದರು.
  • ಅಮೆರಿಕದ ಎಫ್ ಬಿಐ (FBI) ವರದಿ ಪ್ರಕಾರ, ಕೊರೋನಾ ಪಿಡುಗಿನ ನಂತರದ ಅವಧಿಯಲ್ಲಿ ಸೈಬರ್ ದುಷ್ಕೃತ್ಯಕ್ಕೆ ಸಂಬಂಧಿಸಿದ ದೂರುಗಳ ಸಂಖ್ಯೆಯಲ್ಲಿ ಶೇ 400ರಷ್ಟು ಹೆಚ್ಚಳವಾಗಿದೆ.
ರಾಜ್ಯದಲ್ಲಿ ಮೊತ್ತಮೊದಲ ಬಾರಿಗೆ ಸೈಬರ್ ಸುರಕ್ಷತಾ ಮಾಸಾಚರಣೆಗೆ ಚಾಲನೆ title=

ಬೆಂಗಳೂರು: ಪ್ರಸ್ತುತ ಸನ್ನಿವೇಶದಲ್ಲಿ ಡಿಜಿಟಲ್ (Digital) ವ್ಯವಹಾರಗಳು ಹೆಚ್ಚಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಸೈಬರ್ ಸುರಕ್ಷತೆ ಕೂಡ ಪ್ರಾಮುಖ್ಯ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸೈಬರ್ ಸುರಕ್ಷತಾ ಕಾರ್ಯನೀತಿಯನ್ನು ರೂಪಿಸಲು ಸರ್ಕಾರ ಚಾಲನೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ (Dr CN Ashwathnarayan) ತಿಳಿಸಿದರು.

ರಾಜ್ಯದಲ್ಲಿ ಇದೇ ಮೊತ್ತಮೊದಲ ಬಾರಿಗೆ ಅಕ್ಟೋಬರ್ ತಿಂಗಳನ್ನು ಸೈಬರ್ ಸುರಕ್ಷತಾ (Cyber Security) ಮಾಸವನ್ನಾಗಿ ಆಚರಿಸಲಾಗುತ್ತಿದ್ದು, ಸೋಮವಾರ ವಿಧಾನ ಸೌಧದಲ್ಲಿ ನಡೆದ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೈಬರ್ ಸುರಕ್ಷತಾ ಲಾಂಛನಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸೇವೆಯನ್ನು ಜನರಿಗೆ ತಲುಪಿಸುವುದಕ್ಕಾಗಿ ಮಾಹಿತಿ ತಂತ್ರಜ್ಞಾನ (Information Technology) ಆಧಾರಿತ ತಂತ್ರೋಪಾಯಗಳ ಅಳವಡಿಕೆ ದಿನಗಳೆದಂತೆ ಹೆಚ್ಚಾಗುತ್ತಿದೆ. ಇದರೊಟ್ಟಿಗೆ ಸೈಬರ್ ಅಪಾಯಗಳು ಕೂಡ ಗಣನೀಯವಾಗಿ ಅಧಿಕವಾಗುವ ಅಪಾಯ ಇದೆ.  ನಾಗರಿಕರು, ಉದ್ಯಮಗಳು, ವಿದ್ಯಾರ್ಥಿಗಳು ಹಾಗೂ ಸರ್ಕಾರವನ್ನು ಗಮನದಹಮ್ಮಿಕೊಳ್ಳಲಾಗುತ್ತದೆ ಸುರಕ್ಷತಾ ಕಾರ್ಯನೀತಿ ರೂಪಿಸಲಾಗುವುದು ಎಂದು ಅಶ್ವಥನಾರಾಯಣ್ ಹೇಳಿದರು.

ಅಮೆರಿಕದ ಎಫ್ ಬಿಐ (FBI) ವರದಿ ಪ್ರಕಾರ, ಕೊರೋನಾ ಪಿಡುಗಿನ ನಂತರದ ಅವಧಿಯಲ್ಲಿ ಸೈಬರ್ ದುಷ್ಕೃತ್ಯಕ್ಕೆ ಸಂಬಂಧಿಸಿದ ದೂರುಗಳ ಸಂಖ್ಯೆಯಲ್ಲಿ ಶೇ 400ರಷ್ಟು ಹೆಚ್ಚಳವಾಗಿದೆ. ಈ ತನಿಖಾ ಸಂಸ್ಥೆಗೆ ಪ್ರತಿ ದಿನ 4000 ದೂರುಗಳು ಬರುತ್ತಿವೆ. ದುಷ್ಕರ್ಮಿಗಳು ಫಿಷಿಂಗ್, ರಾನ್ಸಮ್ ವೇರ್ ಮತ್ತು ಮಾಲ್ವೇರ್ ದಾಳಿಗಳ ಮೂಲಕ ಸುಲಿಗೆ ಮಾಡುತ್ತಿದ್ದಾರೆ. ಸೈಬರ್ ಕ್ರಿಮಿನಲ್ ಗಳು ಕೊರೋನಾ ಸಂತ್ರಸ್ತರಿಗೆ ನೆರವು ನೀಡುವ ನೆಪದಲ್ಲಿ  ಸಂಬಂಧಿಸಿದಂತೆ ಸಾವಿರಾರು ವಂಚಕ ಪೋರ್ಟಲ್ ಗಳನ್ನು ಆರಂಭಿಸಿದ್ದಾರೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

ಭಾರತೀಯ ವೆಬ್‌ಸೈಟ್‌ಗಳ ಮೇಲೆ ದಾಳಿ; ಇಲ್ಲಿದೆ 5 ವರ್ಷದ ಡಾಟಾ

ಮೂರನೇ ಸ್ಥಾನದಲ್ಲಿ ಭಾರತ
ಅಮೆರಿಕದ ಎಫ್ ಬಿಐ ವರದಿ ಪ್ರಕಾರ, ಪ್ರಪಂಚದ ಅಂತರ್ಜಾಲ ಅಪರಾಧಗಳು ನಡೆಯುವ ದೇಶಗಳ ಪಟ್ಟಿಯಲ್ಲಿ  ಭಾರತವು 3ನೇ ಸ್ಥಾನದಲ್ಲಿದೆ. ಫಿಷಿಂಗ್ ದಾಳಿ ಜೊತೆಗೆ ಅಂತರ್ಜಾಲಗಳ ವಿರೂಪಗೊಳಿಸುವಿಕೆ, ಡಿಡಿಒಎಸ್ ದಾಳಿ ಇತ್ಯಾದಿ ದಾಳಿಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡವು (CERT-In) ಸಲಹಾ ಸೂಚಿಯನ್ನು ಪ್ರಕಟಿಸಿ, ಕೊರೋನಾ ಸೋಂಕಿನ ನೆಪದಲ್ಲಿ ಹೇಗೆ ಸೈಬರ್ ದಾಳಿಗಳನ್ನು ಎಸಗಲಾಗುತ್ತಿದೆ ಎಂಬುದರ ಕುರಿತು ವಿವರಿಸಿದೆ. ಬಹುತೇಕ ಸೈಬರ್ ದಾಳಿಗಳನ್ನು ಫಿಷಿಂಗ್ ಇ-ಮೇಲ್ ಗಳು, ಅಂತರ್ಜಾಲ ತಾಣಗಳಲ್ಲಿ  ದಾರಿತಪ್ಪಿಸುವ ಜಾಹೀರಾತುಗಳು ಹಾಗೂ ಮೂರನೇ ಪಕ್ಷದಾರರ ಆಪ್ ಹಾಗೂ ಪ್ರೋಗ್ರ್ಯಾಮ್ ಗಳ ಮೂಲಕ ಎಸಗಲಾಗುತ್ತಿದೆ. ಅದೇ ರೀತಿ ಕಂಪ್ಯೂಟರ್ ಗಳು, ರೌಟರ್ ಗಳು, ಸುರಕ್ಷತೆಯಿಲ್ಲದ ಹೋಮ್ ನೆಟ್ ವರ್ಕ್ ಗಳ ಮೇಲೂ ಸೈಬರ್ ದಾಳಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಉಪಮುಖ್ಯಮಂತ್ರಿ ವಿವರಿಸಿದರು.

ಭಾರತದ ಸಿಲಿಕಾನ್ ಕಣಿವೆ ಎಂದೇ ಹೆಸರಾಗಿರುವ ಬೆಂಗಳೂರು ಸಹಜವಾಗಿಯೇ ಸೈಬರ್ ಕ್ರಿಮಿನಲ್ ಗಳ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ಆದ್ದರಿಂದ ಸರ್ಕಾರಗ ಹಾಗೂ ಸಂಸ್ಥೆಗಳಿಗೆ ಸೈಬರ್ ಜಾಗೃತಿ ಮೂಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿ ಪರಿಣಮಿಸಿದೆ.  ಯಾವುದೇ ಸಂಸ್ಥೆಯಲ್ಲಿ ಸೈಬರ್ ಅರಿವು ಇರುವ ಉದ್ಯೋಗಿಗಳೇ ಸೈಬರ್ ಅಪಾಯದ ವಿರುದ್ಧ ಅತ್ಯುತ್ತಮ ರಕ್ಷಕರಾಗಿರುತ್ತಾರೆ. ಇದನ್ನು ಗಮನದಲ್ಲಿರಿಸಿಕೊಂಡು ಜಾಗತಿಕವಾಗಿ ಅಕ್ಟೋಬರ್ ತಿಂಗಳನ್ನು ಸೈಬರ್ ಸುರಕ್ಷತಾ ಮಾಸವನ್ನಾಗಿ ಆಚರಿಸಲಾಗುತ್ತಿದೆ. ಅದಕ್ಕನುಗುಣವಾಗಿ ಕರ್ನಾಟಕದಲ್ಲಿಯೂ ಈ ಬಾರಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಎಂದರು.

ಆನ್ ಲೈನ್ ವೇದಿಕೆ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಸೈಬರ್ ಸುರಕ್ಷತಾ ಸಂಚಾಲಕ ಲೆಫ್ಟಿನೆಂಟ್ ಜನರಲ್ (ಡಾ.) ರಾಜೇಶ್ ಪಂತ್ ಅವರು ಪ್ರಧಾನ ಭಾಷಣ ಮಾಡಿದರು. ಸೈಬರ್ ಸುರಕ್ಷತೆಯ ಪ್ರಾಮುಖ್ಯ ಹಾಗೂ ಭಾರತದ ಮಹತ್ವದ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯಕ್ಕೆ ಇರುವ ಭೀತಿಗಳ ಕುರಿತು ಅವರು ಪ್ರಸ್ತಾಪಿಸಿದರು.

ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಹಾಗೂ ಸೈಸೆಕ್ ಕೆ ತಾಂತ್ರಿಕ ಸಮಿತಿ ಸಂಚಾಲಕರಾದ ಪ್ರೊ.ನರಹರಿ ಅವರು ಸರ್ಕಾರಿ ಉದ್ಯೋಗಿಗಳು ಹಾಗೂ ಅಧಿಕಾರಿಗಳಿಗೆ ಸೈಬರ್ ಜಾಗೃತಿ ಅಗತ್ಯದ ಬಗ್ಗೆ ಮಾತನಾಡಿದರು.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಸಿಐಡಿ-ಸೈಬರ್ ಅಪರಾಧ ಇಲಾಖೆಯ ಹೆಚ್ಚುವರಿ ಡಿಜಿಪಿ ಉಮೇಶ್ ಕುಮಾರ್, ಕರ್ನಾಟಕ ಮಾಹಿತಿ ತಂತ್ರಜ್ಞಾನ ದೂರದರ್ಶಿತ್ವ ತಂಡದ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕ ನಾವೀನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆಯ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ್ ಅವರು ಸಮಾರೋಪ ನುಡಿಗಳನ್ನು ಆಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಕಾರ್ಯದರ್ಶಿ ಪ್ರೊ.ಅಶೋಕ್ ರಾಯಚೂರು, ಸೈಸೆಕ್ ಕೆ ಕೇಂದ್ರದ ಮುಖ್ಯಸ್ಥ ಕಾರ್ತಿಕ್ ಬಪ್ಪನಾಡ್ ಮತ್ತಿತರರು ಹಾಜರಿದ್ದರು. ಹಲವು ಗೋಷ್ಠಿಗಳು: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ನೇತೃತ್ವದಲ್ಲಿ ರಾಜ್ಯದ ಸೈಬರ್ ಸುರಕ್ಷತಾ ಉತ್ಕೃಷ್ಠತಾ ಕೇಂದ್ರವಾದ ಸೈಸೆಕ್ ಕೆ (CySecK), ಸೈಬರ್ ಜಾಗೃತಿ ಮೂಡಿಸಲು ತಿಂಗಳಿಡೀ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕರ್ನಾಟಕ ನಾವೀನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆ (ಕಿಟ್ಸ್) ಇದಕ್ಕೆ ಸಹಕಾರ ನೀಡಲಿದೆ.

ಮಾಸಾಂತ್ಯದವರೆಗೂ ನಡೆಯುವ ಕಾರ್ಯಕ್ರಮಗಳ ಅಂಗವಾಗಿ ಹಲವಾರು ಗೋಷ್ಠಿಗಳನ್ನು ನಡೆಸಲಾಗುತ್ತದೆ. ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕರು ಈ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ ಫಿಷಿಂಗ್ ಪ್ರತ್ಯನುಕರಣೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುತ್ತದೆ.

Trending News