ಬೆಂಗಳೂರು: ವೀರಶೈವ-ಲಿಂಗಾಯಿತ ವಿವಾದದಲ್ಲಿ ಒಮ್ಮತಕ್ಕೆ ಬರಲು ಲಿಂಗಾಯತ ಮುಖಂಡರ ಸಭೆ ಮತ್ತೆ ವಿಫಲವಾಗಿದೆ.
ಬೆಂಗಳೂರಿನ ಖಾಸಗಿ ಹೊಟೇಲ್’ನಲ್ಲಿ ಗುರುವಾರ ನಡೆದ ಸುದೀರ್ಘ ಸಭೆಯಲ್ಲಿ ಉಭಯ ಬಣದ ಪ್ರಮುಖ ಮುಖಂಡರು ಭಾಗವಹಿಸಿದ್ದರು. ಸಮುದಾಯವನ್ನ ಒಡೆಯೋ ಕೆಲಸ ಮಾಡುತ್ತಿದ್ದೀರಿ ಅನ್ನೋ ವಿಚಾರ ಚರ್ಚೆಗೆ ಬಂದಾಗ ಉಭಯ ಬಣಗಳ ಮುಖಂಡರ ನಡುವೆ ಮಾತಿನ ಚಕಮಕಿ, ಗದ್ದಲವೂ ನಡೆಯಿತು. ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಮುಖಂಡರ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ನೀಡಬೇಕೆಂದು ಆಗ್ರಹಿಸುತ್ತ ಬಂದಿರುವ ಸಚಿವ ಎಂ ಬಿ ಪಾಟೀಲ್ ನೇತೃತ್ವದ ತಂಡ ಒಂದಾದರೆ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ನೇತೃತ್ವದ ಮತ್ತೊಂದು ಬಣ ಸಭೆಯಲ್ಲಿ ಭಾಗವಹಿಸಿತ್ತು.
ಸಭೆ ಆರಂಭವಾಗುತ್ತಿದ್ದಂತೆ ಮಹಾಸಭಾದ ಕೆಲ ಮುಖಂಡರು ಸಮಾಜವನ್ನ ಒಡೆಯುವ ಸಂಚು ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಸಚಿವ ವಿನಯ ಕುಲಕರ್ಣಿ ನಾವೆಲ್ಲ ಸಮಾಜ ಒಡೆಯೋರು ನೀವು ಎಂದು ಆವೇಶ ಭರಿತರಾಗಿ ಹೇಳಿದರು.
ಈತನ್ಮದ್ಯೇ, ಮಾತೆ ಮಹಾದೇವಿಯ ವಿಷಯವೂ ಚರ್ಚೆಗೆ ಬಂದಿತು. ಇದರಿಂದ ಸಭೆಯಲ್ಲಿ ಕೋಲಾಹಲವೇ ನಡೆಯಿತು. ಬಳಿಕ ಸಚಿವ ಎಂ ಬಿ ಪಾಟೀಲ್ ಮತ್ತು ಶಂಕರ ಬಿದರಿ ಎಲ್ಲರನ್ನ ಸಮಾಧಾನ ಪಡಿಸಿದರು. ಶಂಕರ ಬಿದರಿ ಮಾತನಾಡಿ, ಈ ಚರ್ಚೆ 1957 ರಿಂದ ನಡೆಯುತ್ತಲೇ ಇದೆ. 2013ರಲ್ಲಿ ನಮ್ಮದು ಹಿಂದು ಧರ್ಮದ ಒಂದು ಭಾಗ ಅಂತಾ ಒಪ್ಪಿಕೊಂಡಿದ್ದು, ಎಲ್ಲರೂ ಸಹಿ ಮಾಡಿದ್ದೇವೆ. ಇದೀಗ ನಾವು ಸ್ವತಂತ್ರ ಧರ್ಮದ ಬಗ್ಗೆ ಮಾತ್ರ ಚರ್ಚೆ ಮಾಡೋಣ ಎಂದರು.
ಸತತ ಎರಡೂವರೆ ಗಂಟೆ ನಡೆದ ಸಭೆ ಅಂತಿಮವಾದ ಒಂದು ತೀರ್ಮಾನಕ್ಕೆ ಬರುವಲ್ಲಿ ವಿಫಲವಾಯಿತು. ಆದರೆ, ಒಂದು ತಜ್ಞರ ಸಮಿತಿ ರಚಿಸುವ ನಿರ್ಣಯವನ್ನು ಸಭೆ ಅಂಗೀಕರಿಸಿತು. ತಜ್ಞರ ಸಮಿತಿ ರಚಿಸುವ ಹೊಣೆಯನ್ನು ಶಾಮನೂರು ಶಿವಶಂಕರಪ್ಪಗೆ ವಹಿಸಲಾಗಿದೆ.