ICC World Cup 2023: ಮತ್ತೊಂದು ಹೀನಾಯ ಸೋಲು ಕಂಡ ಕಾಂಗರೂ ಪಡೆ..!

ICC World Cup 2023: 312 ರನ್‍ಗಳ ಟಾರ್ಗೆಟ್ ಚೇಸ್ ಮಾಡಲು ಪ್ರಯತ್ನಿಸಿದ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಹೀನಾಯ ಸೋಲು ಕಂಡಿತು.

Written by - Puttaraj K Alur | Last Updated : Oct 12, 2023, 09:39 PM IST
  • ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ
  • ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ ದಕ್ಷಿಣ ಆಫ್ರಿಕಾಗೆ ಸತತ 2ನೇ ಗೆಲುವು
  • ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಭರ್ಜರಿ ಶತಕ ಸಿಡಿಸಿ ಮಿಂಚಿದ ಕ್ವಿಂಟನ್ ಡಿ ಕಾಕ್
ICC World Cup 2023: ಮತ್ತೊಂದು ಹೀನಾಯ ಸೋಲು ಕಂಡ ಕಾಂಗರೂ ಪಡೆ..!  title=
ಮತ್ತೊಂದು ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಎದುರು ಮುಖಭಂಗ ಅನುಭವಿಸಿದ್ದ ಆಸ್ಟ್ರೇಲಿಯಾ ತಂಡ ಮತ್ತೊಂದು ಹೀನಾಯ ಸೋಲು ಕಂಡಿದೆ. ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 10ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಬಲಿಷ್ಠ ಆಸೀಸ್ ತಂಡವು ಮುಗ್ಗರಿಸಿದೆ.

ಟಾಸ್ ಗೆದ್ದ ಆಸೀಸ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‍ಗಳಲ್ಲಿ ವಿಕೆಟ್ ಕಳೆದುಕೊಂಡು 311 ರನ್‍ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು. ಈ ಟಾರ್ಗೆಟ್ ಬೆನ್ನತ್ತುವಲ್ಲಿ ವಿಫಲವಾದ ಪ್ಯಾಟ್ ಕಮಿನ್ಸ್ ಬಳಗವು ಸೋತು ನಿರಾಸೆ ಮೂಡಿಸಿತು. ಈ ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಭರ್ಜರಿ ಶತಕ ಸಿಡಿಸಿದ ಕ್ವಿಂಟನ್ ಡಿ ಕಾಕ್ ಆಸೀಸ್‍ಗೆ ವಿಲನ್ ಆದರು.

ಇದನ್ನೂ ಓದಿ: PAK ವಿರುದ್ಧದ ಹೋರಾಟ ಸುಲಭವಲ್ಲ, ಈ 3 ಆಟಗಾರರು ಟೀಮ್ ಇಂಡಿಯಾಕ್ಕೆ ದುಃಸ್ವಪ್ನವಾಗಬಹುದು.!

ಕ್ವಿಂಟನ್ ಡಿ ಕಾಕ್ ಭರ್ಜರಿ ಶತಕ!

ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾಗೆ ಸೋಲಿನ ರುಚಿ ತೋರಿಸಿತು. ದಕ್ಷಿಣ ಆಫ್ರಿಕಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಕ್ವಿಂಟನ್ ಡಿ ಕಾಕ್ ಮತ್ತೊಂದು ಅಮೋಘ ಶತಕ ಸಿಡಿಸುವ ಮೂಲಕ ಮಿಂಚಿದರು. 106 ಎಸೆತಗಳಲ್ಲಿ ಡಿ ಕಾಕ್ 6 ಸಿಕ್ಸರ್ ಮತ್ತು 8 ಬೌಂಡರಿ ಇದ್ದ 109 ರನ್ ಗಳಿಸಿ ಗ್ಲೆನ್ ಮ್ಯಾಕ್ಸ್‌ವೆಲ್‍ಗೆ ವಿಕೆಟ್ ಒಪ್ಪಿಸಿದರು.

ಇನ್ನುಳಿದಂತೆ ಐಡೆನ್ ಮಾರ್ಕ್ರಾಮ್(56) ಆಕರ್ಷಕ ಅರ್ಧಶತಕ ಭಾರಿಸಿದರು. ನಾಯಕ ತೆಂಬ ಬವುಮ(35), ಹೆನ್ರಿಕ್ ಕ್ಲಾಸೆನ್(29), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್(26), ಮಾರ್ಕೊ ಜಾನ್ಸೆನ್(26) ಮತ್ತು ಡೇವಿಡ್ ಮಿಲ್ಲರ್(17) ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಬೌಲಿಂಗ್‍ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 2 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್, ಪ್ಯಾಟ್ ಕಮ್ಮಿನ್ಸ್ ಮತ್ತು ಆಡಮ್ ಝಂಪಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು. 

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ

ದ.ಆಫ್ರಿಕಾ ಬೌಲಿಂಗ್ ದಾಳಿಗೆ ನಲುಗಿದ ಆಸೀಸ್!

312 ರನ್‍ಗಳ ಟಾರ್ಗೆಟ್ ಚೇಸ್ ಮಾಡಲು ಪ್ರಯತ್ನಿಸಿದ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಹೀನಾಯ ಸೋಲು ಕಂಡಿತು. ಕಗಿಸೊ ರಬಾಡ, ಕೇಶವ್ ಮಹಾರಾಜ್ ಮತ್ತು ಮಾರ್ಕೊ ಜಾನ್ಸೆನ್ ಅವರ ಬೌಲಿಂಗ್ ದಾಳಿಗೆ ನಲುಗಿದ ಆಸೀಸ್ 40.5 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 177 ರನ್‍ ಗಳಿಸಲಷ್ಟೇ ಶಕ್ತವಾಯಿತು. ಇದಲ್ಲದೆ 134 ರನ್‍ಗಳಿಂದ ಸೋಲು ಕಂಡಿತು. ಆಸ್ಟ್ರೇಲಿಯಾ ಪರ ಮಾರ್ನಸ್ ಲ್ಯಾಬುಸ್ಚಾಗ್ನೆ(46), ಮಿಚೆಲ್ ಸ್ಟಾರ್ಕ್(27), ಸ್ಟೀವನ್ ಸ್ಮಿತ್(19) ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಬೌಲಿಂಗ್‍ನಲ್ಲಿ ಮಿಂಚಿದ ಕಗಿಸೊ ರಬಾಡ 3, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ ಮತ್ತು ಮಾರ್ಕೊ ಜಾನ್ಸೆನ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News