ಎನ್‌ವಿಎಸ್-01 ಉಪಗ್ರಹ ಉಡಾವಣೆ : ನ್ಯಾವಿಗೇಶನ್ ವ್ಯವಸ್ಥೆಯಲ್ಲಿ ತರಲಿದೆ ಕ್ರಾಂತಿಕಾರಿ ಬದಲಾವಣೆ

NVS-01: ಭಾರತೀಯ ಭೂಪ್ರದೇಶಕ್ಕೆ ಪಥದರ್ಶಕ ಸೇವೆ ನೀಡುತ್ತಿದ್ದ ಐಆರ್‌ಎನ್ಎಸ್ಎಸ್-1ಜಿ ಉಪಗ್ರಹದ ಬದಲಿಗೆ ಎನ್‌ವಿಎಸ್-01 ಕಾರ್ಯ ನಿರ್ವಹಿಸಲಿದೆ. ಎನ್‌ವಿಎಸ್-01 ಉಪಗ್ರಹ 12 ವರ್ಷಗಳ ಕಾರ್ಯಾವಧಿಯನ್ನು ಹೊಂದಿದ್ದು, ಭೂಮಿಯ ಮೇಲೆ ಜಿಯೋಸ್ಟೇಷನರಿ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಇದು ಭಾರತದ ಗಡಿಯಾಚೆಗೂ 1,500 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.

Written by - Girish Linganna | Edited by - Krishna N K | Last Updated : May 23, 2023, 04:28 PM IST

  • ಎನ್‌ವಿಎಸ್-01 ಉಪಗ್ರಹ ಉಡಾವಣೆಗೊಳಿಸಲು ಸಿದ್ಧತೆ.
  • ಮೇ 29ರಂದು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ರೆಡಿ.
  • ಎನ್‌ವಿಎಸ್‌ ನ್ಯಾವಿಗೇಶನ್ ವ್ಯವಸ್ಥೆಯಲ್ಲಿ ತರಲಿದೆ ಕ್ರಾಂತಿಕಾರಿ ಬದಲಾವಣೆ.
ಎನ್‌ವಿಎಸ್-01 ಉಪಗ್ರಹ ಉಡಾವಣೆ : ನ್ಯಾವಿಗೇಶನ್ ವ್ಯವಸ್ಥೆಯಲ್ಲಿ ತರಲಿದೆ ಕ್ರಾಂತಿಕಾರಿ ಬದಲಾವಣೆ title=

Launch of NVS-01 satellite : ಮೇ 29ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಎನ್‌ವಿಎಸ್-01 ಉಪಗ್ರಹವನ್ನು ಉಡಾವಣೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಇದೊಂದು ನ್ಯಾವಿಗೇಶನ್ (ಪಥದರ್ಶಕ) ಉಪಗ್ರಹವಾಗಿದ್ದು, ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಐಆರ್‌ಎನ್ಎಸ್ಎಸ್) ಸರಣಿಯ ಎರಡನೇ ತಲೆಮಾರಿನ ಮೊದಲ ಉಪಗ್ರಹವಾಗಿದೆ. ಇದು ಭಾರತೀಯ ಮತ್ತು ಸುತ್ತಲಿನ ಪ್ರದೇಶಗಳ ಬಳಕೆದಾರರಿಗೆ ಸ್ಥಾನ, ವೇಗ ಮತ್ತು ಸಮಯದ ಮಾಹಿತಿಗಳನ್ನು ಒದಗಿಸಲಿದೆ.

ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಐಆರ್‌ಎನ್ಎಸ್ಎಸ್) ಉಪಗ್ರಹ ಐಆರ್‌ಎನ್ಎಸ್ಎಸ್-1ಜೆ ಯನ್ನು ಎನ್‌ವಿಎಸ್-01 ಎಂದು ಕರೆಯಲಾಗಿದೆ. ಈ ಉಪಗ್ರಹ ಐಆರ್‌ಎನ್ಎಸ್ಎಸ್ ಉಪಗ್ರಹಗಳ ಎರಡನೇ ತಲೆಮಾರಿನ ಉಪಗ್ರಹ ಎಂಬುದನ್ನು ಸೂಚಿಸಲು ಇದಕ್ಕೆ ಎನ್‌ವಿಎಸ್-01 ಎಂದು ಹೆಸರಿಸಲಾಗಿದೆ. ಎರಡನೆಯ ತಲೆಮಾರಿನ ಉಪಗ್ರಹಗಳನ್ನು ಹೆಚ್ಚಿನ ವೈಶಿಷ್ಟ್ಯಗಳು, ಸಾಮರ್ಥ್ಯಗಳೊಡನೆ ನಿರ್ಮಿಸಲಾಗಿದ್ದು, ಇವುಗಳು ನಾವಿಕ್ (NavIC) ಪಥದರ್ಶಕ ವ್ಯವಸ್ಥೆಯ ನಂಬಿಕಾರ್ಹತೆ ಮತ್ತು ನಿಖರತೆಯನ್ನು ಹೆಚ್ಚಿಸಲಿದೆ.

ಇದನ್ನೂಓದಿ: MIG 21 Fighter Jet: ಇನ್ಮುಂದೆ ಯುದ್ಧ ಮೈದಾನಕ್ಕೆ ಇಳಿಯಲ್ಲ ಮಿಗ್ 21 ಫೈಟರ್ ಜೆಟ್ ಗಳು, ಕಾರಣ ಇಲ್ಲಿದೆ

ಈ ಉಪಗ್ರಹ 2016ರಲ್ಲಿ ಉಡಾವಣೆಗೊಳಿಸಿದ, ಏಳು ಉಪಗ್ರಹಗಳ ಸರಣಿಯ ಭಾಗವಾಗಿದ್ದು, ಭಾರತೀಯ ಭೂಪ್ರದೇಶಕ್ಕೆ ಪಥದರ್ಶಕ ಸೇವೆ ನೀಡುತ್ತಿದ್ದ ಐಆರ್‌ಎನ್ಎಸ್ಎಸ್-1ಜಿ ಉಪಗ್ರಹದ ಬದಲಿಗೆ ಕಾರ್ಯ ನಿರ್ವಹಿಸಲಿದೆ. ಎನ್‌ವಿಎಸ್-01 ಉಪಗ್ರಹ 12 ವರ್ಷಗಳ ಕಾರ್ಯಾವಧಿಯನ್ನು ಹೊಂದಿದ್ದು, ಭೂಮಿಯ ಮೇಲೆ ಜಿಯೋಸ್ಟೇಷನರಿ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಇದು ಭಾರತದ ಗಡಿಯಾಚೆಗೂ 1,500 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.

ಉಪಗ್ರಹವನ್ನು ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್‌ವಿ) ಮೂಲಕ, ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ವೇದಿಕೆಯಿಂದ ಉಡಾವಣೆಗೊಳಿಸಲಾಗುತ್ತದೆ.

ಇದನ್ನೂಓದಿ: ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ, 20 ನಗರಗಳಲ್ಲಿ ‘ಭಾರತ್ ಏಕತಾ’ ಮೆರವಣಿಗೆ!

2,232 ಕೆಜಿ ತೂಕ ಹೊಂದಿರುವ ಎನ್‌ವಿಎಸ್-01 ಉಪಗ್ರಹವನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್‌ (ಜಿಟಿಓ) ನಲ್ಲಿ ಅಳವಡಿಸಲಾಗುತ್ತದೆ. ಇದೊಂದು ಅತ್ಯಂತ ದೀರ್ಘವೃತ್ತದ ಕಕ್ಷೆಯಾಗಿದ್ದು, ಭೂಮಿಯಿಂದ ಅತ್ಯಂತ ದೂರದ ತುದಿಯನ್ನು ಬಹುತೇಕ 36,000 ಕಿಲೋಮೀಟರ್‌ನಲ್ಲಿ ಹೊಂದಿದೆ. ಎನ್‌ವಿಎಸ್-01 ತನ್ನ ಸ್ವಂತ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಸಿಕೊಂಡು ತನ್ನ ಅಂತಿಮ ಜಿಯೋಸ್ಟೇಷನರಿ ಕಕ್ಷೆಗೆ ತಲುಪಲಿದೆ. ಇದರ ಸೇವೆಗಳನ್ನು ವಿಸ್ತರಿಸಲು ಎಲ್1 ಬ್ಯಾಂಡ್ ಸಿಗ್ನಲ್‌ಗಳನ್ನು ಒಳಗೊಂಡಿದೆ.

ಇದೇ ಮೊದಲ ಬಾರಿಗೆ, ಉಪಗ್ರಹದಲ್ಲಿ ಭಾರತೀಯ ನಿರ್ಮಾಣದ ಅಟಾಮಿಕ್ ಕ್ಲಾಕ್ ಅಳವಡಿಸಲಾಗಿದೆ. ಈ ಅಟಾಮಿಕ್ ಕ್ಲಾಕ್ ನ್ಯಾನೋ ಸೆಕೆಂಡ್ ಹಂತದ ನಿಖರತೆ ಹೊಂದಿರುವುದರಿಂದ, ಸಮಯದ ಅಳತೆಯೂ ಯುಟಿಸಿ ಜೊತೆ 2 ನ್ಯಾನೋ ಸೆಕೆಂಡ್ ಒಳಗಿನ ನಿಖರತೆ ಹೊಂದಿದ್ದು (2.0 × 10-9 s) (2 ಸಿಗ್ಮಾ), ಕಕ್ಷೆ ಏರಿಸುವ ಪ್ರಕ್ರಿಯೆಯನ್ನು ಇನ್ನಷ್ಟು  ನಿಖರವಾಗಿಸುತ್ತದೆ. ಅಮೆರಿಕಾ (ಜಿಪಿಎಸ್), ರಷ್ಯಾ (ಗ್ಲೋನಾಸ್) ಹಾಗೂ ಚೀನಾ (ಬೀದೌ) ಗಳು ತಮ್ಮದೇ ಆದ ನ್ಯಾವಿಗೇಶನ್ ವ್ಯವಸ್ಥೆ ಹೊಂದಿರುವ ಇತರ ರಾಷ್ಟ್ರಗಳಾಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News