ಆರ್‌ಎಲ್‌ವಿ-ಎಲ್ಇಎಕ್ಸ್ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ, ಡಿಆರ್‌ಡಿಓ, ಭಾರತೀಯ ವಾಯುಸೇನೆ

ಆರ್‌ಎಲ್‌ವಿ-ಟಿಡಿ ಭಾರತದ ಪ್ರಥಮ ಮಾನವ ರಹಿತ ಟೆಸ್ಟ್ ಬೆಡ್ ಆಗಿದ್ದು, ಇದನ್ನು ಇಸ್ರೋ ತನ್ನ ರಿಯೂಸೆಬಲ್ ಲಾಂಚ್ ವೆಹಿಕಲ್ ಡೆಮಾನ್ಸ್ಟ್ರೇಷನ್ ಪ್ರೋಗ್ರಾಮ್‌ಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದು ಎರಡು ಸ್ಟೇಜ್ ಟು ಆರ್ಬಿಟ್ ಮರು ಬಳಕೆಯ ಉಡಾವಣಾ ವಾಹನದ ಮೂಲಮಾದರಿಯಾಗಿದೆ.

Written by - Girish Linganna | Edited by - Yashaswini V | Last Updated : Apr 3, 2023, 08:24 PM IST
  • ಇಸ್ರೋದ ಪ್ರಕಾರ, ರೆಕ್ಕೆ ಹೊಂದಿರುವ ಆರ್‌ಎಲ್‌ವಿ-ಟಿಡಿಯ ಕುರಿತಾದ ಸರಣಿ ಪರೀಕ್ಷೆಗಳು ಸಂಪೂರ್ಣವಾಗಿ ಮರುಬಳಕೆ ಮಾಡಬಲ್ಲ ಉಡಾವಣಾ ವಾಹನಗಳನ್ನು ನಿರ್ಮಿಸಿ, ಕಡಿಮೆ ಖರ್ಚಿನಲ್ಲಿ ಬಾಹ್ಯಾಕಾಶ ಪ್ರವೇಶಿಸುವ ಯೋಜನೆಗೆ ಅಗತ್ಯ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಮಹತ್ವದ ಭಾಗವಾಗಿದೆ.
  • ಆರ್‌ಎಲ್‌ವಿ-ಟಿಡಿಯನ್ನು ಹೈಪರ್‌ಸಾನಿಕ್ ಫ್ಲೈಟ್ (ಎಚ್ಇಎಕ್ಸ್), ಅಟಾನಮಸ್ ಲ್ಯಾಂಡಿಂಗ್ (ಎಲ್ಇಎಕ್ಸ್), ರಿಟರ್ನ್ ಫ್ಲೈಟ್ ಎಕ್ಸ್‌ಪರಿಮೆಂಟ್ (ಆರ್‌ಇಎಕ್ಸ್), ಪವರ್ಡ್ ಕ್ರೂಸ್ ಫ್ಲೈಟ್ ಹಾಗೂ ಸ್ಕ್ರ್ಯಾಮ್ ಜೆಟ್ ಪ್ರೊಪಲ್ಷನ್ ಎಕ್ಸ್‌ಪರಿಮೆಂಟ್ (ಎಸ್‌ಪಿಇಎಕ್ಸ್) ನಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಬಳಸಲಾಗುತ್ತದೆ.
ಆರ್‌ಎಲ್‌ವಿ-ಎಲ್ಇಎಕ್ಸ್ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ, ಡಿಆರ್‌ಡಿಓ, ಭಾರತೀಯ ವಾಯುಸೇನೆ title=

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಡಿಆರ್‌ಡಿಓ, ಹಾಗೂ ಐಎಎಫ್-ಎಂಸಿಸಿ (ವಾಯುಪಡೆ) ರಿಯೂಸೆಬಲ್ ಲಾಂಚ್ ವೆಹಿಕಲ್ (ಆರ್‌ಎಲ್‌ವಿ) ಅಟಾನಮಸ್ ಲ್ಯಾಂಡಿಂಗ್ ಮಿಷನ್ (ಆರ್‌ಎಲ್‌ವಿ ಎಲ್ಇಎಕ್ಸ್) ಪರೀಕ್ಷಾ ಪ್ರಯೋಗವನ್ನು ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಎಪ್ರಿಲ್ 2, ಭಾನುವಾರದಂದು ಯಶಸ್ವಿಯಾಗಿ ನೆರವೇರಿಸಿದವು.

ಈ ಆರ್‌ಎಲ್‌ವಿ-ಎಲ್ಇಎಕ್ಸ್ ಕಾರ್ಯಾಚರಣೆಯಲ್ಲಿ ರಿಯೂಸಬಲ್ ಲಾಂಚ್ ವೆಹಿಕಲ್ (ಆರ್‌ಎಲ್‌ವಿ ಎಲ್‌ಇಎಕ್ಸ್ (ಲ್ಯಾಂಡಿಂಗ್ ಎಕ್ಸ್ಪರಿಮೆಂಟ್)) ಸ್ವಾಯತ್ತವಾಗಿ ಭೂಸ್ಪರ್ಶ ನಡೆಸಿತ್ತು. ಆರ್‌ಎಲ್‌ವಿ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ (ಆರ್‌ಎಲ್‌ವಿ-ಟಿಡಿ) ಅನ್ನು ಇಸ್ರೋ ಬಾಹ್ಯಾಕಾಶ ಪ್ರವಾಸಕ್ಕೆ ಬಳಸಿಕೊಳ್ಳಲಿದೆ.

ಇಸ್ರೋ ಆರ್‌ಎಲ್‌ವಿ-ಟಿಡಿಯ ಸಣ್ಣ ಆವೃತ್ತಿಯನ್ನು ಪರೀಕ್ಷೆಗೆ ಬಳಸಿಕೊಂಡಿತು. ವಾಸ್ತವವಾಗಿ ಬಳಸುವ ಆವೃತ್ತಿ ಪ್ರಾಯೋಗಿಕ ಆವೃತ್ತಿಗಿಂತ 1.6 ಪಟ್ಟು ದೊಡ್ಡದಾಗಿರಲಿದೆ. ಆರ್‌ಎಲ್‌ವಿ-ಟಿಡಿಯಲ್ಲಿ ಅದರ ದೇಹ, ನೋಸ್ ಕ್ಯಾಪ್, ರೆಕ್ಕೆಗಳು, ಹಾಗೂ ಬಾಲ ಸೇರಿದಂತೆ ವಿವಿಧ ಭಾಗಗಳಿರಲಿವೆ. ಅದರೊಡನೆ, ಎಲೆವಾನ್ಸ್ ಮತ್ತು ರಡ್ಡರ್‌ಗಳೆಂಬ ನಿಯಂತ್ರಣ ಘಟಕಗಳೂ ಇವೆ.

ಆರ್‌ಎಲ್‌ವಿ-ಟಿಡಿ ಭಾರತದ ಪ್ರಥಮ ಮಾನವ ರಹಿತ ಟೆಸ್ಟ್ ಬೆಡ್ ಆಗಿದ್ದು, ಇದನ್ನು ಇಸ್ರೋ ತನ್ನ ರಿಯೂಸೆಬಲ್ ಲಾಂಚ್ ವೆಹಿಕಲ್ ಡೆಮಾನ್ಸ್ಟ್ರೇಷನ್ ಪ್ರೋಗ್ರಾಮ್‌ಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದು ಎರಡು ಸ್ಟೇಜ್ ಟು ಆರ್ಬಿಟ್ ಮರು ಬಳಕೆಯ ಉಡಾವಣಾ ವಾಹನದ ಮೂಲಮಾದರಿಯಾಗಿದೆ.

ಇದನ್ನೂ ಓದಿ- ಭಾರತದ ಪ್ರಯಾಣಿಕ ಸಾರಿಗೆ ದೈತ್ಯರಾದ ಓಲಾ ಊಬರ್ ಗಳನ್ನು ನಡುಗಿಸಿದ ಒಎನ್‌ಡಿಸಿಯ ಶೂನ್ಯ ಕಮಿಷನ್ ಸೇವೆ

ಇದರ ವೇಗವನ್ನು ಮ್ಯಾಕ್-5ಗೆ, ಅಥವಾ ಪ್ರತಿ ಗಂಟೆಗೆ 6,000 ಕಿಲೋಮೀಟರ್, ಅಂದರೆ ಶಬ್ದದ ವೇಗಕ್ಕಿಂತ ಸುಮಾರು ಐದು ಪಟ್ಟು ಹೆಚ್ಚು ವೇಗಕ್ಕೆ ತಲುಪುವಂತೆ ಮಾಡಲು ಎಚ್ಎಸ್9 ಎಂಬ ಘನ ಬೂಸ್ಟರ್ ಅನ್ನು ಬಳಸಿಕೊಳ್ಳಲಾಗಿದೆ. ಆರ್‌ಎಲ್‌ವಿ-ಟಿಡಿಯ ಅಭಿವೃದ್ಧಿಗೆ ಆಧುನಿಕ ಉಪಕರಣಗಳಾದ ಅಲಾಯ್ಸ್, ಕಾಂಪೋಸಿಟ್‌ಗಳು, ಹಾಗೂ ಇನ್ಸುಲೇಶನ್ ಉಪಕರಣಗಳು, ಕುಶಲ ಕಾರ್ಮಿಕರು, ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಅಗತ್ಯವಿದೆ.

ಸ್ವಾಯತ್ತ ಮಿಡ್ ಏರ್ ರಿಲೀಸ್:
ಇಸ್ರೋದ ಪ್ರಕಾರ, ರೆಕ್ಕೆಯನ್ನು ಹೊಂದಿದ್ದ ಒಂದು ವಸ್ತುವನ್ನು ಹೆಲಿಕಾಪ್ಟರ್ ಮೂಲಕ 4.5 ಕಿಲೋಮೀಟರ್ ಎತ್ತರಕ್ಕೆ ಒಯ್ದು, ಅಲ್ಲಿಂದ ಬಿಡುಗಡೆಗೊಳಿಸಿ, ಅದು ಸ್ವಾಯತ್ತವಾಗಿ ಚಿತ್ರದುರ್ಗದ ರಕ್ಷಣಾ ವಾಯುನೆಲೆಯ ರನ್‌ವೇನಲ್ಲಿ ಇದೇ ಮೊದಲ ಬಾರಿಗೆ ಇಳಿಯುವಂತೆ ಮಾಡಲಾಯಿತು. ಒಂದು ಬಾಹ್ಯಾಕಾಶ ವಿಮಾನದಂತಹ ಆರ್‌ಎಲ್‌ವಿ ಅತ್ಯಂತ ಕಡಿಮೆ ಲಿಫ್ಟ್ ಟು ಡ್ರ್ಯಾಗ್ ಅನುಪಾತ ಹೊಂದಿದ್ದು, ಹೈ ಗ್ಲೈಡ್ ಕೋನದಲ್ಲಿ ಗಂಟೆಗೆ 350 ಕಿಲೋಮೀಟರ್ ವೇಗದಲ್ಲಿ ಭೂಸ್ಪರ್ಶ ನಡೆಸುತ್ತದೆ.

ಬೆಳಗ್ಗೆ 7:10ಕ್ಕೆ, ಆರ್‌ಎಲ್‌ವಿಯನ್ನು ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ ಅಂಡರ್‌ಸ್ಲಂಗ್ ಲೋಡ್ ರೂಪದಲ್ಲಿ 4.5 ಕಿಲೋಮೀಟರ್ ಎತ್ತರಕ್ಕೆ ಒಯ್ಯಲಾಯಿತು. ಆರ್‌ಎಲ್‌ವಿಯ ಯೋಜನಾ ನಿರ್ವಹಣಾ ಕಂಪ್ಯೂಟರ್‌ಗೆ ಬೇಕಾದ ನಿಯತಾಂಕಗಳನ್ನು ಪೂರೈಸಿದ ಬಳಿಕ, ಕಂಪ್ಯೂಟರ್ ಆದೇಶದಂತೆ ಅದನ್ನು 4.6 ಕಿಲೋಮೀಟರ್‌ಗಳ ಡೌನ್ ರೇಂಜ್ ಮೂಲಕ ಬಿಡುಗಡೆಗೊಳಿಸಲಾಯಿತು. ಆ ಬಿಡುಗಡೆಯೂ ಸ್ವಾಯತ್ತವಾಗಿದ್ದು, ಸ್ಥಾನ, ವೇಗ, ಎತ್ತರ, ಬಾಡಿ ರೇಟ್ ಸೇರಿದಂತೆ 10 ನಿಯತಾಂಕಗಳನ್ನು ಒಳಗೊಂಡಿತ್ತು. ಬಳಿಕ ಆರ್‌ಎಲ್‌ವಿ ಸ್ವತಂತ್ರವಾಗಿ ಭೂಮಿಯೆಡೆಗೆ ಚಲಿಸಿ, ಭೂಸ್ಪರ್ಶ ನಡೆಸಿತು. ಇದಕ್ಕಾಗಿ ಅಂತರ್ಗತ ನ್ಯಾವಿಗೇಶನ್, ಮಾರ್ಗದರ್ಶನ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಬಳಸಿಕೊಳ್ಳಲಾಯಿತು. ಇದು ಏರ್ ಸ್ಟ್ರಿಪ್ ನಲ್ಲಿ ಬೆಳಗ್ಗೆ 7:40ಕ್ಕೆ ಸ್ವಾಯತ್ತ ಭೂಸ್ಪರ್ಶ ನಡೆಸಿತು.

ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ (ವಿಎಸ್ಎಸ್‌ಸಿ) ನಿರ್ದೇಶಕರಾದ ಎಸ್ ಉನ್ನಿಕೃಷ್ಣನ್ ನಾಯರ್ ಅವರ ಪ್ರಕಾರ, ಕಾರ್ಯಾಚರಣೆ ಅಂದುಕೊಂಡ ರೀತಿಯಲ್ಲೇ ನಡೆದು, ಎಲ್ಲ ನಿಯತಾಂಕಗಳನ್ನೂ ಪೂರೈಸಿತ್ತು. ಈ ಬಾಹ್ಯಾಕಾಶ ವಾಹನ ಬಾಹ್ಯಾಕಾಶ ರಿ-ಎಂಟ್ರಿ ವಾಹನದ ರೀತಿಯಲ್ಲೇ ಅತ್ಯಂತ ವೇಗವಾಗಿ, ನಿಖರವಾಗಿ, ಭೂಸ್ಪರ್ಶ ನಡೆಸಿತು. ಈ ಬಾಹ್ಯಾಕಾಶ ವಾಹನ ಸ್ಪೇಸ್ ರಿಎಂಟ್ರಿ ವಾಹನದ ರೀತಿಯಲ್ಲಿ ಅತ್ಯಂತ ವೇಗವಾಗಿ, ಮಾನವರಹಿತವಾಗಿ, ನಿಖರ ಭೂಸ್ಪರ್ಶ ನಡೆಸಿತು ಎಂಬುದಾಗಿ ಇಸ್ರೋ ಘೋಷಿಸಿತು. ಇಸ್ರೋದ ಆರ್‌ಎಲ್‌ವಿ-ಎಲ್ಇಎಕ್ಸ್ ನಿಖರ ನ್ಯಾವಿಗೇಶನ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್, ಸ್ಯೂಡೋಲೈಟ್ ವ್ಯವಸ್ಥೆ, ಕೆ-ಬ್ಯಾಂಡ್ ರೇಡಾರ್ ಅಲ್ಟಿಮೀಟರ್, ದೇಶೀಯ ನಿರ್ಮಾಣದ ಲ್ಯಾಂಡಿಂಗ್ ಗೇರ್, ಏರೋಫಾಯಿಲ್ ಹನಿಕಾಂಬ್ ಫಿನ್ಸ್ ಹಾಗೂ ಬ್ರೇಕ್ ಪ್ಯಾರಾಶೂಟ್ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಇದನ್ನೂ ಓದಿ- ಇಸ್ರೋ/ಎನ್ಎಸ್ಐಎಲ್ ಮೂಲಕ 36 ಉಪಗ್ರಹಗಳ ಉಡಾವಣೆ ನಡೆಸಿದ ವನ್ ವೆಬ್: ಜಾಗತಿಕ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು

ಈ ಯೋಜನೆಯನ್ನು ಆರಂಭದಲ್ಲಿ ಸಂಪೂರ್ಣವಾಗಿ ಮರುಬಳಕೆ ಮಾಡಬಲ್ಲ, ಕಕ್ಷೆಗೆ ತೆರಳಬಲ್ಲ ಸಾಮರ್ಥ್ಯವಿರುವ ಎರಡು ಹಂತಗಳ ಬಾಹ್ಯಾಕಾಶ ವಾಹನದ ನಿರ್ಮಾಣಕ್ಕೆ ಅಗತ್ಯವಿರುವ ವಿವಿಧ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸುವ ಸಲುವಾಗಿ ಆರಂಭಿಸಲಾಯಿತು. ಮೇ 23, 2016ರಂದು ಇಸ್ರೋ ತನ್ನ ಮೊತ್ತಮೊದಲ ಆರ್‌ಎಲ್‌ವಿ-ಟಿಡಿ ಎಚ್ಇಎಕ್ಸ್-01 ಯೋಜನೆಯನ್ನು ಜಾರಿಗೆ ತಂದಿತು. ಅದು ಭೂಮಿಗೆ ಮರಳಿ ಆಗಮಿಸುವ ಬಾಹ್ಯಾಕಾಶ ವಾಹನದ ವಿನ್ಯಾಸ ಮತ್ತು ಪರೀಕ್ಷೆಯ ಪ್ರಮುಖ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿತು. ಇದೊಂದು ಸಬ್ ಆರ್ಬಿಟಲ್ ಹಾರಾಟ ಯೋಜನೆಯಾಗಿದ್ದು, ನೀರಿನ ಮೇಲೆ ಇಳಿಸುವ ಉದ್ದೇಶದಿಂದ ನಿರ್ಮಿಸಲಾಗಿತ್ತು.

ಆದರೆ ಇದನ್ನು ನಿಖರವಾಗಿ ರನ್‌ವೇ ಮೇಲೆ ಇಳಿಸುವ ಪರೀಕ್ಷೆ ನಡೆಸದಿರುವುದು ಸಣ್ಣ ಮಟ್ಟಿನ ನಿರಾಶಾದಾಯಕ ವಿಚಾರವೇ. ಮುಂದಿನ ದಿನಗಳಲ್ಲಿ ವಾಸ್ತವವಾಗಿ ಟೂ ಸ್ಟೇಜ್ ಟು ಆರ್ಬಿಟ್ (ಟಿಎಸ್‌ಟಿಓ) ರಿಯೂಸೆಬಲ್ ಲಾಂಚ್ ವೆಹಿಕಲ್ ನಿರ್ಮಿಸುವ ಮೊದಲು, ಇನ್ನೂ ಎರಡು ಪರೀಕ್ಷೆಗಳನ್ನು ನಡೆಸಬೇಕಿದೆ. ಕೊನೆಯ ಎರಡು ಪ್ರಯೋಗಗಳಾದ ಆರ್‌ಇಎಕ್ಸ್ (ರಿಟರ್ನ್ ಫ್ಲೈಟ್ ಎಕ್ಸ್ಪರಿಮೆಂಟ್) ಹಾಗೂ ಎಸ್‌ಪಿಇಎಕ್ಸ್ (ಸ್ಕ್ರಾಮ್‌ಜೆಟ್ ಪ್ರೊಪಲ್ಷನ್ ಎಕ್ಸ್‌ಪರಿಮೆಂಟ್) ಇನ್ನೂ ಬಾಕಿಯಿದ್ದು, ಅವುಗಳನ್ನು ನಡೆಸುವ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.

ಇಸ್ರೋದ ಪ್ರಕಾರ, ರೆಕ್ಕೆ ಹೊಂದಿರುವ ಆರ್‌ಎಲ್‌ವಿ-ಟಿಡಿಯ ಕುರಿತಾದ ಸರಣಿ ಪರೀಕ್ಷೆಗಳು ಸಂಪೂರ್ಣವಾಗಿ ಮರುಬಳಕೆ ಮಾಡಬಲ್ಲ ಉಡಾವಣಾ ವಾಹನಗಳನ್ನು ನಿರ್ಮಿಸಿ, ಕಡಿಮೆ ಖರ್ಚಿನಲ್ಲಿ ಬಾಹ್ಯಾಕಾಶ ಪ್ರವೇಶಿಸುವ ಯೋಜನೆಗೆ ಅಗತ್ಯ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಮಹತ್ವದ ಭಾಗವಾಗಿದೆ. ಆರ್‌ಎಲ್‌ವಿ-ಟಿಡಿಯನ್ನು ಹೈಪರ್‌ಸಾನಿಕ್ ಫ್ಲೈಟ್ (ಎಚ್ಇಎಕ್ಸ್), ಅಟಾನಮಸ್ ಲ್ಯಾಂಡಿಂಗ್ (ಎಲ್ಇಎಕ್ಸ್), ರಿಟರ್ನ್ ಫ್ಲೈಟ್ ಎಕ್ಸ್‌ಪರಿಮೆಂಟ್ (ಆರ್‌ಇಎಕ್ಸ್), ಪವರ್ಡ್ ಕ್ರೂಸ್ ಫ್ಲೈಟ್ ಹಾಗೂ ಸ್ಕ್ರ್ಯಾಮ್ ಜೆಟ್ ಪ್ರೊಪಲ್ಷನ್ ಎಕ್ಸ್‌ಪರಿಮೆಂಟ್ (ಎಸ್‌ಪಿಇಎಕ್ಸ್) ನಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಬಳಸಲಾಗುತ್ತದೆ.

ಇಸ್ರೋ ಅಧ್ಯಕ್ಷರಾದ ಎಸ್ ಸೋಮನಾಥ್ ಅವರು ಶನಿವಾರದಂದು (ಎಪ್ರಿಲ್ 1, 2023) ಮುಂದಿನ ದಿನಗಳಲ್ಲಿ ನಾವು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಬಾಹ್ಯಾಕಾಶ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು. ಇಂತಹ ಒಂದು ಪ್ರವಾಸಕ್ಕೆ ಪ್ರತಿಯೊಬ್ಬ ಪ್ರವಾಸಿಗೆ ಆರು ಕೋಟಿ ಅಂದಾಜು ವೆಚ್ಚ ತಗಲಲಿದೆ. ಇಸ್ರೋದ ತಂಡ ಈ ಬಾಹ್ಯಾಕಾಶ ವಾಹನವನ್ನು ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ಪ್ರವಾಸ ಆಯೋಜಿಸುವ ಸಲುವಾಗಿ ನಿರ್ಮಿಸಿದೆ. ಅವರ ಪ್ರಕಾರ, ಬ್ಲೂ ಒರಿಜಿನ್ ಅಥವಾ ವರ್ಜಿನ್ ಗ್ಯಾಲಕ್ಟಿಕ್‌ನಲ್ಲಿ ಈ ಪ್ರವಾಸದ ಟಿಕೆಟ್ ವೆಚ್ಚ ಆರು ಕೋಟಿಯಾಗಿರುತ್ತದೆ. ಒಂದು ವೇಳೆ ಇಸ್ರೋದ ವಾಹನವನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವಂತಾದರೆ ವಾಹನದ ಮರುಬಳಕೆಯ ಸಾಧ್ಯತೆಯಿಂದ ವೆಚ್ಚ ಅಷ್ಟರಲ್ಲೇ ಇರಲಿದೆ.

ಇದನ್ನೂ ಓದಿ- ಕೆಲವು ಓಪಿಯಾಯ್ಡ್‌ಗಳು ಯಾಕೆ ಉಳಿದವುಗಳಿಂದ ಅಪಾಯಕಾರಿ?

ಬಾಹ್ಯಾಕಾಶ ಪ್ರವಾಸೋದ್ಯಮ: ಒಂದು ಆಸಕ್ತಿಕರ ವಿಚಾರ ಬಾಹ್ಯಾಕಾಶ ಪ್ರವಾಸೋದ್ಯಮ ಎಂದರೆ ಮನೋರಂಜನಾ ಉದ್ದೇಶಕ್ಕಾಗಿ ವಾಣಿಜ್ಯಿಕ ಬಾಹ್ಯಾಕಾಶ ಪ್ರವಾಸ ಕೈಗೊಳ್ಳುವುದು. ಈ ಪ್ರವಾಸ ಭೂಮಿಯ ವಾತಾವರಣದಿಂದ ಸಾಕಷ್ಟು ಮೇಲಕ್ಕೆ ತೆರಳಿ, ತೂಕಾರಾಹಿತ್ಯ ಸ್ಥಿತಿಯ ಅನುಭವವನ್ನು ಪಡೆಯುವುದು, ಬಾಹ್ಯಾಕಾಶದಿಂದ ಭೂಮಿಯನ್ನು ವೀಕ್ಷಿಸುವುದು, ತೂಕಾರಾಹಿತ್ಯ ಸ್ಥಿತಿಯಲ್ಲಿ ಪ್ರಯೋಗಗಳನ್ನು ನಡೆಸುವ ಅವಕಾಶಗಳನ್ನು ಒದಗಿಸುತ್ತದೆ.

ಬಾಹ್ಯಾಕಾಶ ಪ್ರವಾಸೋದ್ಯಮ ಇನ್ನೂ ಆರಂಭಿಕ ಹಂತದಲ್ಲಿದ್ದು, ಗಗನಯಾನಿಗಳು, ಸಂಶೋಧಕರು, ಸೇರಿದಂತೆ, ಕೆಲವರಿಗಷ್ಟೇ ಲಭ್ಯವಾಗಿದೆ. ಆದರೆ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದು, ಖಾಸಗಿ ಸಂಸ್ಥೆಗಳಾದ ಸ್ಪೇಸ್ ಎಕ್ಸ್, ಬ್ಲೂ ಒರಿಜಿನ್, ವರ್ಜಿನ್ ಗ್ಯಾಲಾಕ್ಟಿಕ್, ಮತ್ತಿತರ ಸಂಸ್ಥೆಗಳು ಬಂದ ನಂತರ, ಸಾರ್ವಜನಿಕರಲ್ಲೂ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಆಸಕ್ತಿ ಬೆಳೆಯುತ್ತಿದೆ. ಬಾಹ್ಯಾಕಾಶ ಪ್ರವಾಸೋದ್ಯಮ ಇಂದಿಗೂ ಅಪಾರ ವೆಚ್ಚದಾಯಕ ಮತ್ತು ದುರ್ಲಭವಾಗಿದ್ದರೂ, ಬಾಹ್ಯಾಕಾಶ ಸಂಶೋಧನೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲದು. ಬಾಹ್ಯಾಕಾಶ ಪ್ರಯೋಗಗಳಿಗೆ ಅಪಾರ ಹಣದ ಅವಶ್ಯಕತೆಯಿದ್ದು, ಬಾಹ್ಯಾಕಾಶ ಪ್ರವಾಸೋದ್ಯಮ ಬಾಹ್ಯಾಕಾಶ ವಲಯಕ್ಕೆ ಹೊಸ ಆದಾಯವನ್ನು ತಂದುಕೊಡಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News