ಥಾಯ್ಲೆಂಡ್ ಗುಹೆಯಿಂದ ಎಲ್ಲಾ 12 ಬಾಲಕರು ಮತ್ತು ಫುಟ್ಬಾಲ್ ಕೋಚ್ ರಕ್ಷಣೆ

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲಾ 12 ಬಾಲಕರು ಮತ್ತು ಓರ್ವ ಫುಟ್ಬಾಲ್ ಕೋಚ್ ಅನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.

Updated: Jul 10, 2018 , 07:21 PM IST
ಥಾಯ್ಲೆಂಡ್ ಗುಹೆಯಿಂದ ಎಲ್ಲಾ 12 ಬಾಲಕರು ಮತ್ತು ಫುಟ್ಬಾಲ್ ಕೋಚ್ ರಕ್ಷಣೆ

ನವದೆಹಲಿ: ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲಾ 12 ಬಾಲಕರು ಮತ್ತು ಓರ್ವ ಫುಟ್ಬಾಲ್ ಕೋಚ್ ಅನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ಇದರೊಂದಿಗೆ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಥಾಯ್ಲೆಂಡ್ ನೌಕಾ ಮೂಲ ಮತ್ತು ಪ್ರಾಂತೀಯ ಅಧಿಕಾರಿಯೊಬ್ಬರು, 'ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಗಿದೆ" ಎಂದಿದ್ದಾರೆ.

ಉತ್ತರ ಥೈಲ್ಯಾಂಡ್ ಪ್ರವಾಹ ಪೀಡಿತ ಗುಹೆಯೊಂದರಲ್ಲಿ ಎರಡು ವಾರಗಳಿಂದ ಸಿಲುಕಿದ್ದ 12 ಮಕ್ಕಳು ಮತ್ತು ಓರ್ವ ಫುಟ್ಬಾಲ್ ಕೋಚ್'ನಲ್ಲಿ 10 ಮಕ್ಕಳನ್ನು ಇಲ್ಲಿಯವರೆಗೆ ರಕ್ಷಿಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ಕು ಮಕ್ಕಳು ಮತ್ತು ಸೋಮವಾರ ನಾಲ್ಕು ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ತರಲಾಗಿತ್ತು. ಅವರೆಲ್ಲರೂ ಆರೋಗ್ಯವಾಗಿದ್ದು, ಕೆಲವರು ಚಾಕೊಲೇಟ್ ಮತ್ತು ಬ್ರೆಡ್ ಸೇವಿಸಿದ್ದಾರೆ. ಅವರಲ್ಲಿ ಇಬ್ಬರು ಬಾಲಕರಿಗೆ ಶ್ವಾಸಕೋಶದ ಸೋಂಕು ತಗುಲಿದ್ದು, ಭಾನುವಾರ ರಕ್ಷಿಸಲಾದ ನಾಲ್ವರು ಬಾಲಕರೂ ಆಸ್ಪತ್ರೆಯಲ್ಲಿ ನಿಧಾನವಾಗಿ ಓಡಾಡುತ್ತಿದ್ದಾರೆ ಎಂದು ತಿಳಿಸಿದರು. ಉಳಿದ ಬಾಲಕರು ಮತ್ತು ತರಬೇತುದಾರರನ್ನು ಇಂದು ರಕ್ಷಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು. 

ಕೆಲ ಬಾಲಕರನ್ನು ಆಸ್ಪತ್ರೆಯಲ್ಲಿಯೇ ಇರಿಸಲಾಗಿದ್ದು, ಪೋಷಕರಿಗೆ ಭೇಟಿ ಮಾಡಲು ಅವಕಾಶ ನೀಡಿಲ್ಲ. ಅವರನ್ನು ಇನ್ನೂ ಒಂದು ವಾರ ಆಸ್ಪತ್ರೆಯಲ್ಲಿಯೇ ಇರಿಸಿ, ಆರೋಗ್ಯಸ್ಥಿತಿ ತಹಬದಿಗೆ ಬಂದ ನಂತರ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಗುಹೆಯಲ್ಲಿ ಸಿಲುಕಿದ್ದ 6 ಮಕ್ಕಳು ವ್ಯಾಸಂಗ ಮಾಡುತ್ತಿದ್ದ ಮಾ ಸಾಯಿ ಪ್ರಾಸಿಟ್ಸಾರ್ಟ್ ಶಾಲೆಯ ಆಡಳಿತ ಮಂಡಳಿ ಸೇರಿ ಥಾಯ್ಲೆಂಡ್ ಮತ್ತು ವಿಶ್ವದಾದ್ಯಂತ ಜನತೆ ಈ ರಕ್ಷಣಾ ಕಾರ್ಯಾಚರಣೆಯನ್ನು ಪ್ರಶಂಶಿಸಿದ್ದಾರೆ.