ಬಳ್ಳಾರಿ ಪ್ರವಾಸ ರದ್ದುಗೊಳಿಸಿದ ಅಮಿತ್ ಶಾ
ಬಳ್ಳಾರಿ ಪ್ರವಾಸ ರದ್ದುಗೊಳಿಸಿ ಬೆಂಗಳೂರಿನಲ್ಲೇ ಸಭೆ ನಡೆಸಲಿರುವ ಶಾ.
ಬೆಂಗಳೂರು: ಬಿಜೆಪಿ ಚಾಣಕ್ಯ ತಮ್ಮ ಪೂರ್ವ ನಿಗದಿತ ಬಳ್ಳಾರಿ ಪ್ರವಾಸವನ್ನು ಏಕಾಏಕಿ ರದ್ದುಗೊಳಿಸಿದ್ದಾರೆ. ಬಳ್ಳಾರಿಗೆ ತೆರಳುವ ಬದಲು ಬೆಂಗಳೂರಿನಲ್ಲೇ ಇದ್ದು ಸಭೆ ನಡೆಸಲಿರುವ ಶಾ, ಬಳಿಕ ಕೊಪ್ಪಳದಿಂದ ತಮ್ಮ ಪ್ರವಾಸವನ್ನು ಮುಂದುವರೆಸಲಿದ್ದಾರೆ.
ಇಂದು ಬೆಳಿಗ್ಗೆ 10:10ಕ್ಕೆ ನಿಗದಿಯಾಗಿದ್ದ ಬಳ್ಳಾರಿ ಪ್ರವಾಸವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೊನೆ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ. ಬಳ್ಳಾರಿಯಿಂದ ಆರಂಭವಾಗಬೇಕಿದ್ದ ಮಧ್ಯ ಕರ್ನಾಟಕ ಭಾಗದ 'ಕರುನಾಡು ಜಾಗೃತಿ ಯಾತ್ರೆ' ಕೊಪ್ಪಳಕ್ಕೆ ಮುಂದೂಡಿಕೆಯಾಗಿದೆ. ಗುರುವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ, ಇಂದು ಮಧ್ಯಾಹ್ನದವರೆಗೆ ಬೆಂಗಳೂರಿನಲ್ಲೇ ಸಭೆ ನಡೆಸಿ ಬಳಿಕ ನೇರವಾಗಿ ಕೊಪ್ಪಳಕ್ಕೆ ತೆರಳಲಿದ್ದಾರೆ.
ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವೆ ಭಿನ್ನಮತ ಉಲ್ಬಣಿಸಿದ್ದು, ಮಹಾ ನಾಯಕರ ಕಿತ್ತಾಟ ಸರಿಪಡಿಸಲು ಶಾ ಮುಂದಾಗಿದ್ದಾರೆ. ಈ ವಿಷಯವಾಗಿ ಇಂದು ಅಮಿತ್ ಶಾ ನಿವಾಸದಲ್ಲಿ ಯಡಿಯೂರಪ್ಪ, ಅನಂತ್ ಕುಮಾರ್ ಜೊತೆ ಪ್ರತ್ಯೇಕ ಮಾತುಕತೆ ನಡೆಸಲಿದ್ದು, ಭಿನ್ನಮತ ಶಮನಕ್ಕೆ ಪ್ರಯತ್ನಿಸಲಿದ್ದಾರೆ. ಜೊತೆಗೆ ಕೆಲ ದಿನಗಳ ಹಿಂದೆಯಷ್ಟೇ ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಯಾವ ಸಂಬಂಧವಿಲ್ಲ ಎಂದು ಶಾ ಹೇಳಿದ್ದರು. ಆದರೆ, ಜನಾರ್ಧನ ರೆಡ್ಡಿ ಮೊಳಕಾಲ್ಮೂರಿನಲ್ಲಿ ರೆಡ್ಡಿ ಬಿಎಸ್ವೈ ಜೊತೆ ರೋಡ್ ಶೋ ನಲ್ಲಿ ಭಾಗಿಯಾಗಿದ್ದರು. ಇದು ಬಿಜೆಪಿಗೆ ಕೊಂಚ ಮುಜುಗರದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಪ್ರವಾಸದ ವೇಳೆ ಜನಾರ್ಧನ ರೆಡ್ಡಿ ತಮ್ಮ ಜತೆಗೆ ಕಾಣಿಸಿಕೊಂಡರೆ ಎಂಬ ವಿಷಯ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.