ಚಿತ್ರದುರ್ಗ : ಇಡೀ ದೇಶದಲ್ಲಿ ದಲಿತ ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು ಇಲ್ಲಿನ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಭಾಗದ ದಲಿತ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಒನಕೆ ಓಬವ್ವ, ಮದಕರಿ ನಾಯಕನನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ. ಯಾರ ಜಯಂತಿ ಆಚರಿಸಬೇಕೆಂಬ ಆಲೋಚನೆಯೇ ಇಲ್ಲದೆ, ಒಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇತಿಹಾಸವನ್ನು ಮತ್ತು ಜನರ ಭಾವನೆಗಳನ್ನು ತಿರುಚಲು ಪ್ರಯತ್ನಿಸುತ್ತಿದೆ. ವೀರ ಮದಕರಿ ನಾಯಕನ, ಒನಕೆ ಒಬವ್ವರ ಜಯಂತಿ ಆಚರಿಸುವುದನ್ನು ಬಿಟ್ಟು, ಒಬವ್ವನನ್ನು ಮೋಸದಿಂದ ಕೊಂದ ಸುಲ್ತಾನರ ಜಯಂತಿ ಆಚರಿಸಲು ಹೊರಟಿದ್ದಾರೆ. ಈ ಜಯಂತಿ ಆಚರಣೆ ನೆಪದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕ ಮತ್ತು ಚಿತ್ರದುರ್ಗದ ಜನತೆಗೆ ಮೋಸ ಮಾಡಿದ್ದಾರೆ, ಜನರ ಭಾವನೆ ಜೊತೆ ನಾಟಕ ಮಾಡಿದ್ದಾರೆ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು. 


ಕಾಂಗ್ರೆಸ್ ಒಂದು ಪರಿವಾರಕ್ಕಾಗಿ ಮಹಾನ್ ನಾಯಕರನ್ನು ಬಲಿಕೊಡುವ ಇತಿಹಾಸ ಹೊಂದಿದೆ. ದಲಿತರ, ಬಡವರ ಏಳಿಗೆಗಾಗಿ ಶ್ರಮಿಸುತ್ತಿದ್ದ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಎಸ್.ನಿಜಲಿಂಗಪ್ಪ ಅವರು, ನೆಹರು ಅವರ ಆರ್ಥಿಕ ನೀತಿ ವಿರೋಧಿಸಿದ ಒಂದೇ ಒಂದು ಕಾರಣಕ್ಕಾಗಿ ಪಕ್ಷದಲ್ಲಿ ಮೂಲೆಗುಂಪಾಗಿಸಿದರು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಇದೇ ರೀತಿ ಕಾಂಗ್ರೆಸ್ ಅವಮಾನ ಮಾಡಿತು. ಅವರು ನಿಧನರಾದರೂ ಸಹ, ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ಆಲೋಚಿಸಲಿಲ್ಲ ಎಂದು ಮೋದಿ ಕಿಡಿ ಕಾರಿದರು. 


ದಲಿತರನ್ನು ಅವಮಾನಪಡಿಸುವ ಯಾವುದೇ ಕೃತ್ಯವನ್ನು ಬಿಜೆಪಿ ಸಮರ್ಥಿಸುವುದಿಲ್ಲ. ದಲಿತ ಸಮಾಜಕ್ಕೆ ಸಿಗಬೇಕಾದ ಎಲ್ಲ ಸೌಲಭ್ಯಗಳು ಹಾಗೂ ದಲಿತರನ್ನು ಉನ್ನತಿಗೆ ಕೊಂಡೊಯ್ಯುವ ಎಲ್ಲ ಕೆಲಸಗಳಿಗೆ ಬಿಜೆಪಿ ತನ್ನನ್ನು ಸಮರ್ಪಿಸಿಕೊಂಡಿದೆ. ದಿವ್ಯಾಂಗರಿಗೆ ಅಗತ್ಯವಾದ ಸಾಧನಗಳನ್ನು ಒದಗಿಸಿ, 5 ಸಾವಿರಕ್ಕೂ ಹೆಚ್ಚು ಕ್ಯಾಂಪ್ ಗಳನ್ನು ಬಿಜೆಪಿ ನಡೆಸಿದೆ. ಅಷ್ಟೇ ಈಕೆ, ದಲಿತರಿಗೆ ರಾಷ್ಟ್ರಪತಿ ಸ್ಥಾನ ನೀಡಿದೆ ಎಂದು ಮೋದಿ ಹೇಳಿದರು.


100 ವರ್ಷಗಳಲ್ಲಿ 70 ವರ್ಷ ಬರಗಾಲ ಇರುವ ಕ್ಷೇತ್ರದಲ್ಲಿ ಜನರ ಕಲ್ಯಾಣ ಮಾಡುವ ಬದಲು ತಮ್ಮ ಕಲ್ಯಾಣ ಮಾತ್ರ ಇಲ್ಲಿನ ಕಾಂಗ್ರೆಸ್ ಶಾಸಕರು ಮಾಡಿಕೊಂಡಿದ್ದಾರೆ. ಒಂದೇ ದಿನದಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ1200 ಬೋರ್‌ವೆಲ್ ಗಳಿಗೆ ಅನುಮತಿ ಕೊಟ್ಟು ಮಹಾ ಭ್ರಷ್ಟಾಚಾರ ಎಸಗಿದ್ದಾರೆ. ಕುಡಿಯುವ ನೀರಿನಲ್ಲಿ, ಬಡಮಕ್ಕಳ ಹಾಸ್ಟೆಲ್ ದಿಂಬು, ಹಾಸಿಗೆಯಲ್ಲೂ ಲೂಟಿ ಮಾಡಿರುವ ಕಾಂಗ್ರೆಸ್ ಸರ್ಕಾರ ಮುಂದೊಂದು ದಿನ ನಿಮ್ಮ ಮನೆಯ ಹಾಸಿಗೆ, ದಿಂಬುಗಳನ್ನು ಲೂಟಿ ಹೊಡೆಯಲೂ ಸಹ ಇವರು ಹೇಸುವುದಿಲ್ಲ ಎಂದು ಮೋದಿ ಹೇಳಿದರು.


ಜೈಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಮಂತ್ರ ಘೋಷಣೆ ರೂಪದಲ್ಲಿ ಸಿಕ್ಕಿದೆ. ವಿಜ್ಞಾನಕ್ಕೆ  ಈ ನಾಡು ಮಾದರಿಯೆಂದೇ ಹೇಳಬಹುದು. ದೇಶಸೇವೆಗೆ ಇಲ್ಲಿನ ಜನತೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಈ ಭಾಗದಲ್ಲಿ 100 ವರ್ಷದಲ್ಲಿ 70 ವರ್ಷ ಬರಗಾಲ ಬರುತ್ತದೆ. ಆದರೆ ಈ ಭಾಗದ ಜನರು ಕೃಷಿಯಲ್ಲೂ ಮಾದರಿಯಾಗಿದ್ದಾರೆ. ಈ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ದಿಯತ್ತ ಕೊಂಡೊಯ್ಯಲು ಬಿಜೆಪಿಗೆ ಮತ ಹಾಕಿ. ಯಡಿಯೂರಪ್ಪ ಅವರನ್ನು ಗೆಲ್ಲಿಸಿ ಎಂದು ಮೋದಿ ಕೆರೆ ನೀಡಿದರು.