ಬೆಂಗಳೂರು : ಜಯನಗರ ವಿಧಾನಸಭೆ ಚುನಾವಣೆ ಮತಎಣಿಕೆ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರದ ಸುತ್ತ ಬಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 


COMMERCIAL BREAK
SCROLL TO CONTINUE READING

ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12ರಂದು ನಡೆದಿತ್ತಾದರೂ, ಬಿಜೆಪಿ ಅಭ್ಯರ್ಥಿ ಮತ್ತು ಶಾಸಕರಾಗಿದ್ದ ಬಿ.ಎನ್.ವಿಜಯಕುಮಾರ್ ಅವರ ನಿಧನದಿಂದ ಮುಂದೂಡಲ್ಪಟ್ಟಿದ್ದ ಜಯನಗರ ವಿಧಾನಸಭೆ ಕ್ಷೇತ್ರಕ್ಕೆ ಜೂನ್ 11ರಂದು ಚುನಾವಣೆ ನಡೆದು, ಶೇ.55ರಷ್ಟು ಮತದಾನವಾಗಿತ್ತು.


ಬಿ.ಎನ್.ವಿಜಯಕುಮಾರ್ ನಿಧನರಾದ ಕಾರಣ ಅದರ ಅನುಕಂಪದ ಲಾಭ ಪಡೆಯಲು ಸಹೋದರ ಬಿ.ಎನ್. ಪ್ರಹ್ಲಾದಬಾಬು ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಇನ್ನೊಂದೆಡೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅಲ್ಲದೆ ಜಯನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಹಲವಾರು ಪ್ರಗತಿಪರ ಕೆಲಸದ ಮೂಲಕ ತಮ್ಮದೇ ಛಾಪು ಮೂಡಿಸಿರುವ ರವಿಕೃಷ್ಣಾರೆಡ್ಡಿಯವರೂ ಸಹಿತ ಈ ಬಾರಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆ ಎನ್ನಲಾಗಿದೆ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ.


ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಕ್ಕೆ ಅತಿ ಅವಶ್ಯಕವಾದ ಗೆಲುವಾಗಿದೆ. ಕಾರಣ ಈಗ ಪ್ರತಿ ಒಂದೊಂದು ಸ್ಥಾನವು ಸರ್ಕಾರವನ್ನು ಭದ್ರ ಪಡಿಸಲು ಅವಶ್ಯಕವಾಗಿರುವುದರಿಂದ ಜೆಡಿಎಸ್ ಕೂಡ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದೆ.