ವಿಶ್ರಾಂತಿಗೆ ಸಿಂಗಾಪುರಕ್ಕೆ ತೆರಳಿದ ಹೆಚ್.ಡಿ.ಕುಮಾರಸ್ವಾಮಿ
ರಾಜ್ಯಾದ್ಯಂತ ಬಿರುಸಿನ ಪ್ರಚಾರ ಕೈಗೊಂಡು ದಣಿದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು 2 ದಿನಗಳ ವಿಶ್ರಾಂತಿಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ.
ಬೆಂಗಳೂರು : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿರುಸಿನ ಪ್ರಚಾರ ಕೈಗೊಂಡು ದಣಿದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು 2 ದಿನಗಳ ವಿಶ್ರಾಂತಿಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ.
ಮತದಾನ ಮುಗಿದ ಮಾರನೇ ದಿನವೇ ವಿಶ್ರಾಂತಿ ಬಯಸಿ ಪುತ್ರ ನಿಖಿಲ್ ಜೊತೆ ಹೆಚ್.ಡಿ.ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದಾರೆ. ಅವಿರತವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕುಮಾರಸ್ವಾಮಿ ಅವರು, ಪ್ರಚಾರದ ಕೊನೆಯ ದಿನಗಳಲ್ಲಿ ಆರೋಗ್ಯದಲ್ಲಿ ಬಹಳಷ್ಟು ಏರುಪೇರು ಕಂಡು ಬಂದು, ಅಸ್ವಸ್ಥರಾಗಿದ್ದರು. ಹೀಗಾಗಿ 2 ದಿನಗಳ ವಿಶ್ರಾಂತಿಗಾಗಿ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದು, ನಾಳೆ(ಮೇ 14) ರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ತರಬೇಕೆಂದು ಪಣ ತೊಟ್ಟಿದ್ದ ಕುಮರಸವ್ಮಿ ಅವರು, ರಾಜ್ಯಾದ್ಯಂತ ತಮ್ಮ ಅಭ್ಯರ್ಥಿಗಳ ಪರ ಕುಮಾರ ಪರ್ವ ಸಮಾವೇಶದ ಮೂಲಕ ಪ್ರಚಾರ ಕೈಗೊಂಡಿದ್ದರು. ರಾಮನಗರ ಮತ್ತು ಚನ್ನಪಟ್ಟಣ ಈ ಎರಡೂ ವಿಧಾನಸಭೆ ಕ್ಷೇತ್ರಗಳಿಂದ ಸ್ಪರ್ಧಿಸಿರುವ ಕುಮಾರಸ್ವಾಮಿ, ಜೆಡಿಎಸ್ ಪಕ್ಷ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 222 ಕ್ಷೇತ್ರಗಳಿಗೆ ಮೇ 12ರಂದು ಮತದಾನ ಪೂರ್ಣಗೊಂಡಿದ್ದು, ಮೇ 15ರಂದು ಚುನವಣಾ ಫಲಿತಾಂಶ ಹೊರಬೀಳಲಿದೆ.