ಬಿಜೆಪಿ ರೀತಿಯ ಕೀಳು ಮಟ್ಟದ ಪ್ರಚಾರ ನನ್ನ ರಾಜಕೀಯ ಜೀವನದಲ್ಲಿ ಎಂದೂ ನೋಡಿಲ್ಲ- ಸಿದ್ದರಾಮಯ್ಯ
ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ನಡೆಸುತ್ತಿರುವ ಚುನಾವಣಾ ಪ್ರಚಾರದ ವೈಖರಿ ಬಗ್ಗೆ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ " ಸಂಸ್ಕೃತಿ, ಪರಂಪರೆ ಬಗ್ಗೆ ಮಾತನಾಡುವ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರವೂ ಘನತೆ-ಗೌರವದಿಂದ ನಡೆಯಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಇಷ್ಟೊಂದು ಕೀಳುಮಟ್ಟದ ಪ್ರಚಾರ ನನ್ನ ರಾಜಕೀಯ ಜೀವನದಲ್ಲಿ ಎಂದೂ ನೋಡಿಲ್ಲ. ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಮುಂದುವರೆದು ಅವರು "ರಾಜಕಾರಣದಲ್ಲಿರುವ ನಮ್ಮನ್ನು ಟೀಕಿಸಿ. ಆದರೆಸರ್ಕಾರದ ಯೋಜನೆಗಳನ್ನು 'ಲಾಲಿಪಾಪ್' ಎಂದು ಹೇಳಿ ಕನ್ನಡಿಗರನ್ನು ಯಾಕೆ ಅವಮಾನಿಸುತ್ತೀರಿ? ಬೆಂಗಳೂರು ಪಾಪಿಗಳ ನಗರ ಎಂದು ಹೇಳಿ ಜನರನ್ನು ಯಾಕೆ ಪಾಪಿಗಳನ್ನಾಗಿ ಮಾಡುತ್ತೀರಿ?" ಎಂದು ಕಿಡಿಕಾರಿದ್ದಾರೆ.
ಕೊನೆಯ ಹಂತದ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ರವರು ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮೇಲೆ ವೈಯಕ್ತಿಕವಾಗಿ ಟೀಕೆ ಮಾಡಿದ್ದರು,ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಇದು ಬಿಜೆಪಿಯ ಸಂಸ್ಕೃತಿ ಹೀನ ಚುನಾವಣಾ ಪ್ರಚಾರ ಎಂದು ತೀರುಗೇಟು ನೀಡಿದ್ದಾರೆ.