ಕರ್ನಾಟಕ ವಿಧಾನಸಭೆ ಚುನಾವಣೆ: ಪೂರ್ಣಗೊಂಡ ಮತದಾನ; ಮೇ 15ಕ್ಕೆ ಫಲಿತಾಂಶ
ಕರ್ನಾಟಕದ 224 ಕ್ಷೇತ್ರಗಳಲ್ಲಿ 222 ಕ್ಷೇತ್ರಗಳಿಗೆ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಪೂರ್ಣಗೊಂಡಿದ್ದು, ಇದುವರೆಗೂ ಶೇ.70 ಮತದಾನ ನಡೆದಿದೆ.
ಬೆಂಗಳೂರು: ಕರ್ನಾಟಕದ 224 ಕ್ಷೇತ್ರಗಳಲ್ಲಿ 222 ಕ್ಷೇತ್ರಗಳಿಗೆ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ, ಸಂಜೆ 6 ಗಂಟೆಗೆ ಪೂರ್ಣಗೊಂಡಿದೆ. ಇದುವರೆಗೂ ಶೇ.70 ಮತದಾನ ನಡೆದಿದೆ. ಮತಎಣಿಕೆ ಮೇ 15ರಂದು ನಡೆಯಲಿದ್ದು, ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಸಂಜೆ 6.50
ಇದುವರೆಗೂ ಶೇ.70 ಮತದಾನ ನಡೆದಿದೆ.
ಸಂಜೆ 6.10
ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ ಇದೀಗ ಪೂರ್ಣಗೊಂಡಿದ್ದು, ಸರತಿ ಸಾಲಿನಲ್ಲಿ ನಿಂತಿರುವ ಮತದಾರರಿಗೆ ಮಾತ್ರ ಮತ ಚಲಾಯಿಸಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಇತರ ಮತಗಟ್ಟೆಗಳಲ್ಲಿ ಮತದಾನ ಸಂಪೂರ್ಣಗೊಂಡಿದ್ದು ಚುನಾವಣಾ ಸಿಬ್ಬಂದಿಗಳು ಇವಿಎಂ ಮತ್ತು ವಿವಿ ಪ್ಯಾಟ್ ಸೀಲ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಾದಾಮಿ ಕ್ಷೇತ್ರದ ಟಿಪ್ಪುನಗರದ ಮತಗಟ್ಟೆ 142, 143 ಮತ್ತು 144ರಲ್ಲಿ ಮತದಾನ ಪೂರ್ಣಗೊಂಡಿದೆ. ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಸಂಜೆ 5.45
ಬೆಳಿಗ್ಗೆ 6 ಗಂಟೆಯಿಂದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ಶೇ.61.25 ಮತದಾನ ಆಗಿದೆ.
ಸಂಜೆ 5.40
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೋಟ್ಟೆಗೊಲ್ಲಹಳ್ಳಿ ಮತಗಟ್ಟೆ 158ರಲ್ಲಿ ಮರು ಮತದಾನ ಮಾಡಲು ಚುನಾವಣಾ ಆಯೋಗ ನಿರ್ಧರಿಸಿದೆ. ಮತ ಯಂತ್ರದಲ್ಲಿ ದೋಷ ಕಂಡು ಬಂದು, ಮತದಾನ ವಿಳಂಬವಾದ ಹಿನ್ನೆಲೆಯಲ್ಲಿ ಮತದಾನ ಮುಂದೂಡಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ಸಭೆ ನಡೆಸಿ ಮರು ಮತದಾನದ ದಿನಾಂಕ ನಿಗದಿಪಡಿಸುವುದಾಗಿ ಅವರು ಹೇಳಿದ್ದಾರೆ.
ಸಂಜೆ 4.45
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮಂಡಳ್ಳಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಗೋಪಾಲ ಬ್ಯಾಕೋಡ್ ಭೇಟಿ ನೀಡಿದ್ದು, ಕಾರ್ಯಕರ್ತರನ್ನು ಚದುರಿಸುವ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದರು.
ಸಂಜೆ 4.40
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮತಗಟ್ಟೆ ಬಳಿ ಮತದಾರರಿಗೆ ಹಣ ಹಂಚಿದ ಆರೋಪದ ಮೇಲೆ ಕಿಶೋರ್ ಗೌಡ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಬಳಿ 45 ಸಾವಿರ ರೂಪಾಯಿ ನಗದು ಪತ್ತೆಯಾಗಿದೆ.
ಸಂಜೆ 4.30
ಮಾಜಿ ಸಚಿವ ಹಾಗೂ ನಟ ಅಂಬರೀಶ್ ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಮತಗಟ್ಟೆ ಸಂಖ್ಯೆ 164ರ ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿ, ವೋಟು ಹಾಕಲೇ ಬೇಕು ಹಾಕಿದ್ದೇನೆ. ಯಾರಿಗೆ ಅಂತ ಹೇಳೊಲ್ಲ. ಇನ್ನು ನಾನು ರಾಜಕೀಯದಲ್ಲಿ ಮುಂದುವರಿಯುವುದಿಲ್ಲ. ಹೊಸ ಹುಡುಗರು ಬೆಳೆಯಲಿ. ಬೆಳೆದು ಜಿಲ್ಲೆ ಕಾಪಾಡಲಿ. ಜಿಲ್ಲೆ ಅಭಿವೃದ್ಧಿಗೆ ನಾನು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಜನರೂ ನನ್ನ ಮೇಲೆ ಪ್ರೀತಿ ತೋರಿಸಿದ್ದಾರೆ. ಅಂಬರೀಷ್ ಹೆಸರಲ್ಲೇ 10 ಎಂಎಲ್ಎ ಶಕ್ತಿ ಇದೆ ಎಂದರು.
ಸಂಜೆ 4.30
ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ; ಮತಗಟ್ಟೆ 185ರಲ್ಲಿ ಮಳೆಯಿಂದ ಆಶ್ರಯ ಪಡೆಯಲು ಮತದಾರರು ಪರದಾಡುವಂತಾಗಿದೆ. ಹುಬ್ಬಳ್ಳಿಯಾದ್ಯಂತ ದಟ್ಟವಾಗಿ ಮೋಡ ಆವರಿಸಿಕೊಂಡಿದ್ದು ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ.
ಮಧ್ಯಾಹ್ನ 4.00
ಕಲಬುರ್ಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಕರಜಗಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಭೆ ಏರ್ಪಟ್ಟಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಮಧ್ಯಾಹ್ನ 03:35
ಕಲ್ಬುರ್ಗಿಯಲ್ಲಿ 43 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶವು ಮತದಾನದ ಮೇಲೆ ಪರಿಣಾಮ ಬೀರಿದೆ. 'ಬೆಳಿಗ್ಗೆ ಮತಗಟ್ಟೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸಲು ಆಗಮಿಸುತ್ತಿದ್ದರು. ಆದರೆ ಈಗ ಉಷ್ಣಾಂಶವು ಹೆಚ್ಚಿರುವುದರಿಂದ ಯಾವುದೇ ಜನಸಂದಣಿಯೂ ಇಲ್ಲ. ಕಲ್ಬುರ್ಗಿಯ ಪ್ರಸ್ತುತ ಉಷ್ಣಾಂಶ 40 ಡಿಗ್ರಿಗಳಿಗಿಂತ ಹೆಚ್ಚು.'
ಮಧ್ಯಾಹ್ನ 03:10
ಮಧ್ಯಾಹ್ನ 03:00ರವರೆಗೆ ಶೇ. 56ರಷ್ಟು ದಾಖಲೆಯ ಮತದಾನ
ಮಧ್ಯಾಹ್ನ 02: 45
ಬೆಂಗಳೂರಿನಲ್ಲಿ ಮತ ಚಲಾಯಿಸಿದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ.
ಮಧ್ಯಾಹ್ನ 02:40
ಧಾರವಾಡದ ಮತಗಟ್ಟೆ 191-ಎ ಯಲ್ಲಿ ಮತಚಲಾಯಿಸಲು ಬಂದ ವರ ಮಲ್ಲಿಕಾರ್ಜುನ್ ಗಮನ್ಗಟ್ಟಿ ಮತ್ತು ವಧು ನಿಖಿತಾ ಜೋಡಿ.
ಮಧ್ಯಾಹ್ನ 02:30
ಧಾರವಾಡದ ನವಲಗುಂದದಲ್ಲಿ ಮತ ಚಲಾಯಿಸಲು ಸಾಲುಗಟ್ಟಿನಿಂತ ಮತದಾರರು.
ಮಧ್ಯಾಹ್ನ 01:45
ಮಧ್ಯಾಹ್ನ 01:00 ಗಂಟೆವರೆಗೆ ಶೇ. 36.08ರಷ್ಟು ಮತದಾನ. ಉಡುಪಿ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಶೇ. 44 ಮತ್ತು ಬೆಂಗಳೂರು ನಗರದಲ್ಲಿ ಶೇ. 28ರಷ್ಟು ಮತದಾನ.
ಮಧ್ಯಾಹ್ನ 01:39
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ. ಯತೀಂದ್ರ ವರುಣಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು. ಕರ್ನಾಟಕದ ಮತದಾರರು ಯಾವಾಗಲೂ ರಾಜಕೀಯ ಪರಿಪಕ್ವತೆಯನ್ನು ಪ್ರದರ್ಶಿಸುತ್ತಾರೆ - ಸಿದ್ದರಾಮಯ್ಯ
ಮಧ್ಯಾಹ್ನ 01:38
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಸಾಕಷ್ಟು ಹಣ ಹಂಚಿಕೆ ಮಾಡಿದೆ. ಅವರ ಅಭ್ಯರ್ಥಿ ಅವರು ಸಮಾಜ ಕಾರ್ಯದರ್ಶಿಯೆಂದು ಹೇಳುತ್ತಾರೆ. ಅವರು ಇಷ್ಟು ಹಣವನ್ನು ಎಲ್ಲಿಂದ ಪಡೆದರು? ಅಲ್ಲದೆ ಬಿಜೆಪಿ ಆ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಜೆಡಿಎಸ್ ಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದೆ- ಸಿದ್ದರಾಮಯ್ಯ
ಮಧ್ಯಾಹ್ನ 01:20
ಕನಕಪುರದ ಮತಗಟ್ಟೆ ಸಂಖ್ಯೆ 240ರಲ್ಲಿ ಕುಟುಂಬ ಸಮೇತರಾಗಿ ಬಂದು, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಸಚಿವ ಡಿ.ಕೆ. ಶಿವಕುಮಾರ್
ಮಧ್ಯಾಹ್ನ 01:10
ಧಾರವಾಡದ ನವಲಗುಂದದಲ್ಲಿ ಉತ್ಸುಕರಾಗಿ ಮತಗಟ್ಟೆಯತ್ತ ಧಾವಿಸುತ್ತಿರುವ ಮತದಾರರು.
ಮಧ್ಯಾಹ್ನ 01:01
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೆಂಗಳೂರಿನಲ್ಲಿ ಮತ ಚಲಾಯಿಸಿದರು.
ಮಧ್ಯಾಹ್ನ 12:59
ಇದು ಸೂಕ್ಷ್ಮ ಮತದಾನ ಮತಗಟ್ಟೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆ 100 ಮೀಟರ್ಗಳಷ್ಟು ಮತಗಟ್ಟೆಯೊಳಗೆ ಸಂಭವಿಸಿದೆ. ನಾವು ತನಿಖೆ ನಡೆಸುತ್ತಿದ್ದೇವೆ. ತನಿಖೆಯ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ: ರವಿ ಚನ್ನಣ್ಣನವರ್, ಬೆಂಗಳೂರು ಡಿ.ಸಿ.ಪಿ
ಮಧ್ಯಾಹ್ನ 12:58
ಬೆಂಗಳೂರು: ಹಂಪಿ ನಗರದಲ್ಲಿನ ಮತಗಟ್ಟೆ ಹೊರಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ.
ಮಧ್ಯಾಹ್ನ 12:52
ಬೆಳಗಾವಿಯ ಮತಗಟ್ಟೆಯೊಂದರಲ್ಲಿ ಬುರ್ಖಾ ತೆಗೆಯುವುದಿಲ್ಲ ಎಂದು ಭದ್ರತಾ ಸಿಬ್ಬಂದಿಯೊಂದಿಗೆ ಮಹಿಳೆಯ ವಾಗ್ವಾದ.
ಮಧ್ಯಾಹ್ನ 12:50
ಶಿವಮೊಗ್ಗದ ಬೂತ್ ನಂ 150ರಲ್ಲಿ ವೀಲ್ಹ್ ಚೇರ್ ನಲ್ಲಿ ಬಂದು ಮತ ಚಲಾಯಿಸಿದ 87ರ ಹರೆಯದ ವೃದ್ದೆ.
ಮಧ್ಯಾಹ್ನ 12:48
ಸರತಿ ಸಾಲಿನಲ್ಲಿ ನಿಂತು ಶಿರಸಿಯಲ್ಲಿ ಮತ ಚಲಾಯಿಸಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ.
ಮಧ್ಯಾಹ್ನ 12:35
ಹಸಮಣೆ ಏರುವ ಮೊದಲು ಮತ ಚಲಾಯಿಸಿದ. ವಧು ಐಮಣಿಯಂಡ ಸ್ಮಿತಾ, ಮಡಿಕೇರಿ ತಾಲ್ಲೂಕಿನ ಕಾಂಡನಕೊಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 131 ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಮಧ್ಯಾಹ್ನ 12:30
ಧಾರವಾಡ: ಚುನಾವಣಾ ಸಿಬ್ಬಂದಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಮತ ನೀಡಬೇಕೆಂದು ಹೇಳುತ್ತಿದ್ದಾರೆ ಎಂದು ಆರೋಪಿಸಿ ಕರಡಿಗುಡ್ಡದ 58 ನೇ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚುನಾವಣಾ ಆಯೋಗದ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ಮಧ್ಯಾಹ್ನ 12:28
ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ.
ಮಧ್ಯಾಹ್ನ 12:25
ಕಳೆದ ಒಂದೂವರೆ ವರ್ಷದಿಂದ ನಾನು ಈ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೇನೆ. ಚುನಾವಣಾ ಪ್ರಚಾರ ನನಗೆ ಭಿನ್ನವಾಗಿ ಕಾಣುತ್ತಿಲ್ಲ. ನಾನು ಎಲ್ಲಿಗೆ ಹೋದರು, ಜನರು ಕಾಂಗ್ರೆಸ್ ಸರ್ಕಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಯತೀಂದ್ರ ಹೇಳಿದರು.
ಮಧ್ಯಾಹ್ನ 12:04
ಸದಾಶಿವ ನಗರದಲ್ಲಿನ ಮತಗಟ್ಟೆ ಹೊರಗಡೆ ಮತದಾರರು
ಬೆಳಿಗ್ಗೆ 11:55
ರಾಜ್ಯದ ಅತ್ಯಂತ ಹಿರಿಯ ಮತದಾರರಾಗಿರುವ, ನಡೆದಾಡುವ ದೇವರು ಎಂದೇ ಖ್ಯಾತರಾದ 111 ವರ್ಷದ ಶತಾಯುಶಿ ಶ್ರೀ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಮಠ ಆವರಣದಲ್ಲಿರುವ ಶಾಲೆಯ ಮತಗಟ್ಟೆ ಸಂಖ್ಯೆ 113ರಲ್ಲಿ ಮತ ಚಲಾಯಿಸಿದರು.
ಬೆಳಿಗ್ಗೆ 11:50
ಕಲಬುರಗಿಯ ಬಸವನಗರ ಮತಗಟ್ಟೆ ಸಂಖ್ಯೆ 108ರಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತದಾನ ಮಾಡಿದರು. ನಂತರ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಉತ್ತಮ ಮತದಾನವಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಸಿಗಲಿವೆ. ಚುನಾವಣೆ ಪೂರ್ವದಲ್ಲಿ ಐಟಿ ಮತ್ತಿತರ ದಾಳಿ ನಡೆಸಿ, ಕಾಂಗ್ರೆಸ್ ಮುಖಂಡರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ನಡೆಯಿತು. ಆದರೆ ಇದ್ಯಾವುದಕ್ಕೂ ನಾವು ಹೆದರುವುದಿಲ್ಲ ಎಂದರು.
ಬೆಳಿಗ್ಗೆ 11:40
ತುಮಕೂರು ವಿಧಾನಸಭಾ ಕ್ಷೇತ್ರದ ಹೆಗ್ಗೆರೆ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್
ಬೆಳಿಗ್ಗೆ 11:30
ಗದಗ ಜಿಲ್ಲೆಯ ರೋಣ ಪಟ್ಟಣದ ಮತಗಟ್ಟೆ ಸಂಖ್ಯೆ 117 ರಲ್ಲಿ ಮತಯಂತ್ರದಲ್ಲಿ ದೋಷ. ಮತದಾನ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ.
ಬೆಳಿಗ್ಗೆ 11:25
ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಲಿಂಬಾವಳಿ ಕುಟುಂಬ ಸಮೇತರಾಗಿ ಆಗಮಿಸಿ ಹೊಸ ತಿಪ್ಪಸಂದ್ರದ ಹೋಳಿ ಕ್ರಾಸ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಬೆಳಿಗ್ಗೆ 11:20
ಹಾಸನದ ಬೇಲೂರಿನಲ್ಲಿ ಕೈಕೊಟ್ಟ ಇವಿಎಂ. ಮತಗಟ್ಟೆ ಸಂಖ್ಯೆ 125 ಮತ್ತು 135ರಲ್ಲಿ ಇವಿಎಂ ತೊಡಕು.
ಬೆಳಿಗ್ಗೆ 11:30
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ರಾಮನಗರದಲ್ಲಿ ಮತ ಚಲಾಯಿಸಿದರು. ನಂತರ ಮಾತನಾಡಿದ ಅವರು, ಜೆಡಿಎಸ್ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಬೆಳಿಗ್ಗೆ 11:15
ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 11ರಲ್ಲಿ ಮತ ಚಲಾವಣೆ ಮಾಡಿದ ನಟಿ ಸುಧಾರಾಣಿ
ಬೆಳಿಗ್ಗೆ 11:10
ಬೆಳಿಗ್ಗೆ 11:00ರವರೆಗೆ ಶೇ.24ರಷ್ಟು ದಾಖಲೆಯ ಮತದಾನ
ಬೆಳಿಗ್ಗೆ 11:00
ಮತದಾನ ನಮ್ಮ ಹಕ್ಕು ಹಾಗೂ ನಮ್ಮ ಜವಾಬ್ದಾರಿ , ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸೋಣ- ರಾಮಲಿಂಗಾರೆಡ್ಡಿ
ಬೆಳಿಗ್ಗೆ 10:50
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಕನಕಪುರದಲ್ಲಿ ಮತ ಚಲಾಯಿಸಿದರು.
ಬೆಳಿಗ್ಗೆ 10:42
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕರ್ನಾಟಕ ಚುನಾವಣೆ ಬ್ರಾಂಡ್ ಅಂಬಾಸಿಡರ್ ರಾಹುಲ್ ದ್ರಾವಿಡ್ ಬೆಂಗಳೂರಿನ ಇಂದಿರಾನಗರದ ಅಂಬೇಡ್ಕರ್ ಕಾಲೇಜಿನಲ್ಲಿ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು.
ಬೆಳಿಗ್ಗೆ 10:40
ಬದಾಮಿಯಲ್ಲಿ ಮತ ಚಲಾಯಿಸಲು ಉತ್ಸುಕರಾಗಿ ಬಂದಿರುವ ಮತದಾರ.
ಬೆಳಿಗ್ಗೆ 10:35
ಮೈಸೂರಿನ ವಿಜಯನಗರದ ಕಾನ್ ಕಾರ್ಡ್ ಇಂಟರ್ ನ್ಯಾಷನಲ್ ಶಾಲೆ ಮತಗಟ್ಟೆಯಲ್ಲಿ ಪತ್ನಿಯೊಂದಿಗೆ ತೆರಳಿ ಮತದಾನ ಮಾಡಿದ ಸಂಸದ ಪ್ರತಾಪ್ ಸಿಂಹ
ಬೆಳಿಗ್ಗೆ 10:32
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೆಳಿಗ್ಗೆ 09:00ರ ವರೆಗೆ ಶೇ. 7.9 ಮತದಾನ
ಬೆಳಿಗ್ಗೆ 10:15
ಬೆಳಿಗ್ಗೆ 09:30ರ ವರೆಗೆ ಶೇ. 16ರಷ್ಟು ಮತದಾನ
ಬೆಳಿಗ್ಗೆ 10:02
ಬಿಜೆಪಿ 60-70 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ, ಸುದ್ದಿ ಸಂಸ್ಥೆ ಎಎನ್ಐ ಜತೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ
ಬೆಳಿಗ್ಗೆ 10:00
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಬೆಂಗಳೂರಿನಲ್ಲಿ ಮತ ಚಲಾಯಿಸಿದ್ದಾರೆ. ಮತದಾನದ ನಂತರ, ಅನಿಲ್ ಕುಂಬ್ಳೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಕುಟುಂಬದೊಂದಿಗೆ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ. ಜತೆಗೆ ಮತ ಚಲಾಯಿಸುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.
ಬೆಳಿಗ್ಗೆ 09:40
ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿ ಹುಬ್ಬಳ್ಳಿಯಲ್ಲಿ ತಮ್ಮ ಮತ ಚಲಾಯಿಸಿದರು.
ಬೆಳಿಗ್ಗೆ 09:30
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನ ಶ್ರೀಕಾಂತ ಶಾಲೆಯಲ್ಲಿ ಮತ ಚಲಾಯಿಸಿದರು.
ಬೆಳಿಗ್ಗೆ 09:25
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಪುತ್ರ ಎಚ್.ಡಿ. ರೇವಣ್ಣ ಮತ್ತು ಅವರ ಪತ್ನಿ ಭವಾನಿ ರೇವಣ್ಣ ಹಾಸನ ಜಿಲ್ಲೆಯ ಹೊಳೆನರಸಿಪುರದ ಮತಗಟ್ಟೆ ಸಂಖ್ಯೆ 244ರಲ್ಲಿ ಮತ ಚಲಾಯಿಸಿದರು.
ಬೆಳಿಗ್ಗೆ 09:18
ಸರ್ವಜ್ಞ ನಗರ ವಿಧಾನಸಭೆ ಕ್ಷೇತ್ರದಲ್ಲಿ ಮತದಾನ ಮಾಡಿದ ಸಚಿವ ಕೆ.ಜೆ. ಜಾರ್ಜ್
ಬೆಳಿಗ್ಗೆ 09:15
ಬೆಳಿಗ್ಗೆ 09:00ಗಂಟೆವರೆಗೂ ಶೇ.10.60% ಮತದಾನ ನಡೆದಿದೆ.
ಬೆಳಿಗ್ಗೆ 09:05
ಮಾಜಿ ಪ್ರಧಾನ ಮಂತ್ರಿ ಎಚ್. ಡಿ. ದೇವೇಗೌಡ ಅವರು ಹಾಸನ ಜಿಲ್ಲೆಯ ಹೊಳೆನರಸಿಪುರದ ಮತಗಟ್ಟೆ ಸಂಖ್ಯೆ 244ರಲ್ಲಿ ಮತ ಚಲಾಯಿಸಿದರು.
ಬೆಳಿಗ್ಗೆ 09:00
ಜಯನಗರದಲ್ಲಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಯವರನ್ನು ಭೇಟಿಯಾದರು. ಅದೇ ಸಮಯದಲ್ಲಿ, ಕುಮಾರಸ್ವಾಮಿ ಅವರು ರಾಜರಾಜೇಶ್ವರಿ ದೇವಸ್ಥಾನದಲ್ಲಿ ತಮ್ಮ ಪತ್ನಿಯೊಂದಿಗೆ ತೆರಳಿ ಪೂಜೆ ಸಲ್ಲಿಸಿದರು.
ಬೆಳಿಗ್ಗೆ 08:40
ಬದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುತ್ತಿರುವ ಬಿ. ಶ್ರೀರಾಮುಲು ಮತದಾನಕ್ಕೂ ಮೊದಲು ಗೋ ಪೂಜೆ ಸಲ್ಲಿಸಿದರು.
ಬೆಳಿಗ್ಗೆ 08:38
ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಬೆಂಗಳೂರಿನಲ್ಲಿ ಮತ ಚಲಾಯಿಸಿದರು.
ಬೆಳಿಗ್ಗೆ 07:55
ಹಾಸನ ಕ್ಷೇತ್ರದ ಇವಿಎಂ ದೋಷದ ಕಾರಣದಿಂದ ದೇವೇಗೌಡರ ಕುಟುಂಬ ಮತ ಚಲಾಯಿಸಲು ಸಾಧ್ಯವಾಗಲಿಲ್ಲ.
ಬೆಳಿಗ್ಗೆ 07:45
ಹುಬ್ಬಳ್ಳಿ: ಚುನಾವಣಾ ಆಯೋಗದ ಅಧಿಕಾರಿಗಳು ಮತಗಟ್ಟೆ ಸಂಖ್ಯೆ 108 ರಲ್ಲಿ ವಿವಿಪ್ಯಾಟ್ ಯಂತ್ರವನ್ನು ಬದಲಿಸಿದ್ದಾರೆ. ಈ ಮತಗಟ್ಟೆಯಲ್ಲಿ ಮತದಾನ ಇನ್ನೂ ಪ್ರಾರಂಭವಾಗಿಲ್ಲ.
ಬೆಳಿಗ್ಗೆ 07:20
ಬಿಟಿಎಂ ಕ್ಷೇತ್ರದ 172 ಮತಗಟ್ಟೆಯಲ್ಲಿ ಜನರು ಬೆಳಿಗ್ಗೆ ರಿಂದ ಮತ ಚಲಾಯಿಸಲು ಸರದಿಯಲ್ಲಿ ನಿಂತಿದ್ದಾರೆ.
ಬೆಳಿಗ್ಗೆ 07:10
ಕೇಂದ್ರ ಸಚಿವ ಸದಾನಂದ ಗೌಡ ಪುತ್ತೂರು ಕ್ಷೇತ್ರದಲ್ಲಿ ಮತ ಚಲಾಯಿಸಿದರು.
ಬೆಳಿಗ್ಗೆ 07:08
ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿಡಿರುವ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದ ಮತಗಟ್ಟೆಯಲ್ಲಿ ಮೊದಲ ಮತವನ್ನು ಹಾಕಿದರು.