ನವದೆಹಲಿ: ಮೇ.16 (ಬುಧವಾರ)ರಾತ್ರಿ ರಾಜ್ಯಪಾಲರು ಹೆಚ್ಚು ಮತ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಮ್ಮತಿ ಸೂಚಿಸುತ್ತಿದ್ದಂತೆಯೇ, ಪ್ರಮಾಣ ವಚನ ಸಮಾರಂಭಕ್ಕೆ ಅವಕಾಶ ನೀಡಕೂಡದು’ ಮತ್ತು ಬಹುಮತ ಸಾಬೀತು ಪಡಿಸಿದ ತಮಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದವು.


COMMERCIAL BREAK
SCROLL TO CONTINUE READING

ಬುಧವಾರ ತಡರಾತ್ರಿ 01:50 ರಿಂದ ಬೆಳಗ್ಗೆ 05:20ರವರೆಗೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಯಾವುದೇ ಆದೇಶ ನೀಡಲು ರಾಜ್ಯಪಾಲರಿಗೆ ಸಂವಿಧಾನ ಬದ್ಧ ವಿವೇಚನಾ ಅಧಿಕಾರ ಇದೆ. ರಾಷ್ಟ್ರಪತಿ ಮತ್ತು ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಬಹುದೇ ಹೊರತೂ, ತಡೆ ನೀಡುವ ಅಧಿಕಾರ ನ್ಯಾಯಪೀಠಕ್ಕೆ ಇಲ್ಲ. ರಾಜ್ಯಪಾಲರು ನೀಡಿರುವ ಸೂಚನೆಯಂತೆ ಬಿ.ಎಸ್ ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಯಾವುದೇ ರೀತಿ ತಡೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್‌.ಎ. ಬೋಬ್ಡೆ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ತ್ರಿಸದಸ್ಯ ಪೀಠ, ಸರ್ಕಾರ ರಚನೆಯ ಪ್ರಸ್ತಾವನೆಯೊಂದಿಗೆ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ಶಾಸಕರ ಬೆಂಬಲದ ಪತ್ರದ ಪ್ರತಿಯನ್ನು ಹಾಜರುಪಡಿಸುವಂತೆ ಸೂಚಿಸಿತು. ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.


ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರದಲ್ಲಿ ಯಾವ ಅಂಶ ಅಡಗಿದೆ ಎಂಬುದರ ಆಧಾರದಲ್ಲಿ ಶುಕ್ರವಾರ ಬೆಳಿಗ್ಗೆ 10.30ಕ್ಕೆ ವಿಚಾರಣೆ ಆರಂಭವಾಗಲಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಯಡಿಯೂರಪ್ಪ ಅವರ ನಡೆಯ ಕುರಿತು ಚರ್ಚೆ ನಡೆಯಲಿದೆ.
ವಿಧಾನಸಭೆಯಲ್ಲಿ ಬಹುಮತ ಸಾಬೀತಿಗಾಗಿ ಯಡಿಯೂರಪ್ಪ ಅವರಿಗೆ 15 ದಿನಗಳ ಕಾಲಾವಕಾಶ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ತೀರ್ಮಾನವನ್ನು ಮಾರ್ಪಡಿಸಿ, ಕಾಲಾವಕಾಶ ಕಡಿತಗೊಳಿಸುವ ಸಾಧ್ಯತೆಯೂ ಇದೆ.