ಅಕ್ರಮವಾಗಿ ಸಂಗ್ರಹಿಸಿದ್ದ 9000ಕ್ಕೂ ಅಧಿಕ ಮತದಾರರ ಗುರುತಿನ ಚೀಟಿ ಪತ್ತೆ; ಮುಂದೂಡಲಿದೆಯೇ ಆರ್ಆರ್ ನಗರ ಮತದಾನ?
ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಪಾರ್ಟ್ಮೆಂಟ್ ಒಂದರಲ್ಲಿ ಮಂಗಳವಾರ ಸುಮಾರು 9,746 ಮತದಾರರ ಗುರುತಿನ ಚೀಟಿ ಪತ್ತೆಯಾಗಿದ್ದು, ಚುನಾವಣಾ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ಕೆಲವೇ ದಿನ ಬಾಕಿ ಇರುವಂತೆಯೇ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಪಾರ್ಟ್ಮೆಂಟ್ ಒಂದರಲ್ಲಿ ಮಂಗಳವಾರ ಸುಮಾರು 9,746 ಮತದಾರರ ಗುರುತಿನ ಚೀಟಿ ಪತ್ತೆಯಾಗಿದ್ದು, ಚುನಾವಣಾ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಂಗಳವಾರ ತಡರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿರುವ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಅವರು, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಅಪಾರ್ಟ್ವೆುಂಟ್ ಒಂದರಲ್ಲಿ ಐದು ಲ್ಯಾಪ್ ಟಾಪ್, ಒಂದು ಪ್ರಿಂಟರ್, ಎರಡು ಟ್ರಂಕ್ ತುಂಬಾ ಮತದಾರ ಗುರುತಿನ ಚೀಟಿ ಪತ್ತೆಯಾಗಿದ್ದು, ಇವೆಲ್ಲವೂ ಅಸಲಿ ಗುರುತಿನ ಚೀಟಿಗಳಾಗಿವೆ. ಅಲ್ಲದೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಬಳಸುವ ‘ನಮೂನೆ–6’ ಅರ್ಜಿ ಒಂದು ಲಕ್ಷದಷ್ಟು ದೊರಕಿವೆ. ಅಪಾರ್ಟ್‌ಮೆಂಟ್ ಸಮುಚ್ಚಯದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ ಚುನಾವಣಾಧಿಕಾರಿ ಮಹೇಶ್ವರರಾವ್ ತನಿಖೆ ನಡೆಸಿದ್ದಾರೆ. ಆಯೋಗ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಆರ್.ಆರ್. ನಗರದಲ್ಲಿ 4,71,459 ಮತದಾರರಿದ್ದಾರೆ. ಈ ವರ್ಷ 44,837 ಮತದಾರರ ಹೆಸರು ಸೇರ್ಪಡೆಯಾಗಿದೆ. ರಾಜ್ಯದಲ್ಲಿ ಮತದಾರರ ಪ್ರಮಾಣ ಹೆಚ್ಚಳ ಸರಾಸರಿ ಶೇ. 6.04 ಇದ್ದರೆ, ಇಲ್ಲಿ ಶೇ. 10.37 ಇದೆ. ಈ ಫ್ಲ್ಯಾಟ್ನಲ್ಲಿ ಹಾಲಿ ಶಾಸಕರ ಕರಪತ್ರಗಳು ಸಹ ಸಿಕ್ಕಿವೆ. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದರು. ಮೂವರು ವೀಕ್ಷಕರ ನೇತೃತ್ವದಲ್ಲಿ ತನಿಖೆ ನಡೆದಿದೆ. ಶಾಂತಿಯುತ ಹಾಗೂ ಮುಕ್ತ ಚುನಾವಣೆಗೆ ಎಲ್ಲ ಕ್ರಮಗಳನ್ನು ಆಯೋಗ ಕೈಗೊಳ್ಳಲಿದೆ. ಅಕ್ರಮಗಳು ನಡೆದಿದ್ದರೆ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಏನಿದು ಘಟನೆ?
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್ ನಂಬರ್ 115ರಲ್ಲಿ ಗುರುತಿನ ಚೀಟಿಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಬಿಜೆಪಿ ಕಾರ್ಯಕರ್ತರು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಫ್ಲ್ಯಾಟ್‌ಗೆ ನುಗ್ಗಿ ಪರಿಶೀಲನೆ ಆರಂಭಿಸಿದ್ದರು. ಮತದಾರರ ಗುರುತಿನ ಚೀಟಿಗಳಿರುವುದು ಖಚಿತವಾದ ಕೂಡಲೇ ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಜಾಲಹಳ್ಳಿ ಪೊಲೀಸರು 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಅಪಾರ್ಟ್ಮೆಂಟ್ ಯಾರದ್ದು?
ಅಸಲಿಗೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮತದಾರರ ಗುರುತಿನ ಚೀಟಿ ದೊರೆತಿರುವ ಅಪಾರ್ಟ್ಮೆಂಟ್ ಬಿಜೆಪಿ ಮಾಜಿ ಕಾರ್ಪೊರೇಟರ್ ಮಂಜುಳಾ ನಂಜಾಮರಿ ಎಂಬುವರಿಗೆ ಸೇರಿದ ಫ್ಲ್ಯಾಟ್ ಅನ್ನು ರಾಕೇಶ್ ಎಂಬುವರು ಬಾಡಿಗೆಗೆ ಪಡೆದಿದ್ದಾರೆ ಎನ್ನಲಾಗಿದೆ. ಪಕ್ಷವೊಂದರ ಅಭ್ಯರ್ಥಿ ಪರವಿರುವ ಕೆಲ ಏಜೆಂಟರು, ಮತದಾರರಿಗೆ ಹಣದ ಆಮಿಷವೊಡ್ಡಿ ಗುರುತಿನ ಚೀಟಿಗಳನ್ನು ಪಡೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಾಂಗ್ರೆಸ್-ಬಿಜೆಪಿಯಿಂದ ಆರೋಪ ಪ್ರತ್ಯಾರೋಪ
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 9 ಸಾವಿರಕ್ಕೂ ಅಧಿಕ ಗುರುತಿನ ಚೀಟಿಗಳು ಪತ್ತೆಯಾಗುತ್ತಿದ್ದಂತೆ ರಾತ್ರಿಯಿಡೀ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಾಯಕರು ಒಂದರ ಹಿಂದೆ ಒಂದರಂತೆ ಪತಿಕಾಗೋಷ್ಟಿ ನಡೆಸಿ ಆರೋಪ-ಪ್ರತ್ಯಾರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಒಂದೆಡೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಕಾಂಗ್ರೆಸ್ ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಪ್ರಯತ್ನಿಸಿದೆ. ಈ ಕ್ಷೇತ್ರದ ಚುನಾವಣೆ ಕೂಡಲೇ ಮುಂದೂಡಬೇಕು. ಹೊಸದಾಗಿ ಚುನಾವಣಾ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಕೂಡ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ವೋಟರ್ ಐಡಿ ಸಿಕ್ಕಿ ಎಸ್ಎಲ್ ವಿ ಅಪಾರ್ಟ್ಮೆಂಟ್ ಬಿಜೆಪಿ ಮಾಜಿ ಕಾರ್ಪೊರೇಟರ್'ಗೆ ಸೇರಿದ್ದು ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಸುರ್ಜೆವಾಲಾ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ಪಿತೂರಿಯಲ್ಲಿ ಪಾಲ್ಗೊಂಡಿದ್ದು, ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಒಟ್ಟಾರೆ, ಅಕ್ರಮವಾಗಿ ಸಂಗ್ರಹಿಸಿದ್ದ 9 ಸಾವಿರಕ್ಕೂ ಅಧಿಕ ಮತದಾರರ ಗುರುತಿನ ಚೀಸಂಚಲನ ಮೂಡಿಸಿದ್ದು, ಮತದಾನ ಮುಂದೂಡುವಂತೆ ರಾಜಕೀಯ ಪಕ್ಷಗಳು ಪಟ್ಟು ಹಿಡಿದಿವೆ. ಈ ಸಂಬಂಧ ಪ್ರಕರಣದ ತನಿಖೆ ನಡೆಸುತ್ತಿರುವ ಚುನಾವಣಾ ಆಯೋಗ ಇಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.