ಮೈಸೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡುವುದಾಗಿ ಹೇಳಿ ಮಾತು ತಪ್ಪಿದ ಸಿದ್ದರಾಮಯ್ಯ ಅವರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸುವುದೇ ನನ್ನ ಪರಮ ಗುರಿ ಎಂದು ನಿವೃತ್ತ ಪೋಲಿಸ್ ಅಧಿಕಾರಿ ಹಾಗೂ ಕಾಂಗ್ರೆಸ್ ಮುಖಂಡ  ಎಲ್.ರೇವಣ ಸಿದ್ದಯ್ಯ ಕಿಡಿಕಾರಿದ್ದಾರೆ. 


COMMERCIAL BREAK
SCROLL TO CONTINUE READING

ಇಲ್ಲಿನ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮಾತಿಗೆ ಒಪ್ಪಿ ಕಾಂಗ್ರೆಸ್ ಬಾವುಟ ಹಿಡಿದು, ಪಕ್ಷಕ್ಕಾಗಿ ದುಡಿದ ನನಗೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ. 2013ರಿಂದಲೂ ನನ್ನನ್ನು ಮೂಲೆಗುಂಪು ಮಾಡುತ್ತಾ ಬಂದಿದ್ದರು. ಮನೆಯ ಸಾಕು ನಾಯಿಯ ರೀತಿಯಲ್ಲಿ ಸಿದ್ದರಾಮಯ್ಯ ನನ್ನನ್ನು ನಡೆಸಿಕೊಂಡರು. ಅಲ್ಲದೆ, ತಂದೆ-ಮಗ ಇಬ್ಬರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ, ನಾನು ಅಂದು ಕಾಂಗ್ರೆಸ್ ಪಕ್ಷದಲ್ಲೇ ಇದ್ದರೂ ಅಪ್ಪ-ಮಗ ನಾಮಪತ್ರ ಸಲ್ಲಿಸಿದ್ದರ ಬಗ್ಗೆ ಸೌಜನ್ಯಕ್ಕೂ ಮಾಹಿತಿ ನೀಡಲಿಲ್ಲ ಮಾಹಿತಿ ನೀಡಲಿಲ್ಲ ಎಂದು ರೇವಣ ಸಿದ್ದಯ್ಯ ಕಿಡಿಕಾರಿದರು. 


ಇನ್ನು, ಚುನಾವಣೆ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ನಿನ್ನೆಯೇ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದು, ಯಾವುದೇ ಪಕ್ಷಕ್ಕೆ ಸೇರುವುದಿಲ್ಲ. ಆದರೆ, ಸೂಕ್ತ ಹಾಗೂ ಸಮರ್ಥ ಎನಿಸುವ ಅಭ್ಯರ್ಥಿಗೆ ಬೆಂಬಲಿಸುತ್ತೇನೆ. ನಾನು ಪಕ್ಷಾತೀತವಾಗೇ ಇರುತ್ತೇನೆ. ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ತಮ್ಮ ಪರಮಗುರಿ ಎಂದೂ ರೇವಣ ಸಿದ್ದಯ್ಯ ಗುಡುಗಿದರು. 


ಮೈಸೂರಿನ ವರುಣಾ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ನಿವೃತ್ತ ಐಪಿಎಸ್ ಅಧಿಕಾರಿ ಎಲ್.ರೇವಣ ಸಿದ್ದಯ್ಯ ಅವರು 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಮತ ಯಾಚಿಸಿದ್ದರು. ಆ ಕ್ಷೇತ್ರದ ವೀರಶೈವ-ಲಿಂಗಾಯತ ಸಮಾಜದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ರೇವಣ್ಣಸಿದ್ದಯ್ಯ ಅವರು ಸಿದ್ದರಾಮಯ್ಯ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ತಮ್ಮನ್ನು ನಡೆಸಿಕೊಂಡಿರುವ ರೀತಿ ಬಗ್ಗೆ ಅಸಮಾಧಾನಗೊಂಡಿದ್ದ ರೇವಣ್ಣಸಿದ್ದಯ್ಯ ಅವರು ಶನಿವಾರ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು.