ಮೋದಿ ವರ್ಕ್ ಮೊಡ್ನಲ್ಲಿರದ ಮೊಬೈಲ್ ಫೋನ್ ಇದ್ದಂತೆ: ರಾಹುಲ್ ವ್ಯಂಗ್ಯ
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಚಾಲನೆಯಲ್ಲಿಲ್ಲದ ಮೊಬೈಲ್ ಪೋನ್ ಇದ್ದಂತೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಕೋಲಾರ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಚಾಲನೆಯಲ್ಲಿಲ್ಲದ ಮೊಬೈಲ್ ಪೋನ್ ಇದ್ದಂತೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಇಂದು ಕೋಲಾರದಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಎಲ್ಲಾ ಮೊಬೈಲ್ ಗಳಲ್ಲಿ 3 ಮೋಡ್ ಗಳಿರುತ್ತವೆ. ವರ್ಕ್ ಮಾಡ್, ಏರೋಪ್ಲೇನ್ ಮೋಡ್ ಮತ್ತು ಸ್ಪೀಕರ್ ಮೋಡ್. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊಬೈಲ್‌ನಲ್ಲಿ ಸ್ಪೀಕರ್ ಮೋಡ್ ಮತ್ತು ಏರೋಪ್ಲೇನ್ ಮೋಡ್ ಮಾತ್ರವೇ ಬಳಸುತ್ತಾರೆಯೇ ಹೊರತು ವರ್ಕ್ ಮೋಡ್ ಬಳಸಲ್ಲ'' ಎನ್ನುತ್ತಾ ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಮೋದಿ ಅವರ ವಿದೇಶ ಪ್ರವಾಸಗಳ ಬಗ್ಗೆ ವ್ಯಂಗ್ಯವಾಡಿದರು. ಅಲ್ಲದೆ, ತಮ್ಮ ಹೇಳಿಕಾಪ್ಟರ್ ಮತ್ತು ಎಸ್'ಯುವಿ ವಾಹನಗಳನ್ನು ಬಳಸುವ ಬದಲು ಆಮೆಗತಿಯ ''ಸೈಕಲ್ ಮೋಡ್'' ಬಳಸಿಕೊಂಡು ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದರು.
ಮೇ 12 ರಂದು ಚುನಾವಣೆ ನಡೆಯಲಿದ್ದು, ಕೇವಲ ನಾಲ್ಕೈದು ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಪ್ರಧಾನಿ ಮೋದಿ ಅವರು ಈ ಮೊದಲಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಯೋಜನೆಗಳನ್ನೇ ರೀ ಪ್ಯಾಕೇಜ್ ಮಾಡಿ ಜನರಿಗೆ ನೀಡಿದ್ದು, ಅದರ ಸಂಪೂರ್ಣ ಲಾಭ ಪಡೆಯುತ್ತಿದ್ದಾರೆ. ಅಲ್ಲದೆ, ಭ್ರಷ್ಟ ರಾಜಕಾರಣಿಗಳಿಗೆ ಟಿಕೆಟ್ ನೀಡಿ ಭ್ರಷ್ಟಾಚಾರವನ್ನು ಮತ್ತಷ್ಟು ಉತ್ತೇಜಿಸುತ್ತಿದ್ದಾರೆ ಎಂದು ರಾಹುಲ್ ಕಿಡಿ ಕಾರಿದರು.