ಬೆಂಗಳೂರು: ಇವಿಎಂ ತಾಂತ್ರಿಕ ದೋಷ ಹಿನ್ನಲೆಯಲ್ಲಿ ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯ ಹಂತದ ಗಾಂಧಿ ವಿದ್ಯಾಲಯ ಮತಗಟ್ಟೆ ಸಂಖ್ಯೆ 02 ಹಾಗೂ ಮತಗಟ್ಟೆ ಕೇಂದ್ರ ಬದಲಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಮನ್ನೇರಾಳದ ಮತಗಟ್ಟೆ ಸಂಖ್ಯೆ 20 ಮತ್ತು 21ರಲ್ಲಿ ಸ್ಥಗಿತಗೊಂಡಿದ್ದ ಮತದಾನ ಇಂದು ಬೆಳಿಗ್ಗೆಯಿಂದ ಮರುಮತದಾನ ಆರಂಭವಾಗಿದೆ.



COMMERCIAL BREAK
SCROLL TO CONTINUE READING

ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯ ಹಂತದ ಗಾಂಧಿ ವಿದ್ಯಾಲಯ ಮತಗಟ್ಟೆ ಸಂಖ್ಯೆ 02 ಇವಿಎಂ ಯಂತ್ರಗಳಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಇಲ್ಲಿ ಮತದಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮನ್ನೆರಾಳದ ಮತಗಟ್ಟೆ ಸಂಖ್ಯೆ 20 ಮತ್ತು 21 ರಲ್ಲಿ, ಮತಗಟ್ಟೆ ಸಂಖ್ಯೆ 21ರ  ಮತದಾರರು 20ನೇ ನಂಬರಿನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದರು. ಇದರಿಂದಾಗಿ ಇಲ್ಲಿನ ಮತದಾನ ಸ್ಥಗಿತಗೊಳಿಸಲಾಗಿತ್ತು. ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದ ಮೂರು ಮತಗಟ್ಟೆಗಳಲ್ಲಿ ಇಂದು(ಮೇ 14) ಮರು ಮತದಾನ ನಡೆಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್‌ ಹೇಳಿದ್ದರು.


ಮರು ಮತದಾನದಲ್ಲಿ ಮತದಾರರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಲು ಅನುಕೂಲವಾಗುವಂತೆ ಈ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳು, ರಾಜ್ಯ ಮತ್ತು ಕೇಂದ್ರ ಸ್ವಾಮ್ಯದ ಕೈಗಾರಿಕಾ ಸಂಸ್ಥೆಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಮತದಾರರಿಗೆ ಒಂದು ದಿನದ ವೇತನ ಸಹಿತ ರಜೆ ಘೋಷಿಸಲಾಗಿದೆ.