ಇಂದು ಜಯನಗರ ಚುನಾವಣೆ : ಚುರುಕುಗೊಂಡ ಮತದಾನ ಪ್ರಕ್ರಿಯೆ
ಬಿಜೆಪಿ ಅಭ್ಯರ್ಥಿ ಮತ್ತು ಶಾಸಕರಾಗಿದ್ದ ಬಿ.ಎನ್.ವಿಜಯಕುಮಾರ್ ಅವರ ನಿಧನದಿಂದ ರದ್ದಾಗಿದ್ದ ಜಯನಗರ ವಿಧಾನಸಭೆ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆಯುತ್ತಿದೆ.
ಬೆಂಗಳೂರು : ಬಿಜೆಪಿ ಅಭ್ಯರ್ಥಿ ಮತ್ತು ಶಾಸಕರಾಗಿದ್ದ ಬಿ.ಎನ್.ವಿಜಯಕುಮಾರ್ ಅವರ ನಿಧನದಿಂದ ರದ್ದಾಗಿದ್ದ ಜಯನಗರ ವಿಧಾನಸಭೆ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು, ಬಿರುಸಿನ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಜೂನ್ 16ರಂದು ಜಯನಗರ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕಾಂಗ್ರೆಸಿನಿಂದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಬಿ.ಎನ್.ವಿಜಯಕುಮಾರ್ ಅವರ ಸಹೋದರ ಬಿ.ಎನ್. ಪ್ರಹ್ಲಾದ್ ಸ್ಪರ್ಧೆಯಲ್ಲಿದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿಯೂ ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತಾದರೂ, ವಿಧಾನಸಭೆ ಚುನಾವಣೆ ನಡೆದು ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಬೆಂಬಲಿಸುತ್ತಿದೆ.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾನ ಬೆಳಿಗ್ಗೆಯಿಂದಲೇ ಆರಂಭವಾಗಿದ್ದು. ಎಲ್ಲಾ ಮತಗಟ್ಟೆಗಳಲ್ಲಿ ಮತದಾರರು ಸಾಲಿನಲ್ಲಿ ನಿಂತು ಮತಚಲಾಯಿಸುತ್ತಿದ್ದಾರೆ. ಇನ್ನು, ಜಯನಗರ ಕ್ಷೇತ್ರದ ನಿವಾಸಿಗಳಾದ ಕನ್ನಡ ಚಿತ್ರರಂಗದ ಅನೇಕರು ಬೆಳ್ಳಗೆಯಿಂದಲೇ ಮತದಾನ ಮಾಡುತ್ತಿದ್ದಾರೆ. ಜಯನಗರದ ಸುದರ್ಶನ ವಿದ್ಯಾಮಂದಿರದಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತದಾನ ಮಾಡಿದ್ದಾರೆ. ಸಾಲಿನಲ್ಲಿ ಜನರ ಜೊತೆಗೆ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತ ಚಲಾಯಿಸಲು ಮತದಾನ ಕೇಂದ್ರಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಸಾಮಾನ್ಯರಂತೆ ಕ್ಯೂ ನಲ್ಲಿ ನಿಂತು ಮತ ಚಲಾವಣೆ ಮಾಡಿದರು.
216 ಮತಗಟ್ಟೆಗಳಲ್ಲಿ ಮತದಾನ
ಜಯನಗರ ಕ್ಷೇತ್ರದಲ್ಲಿ ಒಟ್ಟು 2,03,184 ಮತದಾರರಿದ್ದಾರೆ. ಇವರಲ್ಲಿ 1,02,668 ಪುರುಷ ಮತದಾರರು ಮತ್ತು 1,00,501 ಮಹಿಳಾ ಮತದಾರರಾಗಿದ್ದಾರೆ. 15 ತೃತೀಯ ಲಿಂಗಿ ಮತದಾರರೂ ಇಲ್ಲಿದ್ದಾರೆ. ಕ್ಷೇತ್ರದ 216 ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. 40 ಸೂಕ್ಷ್ಮ ಮತಗಟ್ಟೆಗಳಿದ್ದು 350 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕ್ಷೇತ್ರದಲ್ಲಿ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ.
ಜಯಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ ಸೌಮ್ಯ ರೆಡ್ಡಿ
ಜಯನಗರದ ರಾಣಿ ಚೆನ್ನಮ್ಮ ಸ್ಟೇಡಿಯಂ ಮತಗಟ್ಟೆಗಳಿಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಮಾತನಾಡಿ, "ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಖಂಡಿತ ನಮಗೆ ಯಶಸ್ಸು ನೀಡುತ್ತಾರೆ. ಮತದಾರರು ಮತದಾನ ಮಾಡಬೇಕು ಎಂಬುದೆ ನಮ್ಮ ಮನವಿ" ಎಂದು ಹೇಳಿದರು.