ಇ.ವಿ. ಕ್ಷೇತ್ರದಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆ: ಸಚಿವ ಎಂ ಬಿ ಪಾಟೀಲ
ಕೆಂಗೇರಿ ಸಮೀಪದ ಮೈಲಸಂದ್ರದಲ್ಲಿ ಇರುವ ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿಯಲ್ಲಿ ಸ್ಥಾಪಿಸಿರುವ ಅತ್ಯಾಧುನಿಕ ಇ.ವಿ.ಮೊಬಿಲಿಟಿ ಉತ್ಕೃಷ್ಟತಾ ಮತ್ತು ನಾವೀನ್ಯತಾ ಕೇಂದ್ರವನ್ನು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಉದ್ಘಾಟಿಸಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸಂಸದ ಡಿ.ವಿ.ಸದಾನಂದ ಗೌಡ, ಶಾಸಕ ಎಸ್ ಟಿ ಸೋಮಶೇಖರ್ ಜತೆಯಲ್ಲಿದ್ದರು.
ಬೆಂಗಳೂರು: ಕೆಂಗೇರಿ ಸಮೀಪದ ಮೈಲಸಸಂದ್ರದಲ್ಲಿರುವ ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿ ಸ್ಥಾಪಿಸಿರುವ ಜಾಗತಿಕ ಮಟ್ಟದ ವಿದ್ಯುತ್ ಚಾಲಿತ ವಾಹನಗಳ ಉತ್ಕೃಷ್ಟತಾ ಮತ್ತು ನಾವೀನ್ಯತಾ ಕೇಂದ್ರವನ್ನು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಅವರು ಬುಧವಾರ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಅವರು, "ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಸಮರ್ಪಕ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈಗ ಈ ಕ್ಷೇತ್ರದಲ್ಲಿ ರಾಜ್ಯವು ಈಗಾಗಲೇ 25 ಸಾವಿರ ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸಿದೆ. ಮುಂಬರುವ ದಿನಗಳಲ್ಲಿ ಇನ್ನೂ 15 ಸಾವಿರ ಕೂಟಿ ರೂ. ಹೂಡಿಕೆ ಇಲ್ಲಿ ಸಾಧ್ಯವಾಗಲಿದೆ" ಎಂದರು.
ಮೊದಲಿಗೆ ನಮ್ಮಲ್ಲಿ 2017ರಲ್ಲಿ ವಿದ್ಯುತ್ ಚಾಲಿತ ವಾಹನಗಳ ನೀತಿಯನ್ನು ಜಾರಿಗೆ ತರಲಾಯಿತು. 2021ರಲ್ಲಿ ಇದನ್ನು ಜಾಗತಿಕ ಮಟ್ಟಕ್ಕೆ ತಕ್ಕಂತೆ ಪರಿಷ್ಕರಿಸಲಾಯಿತು. ರಾಜ್ಯದ ನೀತಿಯು ಇ.ವಿ.ಬ್ಯಾಟರಿ ಮತ್ತು ಕೋಶಗಳ ಉತ್ಪಾದನೆ, ಬಿಡಿಭಾಗಗಳ ತಯಾರಿಕೆ, ಒಇಎಂ (ಒರಿಜನಲ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್ಸ್), ಚಾರ್ಜಿಂಗ್ ಮತ್ತು ಪರೀಕ್ಷಾರ್ಥ ಮೂಲಸೌಲಭ್ಯ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಯ ಸಮಗ್ರ ಮೌಲ್ಯ ಸರಪಳಿಯನ್ನು ಒಳಗೊಂಡಿದೆ. ಹೀಗಾಗಿ, ಇ.ವಿ. ಕ್ಷೇತ್ರದಲ್ಲಿ ರಾಜ್ಯವು ದೇಶಕ್ಕೇ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ನುಡಿದರು.
ಇದನ್ನೂ ಓದಿ- ಕೆಂಗೇರಿ ಜೆಎಸ್ಎಸ್ ಕಾರ್ಯಕ್ರಮಕ್ಕೆ 'ನಮ್ಮ ಮೆಟ್ರೋ'ದಲ್ಲಿ ಪ್ರಯಾಣಿಸಿದ ಸಚಿವ ಎಂ ಬಿ ಪಾಟೀಲ
ರಾಜ್ಯದಲ್ಲಿ ಸದ್ಯಕ್ಕೆ 2 ಲಕ್ಷ ವಿದ್ಯುತ್ ಚಾಲಿತ ವಾಹನಗಳು ನೋಂದಣಿಯಾಗಿದ್ದು, ದೇಶಕ್ಕೆ ಮೂರನೇ ಸ್ಥಾನದಲ್ಲಿದ್ದೇವೆ. ಮುಂಬರುವ ದಿನಗಳಲ್ಲಿ ಇ.ವಿ.ವಾಹನಗಳು ಮತ್ತಷ್ಟು ಜನಪ್ರಿಯವಾಗಲಿದ್ದು, ಸುಗಮ, ತ್ವರಿತ, ಸುರಕ್ಷಿತ ಮತ್ತು ಮಾಲಿನ್ಯರಹಿತ ಸಂಚಾರವನ್ನು ಸಾಧ್ಯವಾಗಿಸಲಿವೆ. ಇನ್ನು ಒಂದು ದಶಕದಲ್ಲಿ ಸಾಂಪ್ರದಾಯಿಕ ಇಂಧನದ ವಾಹನಗಳು ನೇಪಥ್ಯಕ್ಕೆ ಸರಿಯಲಿವೆ ಎಂದು ಅವರು ವಿವರಿಸಿದರು.
ಕರ್ನಾಟಕದಲ್ಲಿ ಸದ್ಯಕ್ಕೆ ಈ ಕ್ಷೇತ್ರದಲ್ಲಿ 7 ಒಇಎಂ, ಬಿಡಿಭಾಗಗಳನ್ನು ತಯಾರಿಸುವ 50 ಕಂಪನಿಗಳು, 45 ನವೋದ್ಯಮಗಳು, ಅತ್ಯಧಿಕ ಆರ್ & ಡಿ ಕೇಂದ್ರಗಳು ಇವೆ. ಈ ಕ್ಷೇತ್ರವು ಸಾವಿರಾರು ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸುವ ಉಪಕ್ರಮವನ್ನು ಶಿಕ್ಷಣ ಕ್ರಮದಲ್ಲೇ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿಯಲ್ಲಿ ಸ್ಥಾಪಿಸಿರುವ ಉತ್ಕೃಷ್ಟತಾ ಮತ್ತು ನಾವೀನ್ಯತಾ ಕೇಂದ್ರವು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಇದು ತರಬೇತಿ, ಸಂಶೋಧನೆ, ಕೌಶಲಾಭಿವೃದ್ಧಿ, ಸಹಭಾಗಿತ್ವ ಮತ್ತು ಪರಿಪೋಷಣೆಗಳಿಗೆ ಉತ್ತಮ ವೇದಿಕೆಯಾಗಿ ಒದಗಿ ಬರಲಿದೆ. ಇದು ಅಂತಿಮವಾಗಿ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಚಿಮ್ಮುಹಲಗೆಯಾಗಿ ಕೆಲಸ ಮಾಡಲಿದೆ ಎಂದು ಪಾಟೀಲ ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ- ಸಜ್ಜನ್ ಜಿಂದಾಲ್ ನೇತೃತ್ವದಲ್ಲಿ ಐಕೆಎಫ್ ಪುನಾರಚನೆ: ಎಂ ಬಿ ಪಾಟೀಲ
ಕಾರ್ಯಕ್ರಮಕ್ಕೂ ಮೊದಲು ಸಚಿವರು ಉತ್ಕೃಷ್ಟತಾ ಕೇಂದ್ರದಲ್ಲಿರುವ 3ಡಿ ಎಕ್ಸ್ಪೀರಿಯನ್ಸ್ ಲ್ಯಾಬ್, ಸರ್ವೀಸ್ ಲ್ಯಾಬ್, ಬಿಡಿಭಾಗಗಳ ಲ್ಯಾಬ್ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಭೇಟಿ ನೀಡಿ, ಅಲ್ಲಿನ ಸಾಧನ-ಸಲಕರಣೆಗಳು ಮತ್ತು ಸೌಲಭ್ಯಗಳನ್ನು ವೀಕ್ಷಿಸಿ, ವಿವರಣೆ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸಂಸದ ಡಿ.ವಿ.ಸದಾನಂದ ಗೌಡ, ಶಾಸಕ ಎಸ್ ಟಿ ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.