ಮಂಗಳೂರು: ಯಾರದ್ದೋ ಹಣ ಇನ್ಯಾರಿಗೂ ಪಾಲು.. ಕೈಗೆ ಬಂದ 10 ಲಕ್ಷ  ರೂ. ಬಾಯಿಗೆ ಬರಲಿಲ್ಲ. ಹೌದು. ಬೀದಿಬದಿ ಕುಡುಕನಿಗೆ ಸಿಕ್ಕಿದ್ದ 10 ಲಕ್ಷ ರೂ. ಹಣದ ಗಂಟು ಅರ್ಧಗಂಟೆಯಲ್ಲೇ ಪೊಲೀಸ್ ಠಾಣೆ ಸೇರಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕುಟುಕನ ಮದ್ಯಚಟದಿಂದಲೇ ಭಾರೀ ಮೊತ್ತದ ಈ ಹಣ ಪೊಲೀಸ್ ಠಾಣೆ ಪಾಲಾಗಿದೆ. ವಾರ ಕಳೆದರೂ ವಾರಸುದಾರರಿಲ್ಲದೇ ದೊಡ್ಡ ಮೊತ್ತದ ಹಣ ಇನ್ನೂ ಸಹ ಪೊಲೀಸ್ ಠಾಣೆಯಲ್ಲಿಯೇ ಇದೆ.     


COMMERCIAL BREAK
SCROLL TO CONTINUE READING

ಅಷ್ಟಕ್ಕೂ ಈ ಘಟನೆಯಾದರೂ ಏನು ಅಂತೀರಾ? ಈ ಘಟನೆ ನಡೆದಿದ್ದು ನವೆಂಬರ್ 27ರಂದು. ಆ ದಿನ ಮಂಗಳೂರು ನಗರದ ಪಂಪ್ ವೆಲ್ ಬಳಿ ಶಿವರಾಜ್ ಎಂಬಾತ ಸಮೀಪದ ವೈನ್ ಶಾಪ್‌ನಲ್ಲಿ ಮದ್ಯ ಸೇವಿಸಿ ಹೊರಗಡೆ ಬೀಡಿ ಸೇದುತ್ತಾ ನಿಂತಿದ್ದ. ಆಗ ಹೊರಗಡೆ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಚೀಲವೊಂದು ಅನಾಥವಾಗಿ ಬಿದ್ದಿತ್ತು. ಇದನ್ನು ಶಿವರಾಜ್ ಹಾಗೂ ಮತ್ತೋರ್ವ ಕೂಲಿ ಕಾರ್ಮಿಕ ನೋಡಿದ್ದಾರೆ. ತಕ್ಷಣವೇ ಶಿವರಾಜ್ ಚೀಲವನ್ನು ಎತ್ತಿ ನೋಡಿದಾಗ 500, 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಕಂಡು ಬಂದಿದೆ. ಈ ಇಬ್ಬರೂ ನೋಟುಗಳ ಬಂಡಲ್ ನೋಡಿ ಶಾಕ್ ಆಗಿದ್ದಾರೆ.


ಇದನ್ನೂ ಓದಿ: ತನ್ನ ಅಸ್ತಿತ್ವಕ್ಕಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್: ಬಿಜೆಪಿ


ನೋಟುಗಳ ಬಂಡಲ್ ಕಂಡಿದ್ದೇ ತಡ ಈ ಇಬ್ಬರು ಮತ್ತೆ ಮದ್ಯ ಕುಡಿಯುವ ಸೆಳೆತಕ್ಕೊಳಗಾಗಿದ್ದಾರೆ. ಬಂಡಲ್‌ನಿಂದ 2 ನೋಟು ಎಳೆದು ಮತ್ತೆ ವೈನ್ ಶಾಪ್‌ನೊಳಗೆ ಕಾಲಿಟ್ಟಿದ್ದಾರೆ. ಬಳಿಕ ಹೊರ ಬಂದು ಅನತಿ ದೂರ ಸಾಗಿದ್ದಾರೆ. ಆಗ ಜೊತೆಗಿದ್ದ ಕೂಲಿ ಕಾರ್ಮಿಕ ತನಗೇನು ಇಲ್ಲವೇ ಎಂದಾಗ 2000, 500 ರೂ. ಮುಖಬೆಲೆಯ ಬಂಡಲ್ ಒಂದನ್ನು ಶಿವರಾಜ್ ಆತನ ಕೈಗೆ ನೀಡಿದ್ದಾನೆ. ಉಳಿದ ನೋಟುಗಳ ಕಂತೆಯನ್ನು ಹಿಡಿದು ಮುಂದಕ್ಕೆ ಹೋಗಲಾಗದ ಶಿವರಾಜ್ ಮತ್ತೆ ವೈನ್ ಶಾಪ್‌ಗೆ ನುಗ್ಗಿ ಕಂಠಪೂರ್ತಿ ಮದ್ಯ ಇಳಿಸಿದ್ದಾನೆ. ಅಲ್ಲಿಂದ ಹೊರ ಬರುವಾಗ ಯಾರೋ ನೀಡಿದ ಮಾಹಿತಿ ಮೇರೆಗೆ ಕಂಕನಾಡಿ ಠಾಣೆ ಪೊಲೀಸರು ಕುಡುಕ ಅಸಾಮಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.


ವಿಚಾರಣೆ ವೇಳೆ ತಾನು ಒಂದು ಬಂಡಲ್ ಹಣವನ್ನು ಕೂಲಿ ಕಾರ್ಮಿಕನಿಗೆ ನೀಡಿದ್ದಾಗಿ ಕುಡುಕ ಅಸಾಮಿ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಎಷ್ಟು ಹುಡಕಾಡಿದರೂ ಆ ಕೂಲಿಕಾರ್ಮಿಕ ಪತ್ತೆಯಾಗಿಲ್ಲ. ಇದೀಗ ಹಣ ಕಂಕನಾಡಿ ಪೊಲೀಸ್ ಠಾಣೆಯಲ್ಲಿದೆ. ಆದರೆ ಈವರೆಗೆ ಹಣದ ವಾರಸುದಾರರ ಪತ್ತೆಯಿಲ್ಲ, ಈ ಬಗ್ಗೆ ದೂರೂ ದಾಖಲಾಗಿಲ್ಲ. ಈವರೆಗೆ ಪೊಲೀಸರು ಸಹ ಪ್ರಕರಣ ದಾಖಲಿಸಿಲ್ಲವೆಂದು ಹೇಳಲಾಗುತ್ತಿದೆ.


ಇದನ್ನೂ ಓದಿ: BBMP Election : ಬಿಜೆಪಿಗೆ ಸೋಲಿನ ಭಯವೇ ಬಿಬಿಎಂಪಿ ಚುನಾವಣೆ ಮುಂದೂಡುಕೆಗೆ ಕಾರಣ!


ಮೆಕ್ಯಾನಿಕ್ ಆಗಿರೋ ಶಿವರಾಜ್ ಕುಡಿತದ ದಾಸನಾಗಿದ್ದಾನೆ. ಈತನ ಪತ್ನಿ‌ ಮೃತಪಟ್ಟಿದ್ದು, ಇದ್ದ ಓರ್ವ ಪುತ್ರಿ ಪಿಯುಸಿ ಓದುತ್ತಿದ್ದಾಳೆ. ಮನೆಗೆ ಹೋಗದೇ ಹೊಟೇಲ್‍ನಲ್ಲಿ ಚಹಾ, ತಿಂಡಿ ಸೇವಿಸಿ, ಬಸ್‍ಗಳಲ್ಲೇ ನಿದ್ದೆ ಮಾಡುತ್ತಾ ಕಾಲ ಕಳೆಯುತ್ತಿದ್ದಾನೆ. ಈ ಮಧ್ಯೆ ಅದೃಷ್ಟವೆಂಬಂತೆ ಸಿಕ್ಕಿದ ಹಣ ಇದೀಗ ಪೊಲೀಸ್ ಠಾಣೆ ಸೇರಿದೆ. ಅತ್ತ ಪೊಲೀಸರು ಒಂದು ಬಂಡಲ್ ಕೊಂಡು ಹೋದ ವ್ಯಕ್ತಿಯನ್ನು ಕರೆದುಕೊಂಡು ಬಂದ್ರೆ ಹಣ ನೀಡುತ್ತೇವೆ ಅಂತಿದ್ದಾರಂತೆ. ಇದು ಹುಂಡಿ ಹಣನಾ..? ಅಥವಾ ಬೇರೆ ಹಣನಾ..? ಈ ಬಗ್ಗೆ ಪಾರದರ್ಶಕವಾಗಿ ತನಿಖೆ ‌ನಡೆಯಬೇಕಷ್ಟೇ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.