ಭಾರತದಲ್ಲಿ ಹಬ್ಬಗಳಿಗೆ ಹೆಚ್ಚಿನ ಮಹತ್ವವಿದೆ. ಭಾರತೀಯರು ದೇವರನ್ನು ಹೆಚ್ಚಾಗಿ ನಂಬುತ್ತಾರೆ. ಅದರಲ್ಲೂ ಎಲ್ಲರ ಮೆಚ್ಚಿನ ದೈವ 'ಗಣಪ'. ಯಾವುದೇ ಸಮಾರಂಭ ಗಣಪನ ಪೂಜೆಯಿಲ್ಲದೆ ಆರಂಭವಾಗುವುದೇ ಇಲ್ಲ. ದೇವತೆಗಳಲ್ಲಿ ಅಗ್ರ ಸ್ಥಾನ, ಮೊದಲ ಪೂಜೆ ಸಲ್ಲುವುದು 'ವಿಘ್ನೇಶ್ವರ'ನಿಗೆ. 


COMMERCIAL BREAK
SCROLL TO CONTINUE READING

ಹಬ್ಬಗಳ ಸಾಲಿನಲ್ಲಿ ಗೌರಿ-ಗಣೇಶ ಹಬ್ಬಕ್ಕೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಭಾರತದಾದ್ಯಂತ ಆಚರಿಸಲ್ಪಡುವ ಹಬ್ಬ ಗಣೇಶ ಹಬ್ಬ. ಹಿರಿಯರು-ಕಿರಿಯರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸುವ ಹಬ್ಬ ಇದಾಗಿದೆ. ಗಣೇಶ ಹಬ್ಬದ ಹಿಂದಿನ ದಿನ ಭಾದ್ರಪದ ಶುಕ್ಲ ತದಿಗೆಯಂದು ಪಾರ್ವತಿ ದೇವಿಯನ್ನು ಸ್ವರ್ಣಗೌರಿ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಇದಕ್ಕೆ ಸಾಕಷ್ಟು ತಯಾರಿ ಮಾಡುವ ಅಗತ್ಯವಿದೆ. ಗೌರಿ ಪೂಜೆಯಲ್ಲಿ ಬಾಗಿನಕ್ಕೆ ಬಹಳ ಮಹತ್ವದ ಸ್ಥಾನವಿದೆ.


ಮದುವೆಯಾದವರು ಅವರ ಮಾಂಗಲ್ಯಭಾಗ್ಯ ದೀರ್ಘಕಾಲ ಉಳಿಯಲೆಂದು, ಮದುವೆಯಾಗದ ಹೆಣ್ಣು ಮಕ್ಕಳು ಸರ್ವ ಸಂಪನ್ನನಾದ ಪತಿ ದೊರೆಯಲೆಂದು ಈ ವ್ರತವನ್ನು ಆಚರಿಸುತ್ತಾರೆ.


ಸುಮಂಗಲಿಯರು ಪ್ರಾತಃಕಾಲದಲ್ಲಿ ಎದ್ದು ತಲೆಯಿಂದ ಸ್ನಾನಮಾಡಿ, ಹೊಸ ಉಡುಪು ಧರಿಸಿ ಅರಿಶಿನದಗೌರಿ ಇಟ್ಟು ಪೂಜಿಸುತ್ತಾರೆ. ಪೂಜೆಯ ನಂತರ ಬಾಗಿನ ನೀಡುವುದು ಈ ಹಬ್ಬದ ವಿಶೇಷ... ಇದನ್ನು 'ಗೌರಿ ಬಾಗಿನ' ಎಂದು ಕರೆಯುತ್ತಾರೆ. ಗೌರಿ ಬಾಗಿನದ ತಯಾರಿಯನ್ನು ಗೌರಿ ಹಬ್ಬದ ಹಿಂದಿನ ದಿನವೇ ಮಾಡಿಕೊಳ್ಳಲಾಗುತ್ತದೆ.


ಇದಕ್ಕೆ ಬೇಕಾದ ಅಗತ್ಯ ವಸ್ತುಗಳ ಪಟ್ಟಿ ಹೀಗಿದೆ: 


* ಬಿದಿರಿನ ಮೊರ - 1 ಜೊತೆ 
* ಬಾಳೆ ಎಲೆ - 1
* ವಿಳ್ಯದೆಲೆ - 2 
* ಅಡಿಕೆ 
* ಅರಿಶಿನ ಕುಂಕುಮದ ಪೊಟ್ಟಣ
* ಗಾಜಿನ ಬಳೆ
* ಕರಿಮಣಿ ಬಿಚ್ಚಾಲೆ(ಕರಿಮಣಿ ಬಿಚ್ಚಾಲೆಯ ಪೂರ್ಣ ಸೆಟ್)
* ಅರಿಶಿನದ ಕೊಂಬು 
* ಚಿಕ್ಕ ಅಚ್ಚು ಬೆಲ್ಲ - 1 
* ರವಿಕೆ - 1
* ತೆಂಗಿನ ಕಾಯಿ - 1
* ಒಂದು ಬಗೆಯ ಹಣ್ಣು 
* ಒಂದು ಬಗೆಯ ತರಕಾರಿ 
* ಹುಣಸೆಹಣ್ಣು ಸ್ವಲ್ಪ
* ಗೆಜ್ಜೆ ವಸ್ತ್ರ 


ಧಾನ್ಯಗಳು ಸಮ ಪ್ರಮಾಣದಲ್ಲಿ 
 * ಅಕ್ಕಿ, ತೊಗರಿಬೇಳೆ, ಉದ್ದಿನ ಬೇಳೆ, ಕಡಲೆಬೇಳೆ, ಹೆಸರುಬೇಳೆ, ಗೋಧಿ, ಕಲ್ಲುಪ್ಪು 


ಮೊರದ ಬಾಗಿನ ತಯಾರಿಸುವ ವಿಧಾನ :


ಬಿದಿರಿನಿಂದ ಮಾಡಿದ ಮೊರವನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ನೆರಳಿನಲ್ಲಿ ಒಣಗಿಸಿ. ಒಣಗಿದ ನಂತರ ಅರಿಶಿನ-ಕುಂಕುಮ ಹಚ್ಚಿಡಿ. ಗೌರಿ ಹಬ್ಬದ ಹಿಂದಿನ ರಾತ್ರಿ ಮೊರದ ಮೇಲೆ ಒಂದು ಬಾಳೆ ಎಲೆ ಇರಿಸಿ ಅದರಲ್ಲಿ ಮೇಲೆ ತಿಳಿಸಿದ ಸಾಮಾನುಗಳನ್ನು ಜೋಡಿಸಿ, ನಿಮ್ಮ ಶಕ್ತಾನುಸಾರ ದಕ್ಷಿಣೆಯನ್ನು ಇಡಿ, ನಂತರ ಅದರ ಮೇಲೆ ಮತ್ತೊಂದು ಮೊರದಿಂದ ಮುಚ್ಚಿ ಬಾಗಿನವನ್ನು ತಯಾರಿಸಿ.