ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಕುರಿತ ಆಸಕ್ತಿಕರ ಸಂಗತಿಗಳು
ಆಧುನಿಕ ಇತಿಹಾಸದಲ್ಲಿ ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿ ಜನಪ್ರಿಯತೆಯನ್ನು ಪಡೆದವರು. ಇದರ ಜೊತೆಗೆ ಅವರೊಬ್ಬ ಅಪ್ಪಟ ಸ್ತ್ರೀವಾದಿ, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದ ಸಾಮಾಜಿಕ ಸುಧಾರಕಿಯಾಗಿದ್ದರು. ಸಾವಿತ್ರಿಬಾಯಿ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಬಾಲಕಿಯರ ಮೊದಲ ಶಾಲೆಯನ್ನು ಪ್ರಾರಂಭಿಸಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದರು.
ಕೇವಲ ಮೇಲ್ವರ್ಗದ ಜಾತಿ ವ್ಯಕ್ತಿಗಳಿಗೆ ಮೀಸಲಾಗಿದ್ದ ಶಿಕ್ಷಣವನ್ನು ಶೋಷಿತ ಸಮುದಾಯಗಳಿಗೆ ಮುಟ್ಟಿಸುವಲ್ಲಿ ಶ್ರಮಿಸಿದರು. ಅದರ ಫಲವಾಗಿ ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಅಸ್ಪೃಶ್ಯ ಬಾಲಕಿಯರಿಗಾಗಿ ಶಾಲೆಯನ್ನು ಹುಟ್ಟುಹಾಕಿದರು. ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸುಧಾರಣೆಗಳತ್ತ ಗಮನಹರಿಸುವ ಮೂಲಕ ಕೆಳವರ್ಗದ ಮತ್ತು ಮಹಿಳೆಯರ ಉನ್ನತಿಗಾಗಿ ಹೆಚ್ಚಿನ ಕೊಡುಗೆ ನೀಡಿದರು. ಕೇವಲ ಇಷ್ಟೇ ಅಲ್ಲದೆ ಸಾವಿತ್ರಿಬಾಯಿ ವಿಧವೆಯರ ಪುನರ್ವಿವಾಹದ ಪರವಾಗಿ ಧ್ವನಿ ಎತ್ತಿದರು ಮತ್ತು ಬಾಲ್ಯವಿವಾಹವನ್ನು ರದ್ದುಗೊಳಿಸಲು ಹೋರಾಡಿದರು. ಆ ಮೂಲಕ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಗಾಗಿ ಅವರು ನೀಡಿದ ಕೊಡುಗೆ ಭಾರತೀಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ.
ಸೆಪ್ಟೆಂಬರ್ 5, ಈ ದಿನ ಶಿಕ್ಷಕರ ದಿನಾಚರಣೆ, ಸಾಮಾನ್ಯವಾಗಿ ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನಾಚರಣೆಯನ್ನೇ ಈ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಅವರಿಗೂ ಮೊದಲು ದೇಶದಲ್ಲಿ ಜನ ಸಾಮಾನ್ಯರಲ್ಲಿ ಹಾಗೂ ಶೋಷಿತ ಸಮುದಾಯದಲ್ಲಿ ಶಿಕ್ಷಣದ ಕ್ರಾಂತಿಗೆ ಕಾರಣರಾದವರೆಂದರೆ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ. ಅವರು ಜನವರಿ 3, 1831 ರಂದು ಸತಾರಾ ಜಿಲ್ಲೆಯ ಮಹಾರಾಷ್ಟ್ರದ ನೈಗಾಂವ್ ಗ್ರಾಮದಲ್ಲಿ ಮೂಲತಃ ಮಹಾರಾಷ್ಟ್ರದ ಕೆಳ ಸಮುದಾಯಕ್ಕೆ ಸೇರಿದ ಮಾಲಿ ಜಾತಿಯಲ್ಲಿ ಜನಿಸಿದರು. ಆಗ ಕೆಳಸಮುದಾಯ ಮತ್ತು ಮಹಿಳೆಯರಿಗೆ ಶಿಕ್ಷಣವೇನ್ನುವುದು ಕೈಗುಟಕದ ಕನಸಾಗಿತ್ತು. ಇಂತಹ ಸಂದರ್ಭದಲ್ಲಿ ಶಿಕ್ಷಣದ ಕ್ರಾಂತಿ ಹುಟ್ಟು ಹಾಕಿದವರು ಸಾವಿತ್ರಿಬಾಯಿ ಪುಲೆ. ಕೇವಲ 10 ವರ್ಷ ವಯಸ್ಸಿನವರಿದ್ದಾಗ ಜ್ಯೋತಿ ಬಾಪುಲೇಯವರನ್ನು ಸಾವಿತ್ರಿ ಮದುವೆಯಾದರು. ಆದರೆ ಈ ದಂಪತಿಗೆ ಮಕ್ಕಳಾಗಲಿಲ್ಲ, ಈ ಹಿನ್ನಲೆಯಲ್ಲಿ ಆ ದಂಪತಿಗಳು ಮುಂದೆ ಬಾಲಹತ್ಯಾ ಪ್ರತಿಬಂಧಕ ಗೃಹದಲ್ಲಿ ಬ್ರಾಹ್ಮಣ ವಿಧವೆಗೆ ಜನಿಸಿದ ಯಶವಂತರಾವ್ ಎನ್ನುವ ಬಾಲಕನ್ನು ದತ್ತು ಪಡೆದರು.
ಸಾವಿತ್ರಿಬಾಯಿ ಅವರು ಗರ್ಭಿಣಿ ವಿಧವೆಯರು ಮತ್ತು ಅತ್ಯಾಚಾರಕ್ಕೊಳಗಾದವರಿಗೆ ಸಹಾಯ ಮಾಡಲು ಬಲ್ಹತ್ಯಾ ಪ್ರತಿಬಂಧಕ್ ಗೃಹವನ್ನು ಪ್ರಾರಂಭಿಸಿದರು, ಒಂದು ವೇಳೆ ತಾಯಂದಿರು ಬಯಸದಿದ್ದರೆ ಅಥವಾ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಮಕ್ಕಳನ್ನು ಸಹ ನೋಡಿಕೊಳ್ಳುತ್ತಿದ್ದರು.
ಪತಿ ಜ್ಯೋತಿಬಾ ಪುಲೆ ಅವರ ಸಹಾಯದಿಂದಾಗಿ ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿಯೇ ಪೂರೈಸಿದ ಸಾವಿತ್ರಿಬಾಯಿ ನಂತರ ಸ್ಕಾಟಿಷ್ ಮಿಷನರಿ ಶಾಲೆಯಲ್ಲಿ ಏಳನೇ ತರಗತಿವರೆಗೆ ಅಧ್ಯಯನ ಕೈಗೊಂಡರು. ಇದಾದ ನಂತರ ಹೆಚ್ಚಿನ ಶಿಕ್ಷಣವನ್ನು ಅವರು ಜ್ಯೋತಿಬಾ ಅವರ ಸ್ನೇಹಿತರಾದ ಸಖರಂ ಯಶ್ವಂತ್ ಪರಂಜಪೆ ಮತ್ತು ಕೇಶವ್ ಶಿವರಾಮ್ ಭಾವಲ್ಕರ್ ಅವರ ಹತ್ತಿರ ಪಡೆದರು. ಇದೇ ವೇಳೆ ಸಾವಿತ್ರಿಬಾಯಿ ಎರಡು ಬೋಧನಾ ಕೋರ್ಸ್‌ಗಳನ್ನು ಸಹ ಪೂರ್ಣಗೊಳಿಸಿದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಸಾವಿತ್ರಿಬಾಯಿ ಪುಣೆಯಲ್ಲಿ ಜ್ಯೋತಿಬಾ ಅವರ ಮಾರ್ಗದರ್ಶಕ ಸಗುನಾಬಾಯ್ ಅವರೊಂದಿಗೆ ಮಕ್ಕಳಿಗೆ ಕಲಿಸಲು ಪ್ರಾರಂಭಿಸಿದರು. ನಂತರ ಈ ಮೂವರು ಭೀಡೆ ವಾಡಾದಲ್ಲಿ ಶಾಲೆಯನ್ನು ಪ್ರಾರಂಭಿಸಿದರು, ಫುಲೆ ದಂಪತಿಗಳ ಕಾರ್ಯಕ್ಕೆ ಯಾವಾಗಲೂ ಬೆಂಬಲಿಸುತ್ತಿದ್ದ ತಾತ್ಯಾ ಸಾಹೇಬ್ ಬಿಡೆ ಅವರ ಮನೆಯಲ್ಲಿ ಶಿಕ್ಷಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.
1851 ರ ಹೊತ್ತಿಗೆ ಬಾಲಕಿಯರಿಗೆ ಪುಲೆ ದಂಪತಿಗಳು ಮೂರು ಶಾಲೆಗಳನ್ನು ತೆರೆದರು. ಇದರಲ್ಲಿ ಸುಮಾರು 150 ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿತ್ತು. ವಿಶೇಷವೆಂದರೆ ಕಡಿಮೆ ದಿನಗಳಲ್ಲಿ ಈ ಶಾಲೆಗಳು ಸರ್ಕಾರಿ ಶಾಲೆಗಳಿಗಿಂತಲೂ ಹೆಚ್ಚಿನ ಖ್ಯಾತಿ ಪಡೆದವು. ವಿಶೇಷವೇನೆಂದರೆ ಈ ಶಾಲೆಗಳು ಪುರುಷ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಮಹಿಳಾ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಲಾಯಿತು. ಆದರೆ ಸಾವಿತ್ರಿಬಾಯಿ ಇಂತಹ ಸಮಾಜಪರ ಕಾರ್ಯಗಳು ಆಗಿನ ಸಂಪ್ರದಾಯವಾದಿಗಳಿಗೆ ಹಿಡಿಸಲಿಲ್ಲ. ಬಹುಶಃ ಇದೇ ಕಾರಣಕ್ಕಾಗಿ ಅವರು ವಿದ್ಯಾರ್ಥಿಗಳಿಗೆ ಕಲಿಸಲು ಹೋದಾಗ ಆಗಾಗ್ಗೆ ಸಗಣಿ ಹಾಗೂ ಕಲ್ಲುಗಳನ್ನು ಅವರಿಗೆ ಎಸೆಯುತ್ತಿದ್ದರು. ಇನ್ನೊಂದೆಡೆ ಸ್ವತಃ ದಂಪತಿಗಳ ಪೋಷಕರು ಕೂಡ ಪ್ರೋತ್ಸಾಹ ನೀಡಲಿಲ್ಲ. ಇದರಿಂದಾಗಿ ಅವರು ಮನೆಯಿಂದ ಹೊರಗೆ ಉಳಿಯಬೇಕಾಗಿ ಬಂತು.
ಇದಾದ ನಂತರ ಜ್ಯೋತಿಬಾ ಅವರ ಸ್ನೇಹಿತ ಉಸ್ಮಾನ್ ಶೇಖ್ ಅವರ ಮನೆಗೆ ತೆರಳಿದರು. ಉಸ್ಮಾನ್‌ಗೆ ಫಾತಿಮಾ ಬೇಗಂ ಶೇಖ್ ಎಂಬ ಸಹೋದರಿ ಇದ್ದಳು, ಆಗಲೇ ಶಿಕ್ಷಣ ಪಡೆದಿದ್ದ ಮತ್ತು ಸಾವಿತ್ರಿಬಾಯಿಯ ಜೀವಮಾನದ ಒಡನಾಡಿಯಾಗಿದ್ದಳು. ಶೇಖ್ ಅವರನ್ನು ಭಾರತದ ಮೊದಲ ಮಹಿಳಾ ಮುಸ್ಲಿಂ ಶಿಕ್ಷಕಿ ಎಂದು ಪರಿಗಣಿಸಲಾಗಿದೆ, ಮತ್ತು ಅವರು ಸಾವಿತ್ರಿಬಾಯಿ ಅವರೊಂದಿಗೆ ಸೇರಿ 1849 ರಲ್ಲಿ ಶೇಖ್ ಅವರ ಮನೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಎರಡು ಶೈಕ್ಷಣಿಕ ಟ್ರಸ್ಟ್‌ಗಳು, ಸ್ಥಳೀಯ ಸ್ತ್ರೀ ಶಾಲೆ, ಪುಣೆ ಮತ್ತು ಸೊಸೈಟಿ ಫಾರ್ ಪ್ರೋಮೋಟಿಂಗ್ ದಿ ಎಜುಕೇಶನ್ ಆಫ್ ಮಹರ್ಸ್, ಮಾಂಗ್ಸ್, ಮತ್ತು ಎಟ್ಸೆಟೆರಾಸ್ ನ್ನು 1850 ರ ದಶಕದಲ್ಲಿ ದಂಪತಿಗಳು ಪ್ರಾರಂಭಿಸಿದರು. ಪುಲೆ ದಂಪತಿಗಳಿಬ್ಬರು ಸೇರಿ ತಮ್ಮ ಜೀವಿತಾವಧಿಯಲ್ಲಿ ಒಟ್ಟು 18 ಶಾಲೆಗಳನ್ನು ತೆರೆದರು. ಮುಂದೆ ಪುಲೆ ದಂಪತಿಗಳ ಅಕಾಲಿಕ ಮರಣದ ನಂತರ ಶಾಲೆಗಳನ್ನು ಫಾತಿಮಾ ಬೇಗಂ ನೋಡಿಕೊಂಡರು. ಸಾವಿತ್ರಿಬಾಯಿಯವರ ಈ ಎಲ್ಲ ಸಾಮಾಜಿಕ ಕಾರ್ಯಗಳ ನಡುವೆಯೂ ಕವಿಯತ್ರಿ ಕೂಡ ಆಗಿದ್ದರು.ಗೋ, ಗೆಟ್ ಎಜುಕೇಶನ್ ಎಂಬ ಕವಿತೆ ಕೆಳ ಜಾತಿಯವರು ತಮ್ಮನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಶಿಕ್ಷಣ ಒಂದೇ ಮಾರ್ಗ ಎನ್ನುವ ಸಂದೇಶವನ್ನು ಸಾರಿದರು.
ಇನ್ನು ಮಹಾರಾಷ್ಟ್ರದಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ, ಸಾವಿತ್ರಿಬಾಯಿ ಮತ್ತು ಅವರ ಮಗ ಯಶ್ವಂತ್ ಅವರೊಂದಿಗೆ 1897 ರಲ್ಲಿ ಪೀಡಿತರನ್ನು ನೋಡಿಕೊಳ್ಳಲು ಕ್ಲಿನಿಕ್ ತೆರೆದರು. ಕ್ಲಿನಿಕ್ ಪ್ಲೇಗ್ ನಿಂದ ಮುಕ್ತವಾದ ಪುಣೆಯ ಹೊರವಲಯ ಪ್ರದೇಶದಲ್ಲಿತ್ತು. ಆದರೆ ಪಾಂಡುರಾಂಗ್ ಬಾಬಾಜಿ ಗಾಯಕ್ವಾಡ್ ಅವರ ಚಿಕ್ಕ ಮಗ ಪ್ಲೇಗ್‌ನಿಂದ ಬಳಲುತ್ತಿದ್ದಾಗ ಸಾವಿತ್ರಿಬಾಯಿ ಆ ಬಾಲಕನನ್ನು ಕ್ಲಿನಿಕ್ ಗೆ ಕರೆದೊಯ್ದರು. ಆದರೆ ದುರದೃಷ್ಟವಶಾತ್ ಈ ವೇಳೆ ಅವರಿಗೆ ಪ್ಲೇಗ್ ತಗುಲಿ ಮಾರ್ಚ್ 10, 1897 ರಂದು ನಿಧನರಾದರು.